ಹಾವೇರಿ,ಜು.19- ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಶಿಥಿಲಗೊಂಡಿದ್ದ ಮನೆ ಗೋಡೆ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ದುರಂತದಲ್ಲಿ ಚೆನ್ನಮ (30), ಅಮೂಲ್ಯ (3), ಅನನ್ಯಾ (6) ಮೃತ ದುರ್ದೈವಿಗಳಾಗಿದ್ದು,ಇನ್ನು ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸವಣೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ವೃದ್ಧೆ ಯಲ್ಲಮ, ಪುತ್ರ ಮುತ್ತು, ಸೊಸೆ ಸುನೀತಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ಆರು ಜನರು ಮನೆಯಲ್ಲಿ ಒಂದೇ ಕಡೆ ಮಲಗಿದ್ದರು. ಇಂದು ಮುಂಜಾನೆ ಸುಮಾರು 3.30ರ ಸುಮಾರಿನಲ್ಲಿ ಗೋಡೆ ಕುಸಿದು ಬಿದ್ದು ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಸ್ಥಳೀಯರು ರಕ್ಷಣೆಗೆ ದಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ . ಹುಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಸಂಸದ ಬಸವರಾಜ ಬೊವಾಯಿಯವರು ಇಂದು ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.ಬೆಳಗಾವಿ ಜಿಲ್ಲೆಯ ಎಲ್ಲೆಡೆ ನಿರಂತರ ಮಳೆಯಾಗುತ್ತಿದ್ದು, ಖಾನಾಪುರ ತಾಲ್ಲೂಕಿನ ಕಸಮಳಗಿ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದೆದ ಗರ್ಭಿಣಿ ಸಮೇತ ಆರು ಜನ ಬದುಕುಳಿದಿದ್ದಾರೆ.
ಸಾವನ್ ತೇಗೂರು ಎಂಬುವವರಿಗೆ ಸೇರಿದ ಮನೆಯಲ್ಲಿ ಗರ್ಭಿಣಿ ಮತ್ತು ಆಕೆಯ ಕುಟುಂಬದವರು ವಾಸವಾಗಿದ್ದರು. ನಿನ್ನೆ ಮಧ್ಯರಾತ್ರಿ ಮಳೆಗೆ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಕುಸಿದ ಗೋಡೆಯ ಹೊರಭಾಗದಲ್ಲಿ ಬಿದ್ದಿದ್ದಕ್ಕೆ ಕುಟುಂಬ ಬದುಕುಳಿದಿದೆ.