ಪಾಲ್ಘರ್,ನ.23– ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮನೆಯೊಂದರಲ್ಲಿ ದರೋಡೆ ಮಾಡುತ್ತಿದ್ದ ಕರ್ನಾಟಕ ಮೂಲದ ಮೂವರನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಶೋಕ್ ಅಲಿಯಾಸ್ ಬಾಬು ರಾಜು ಶಿಂಧೆ, ಅಬ್ದುಲ್ ರವೂಫ್ ಹಶಿ ಮತ್ತು ರಿತಿಕ್ ರವಿ ಬೆಳಂಗಿ ಬಂಧಿತರು. ಇವರೆಲ್ಲರೂ ಕರ್ನಾಟಕದ ಬೀದರ್ ಜಿಲ್ಲೆಯ ನಂದಗಾಂವ್ ಗ್ರಾಮದವರಾಗಿದ್ದಾರೆ.
ನ.18ರಂದು ವಸಾಯಿ ಪ್ರದೇಶದ ಸತಿವಲಿಯಲ್ಲಿರುವ ಮನೆಯಲ್ಲಿ ದರೋಡೆ ನಡೆದಿತ್ತು. ಈ ಕುರಿತು ಮಹಿಳೆಯೊಬ್ಬರು ಠಾಣೆಗೆ ದೂರು ನೀಡಿದ್ದರು.
ತನ್ನ ಮಗನೊಂದಿಗೆ ಮನೆಯಲ್ಲಿದ್ದಾಗ ಮೂವರು ಅಪರಿಚಿತ ವ್ಯಕ್ತಿಗಳು ಮನೆಗೆ ನುಗ್ಗಿ ನನಗೂ ಮತ್ತು ಮಗನ ಕುತ್ತಿಗೆಗೆ ಚಾಕುಗಳನ್ನು ಹಿಡಿದು ಬೆದರಿಸಿ, ಮನೆಯಲ್ಲಿದ್ದ ಚಿನ್ನಾಭರಣಗಳು ಮತ್ತು ಮೊಬೈಲ್ ಫೋನ್ ಅನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ವೇಳೆ ತನ್ನ ಕೈಗೆ ಗಾಯವಾಗಿದೆ ಎಂದು ಮಹಿಳೆ ತಿಳಿಸಿದ್ದಾರೆ.
ದರೋಡೆ ನಂತರ ಆರೋಪಿಗಳು ಕರ್ನಾಟಕದ ಬೀದರ್ ಜಿಲ್ಲೆಯ ನಂದಗಾಂವ್‌ಗೆ ಪರಾರಿಯಾಗಿದ್ದರು. ಇವರ ಪತ್ತೆಗಾಗಿ ಪೊಲೀಸ್ ತಂಡವನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಇವರಿಂದ 10 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಬಂಧಿತ ವ್ಯಕ್ತಿಗಳು ದರೋಡೆಯ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಇನ್ನೂ ಮೂವರು ವ್ಯಕ್ತಿಗಳು ಭಾಗಿಯಾಗಿದ್ದಾರೆ. ಅವರನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
