ಬೆಂಗಳೂರು,ಮೇ.9- ದಂಧೆಕೋರರನ್ನು ಬೆದರಿಸಿ ಆರು ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆಂಬ ಆರೋಪದ ಮೇರೆಗೆ ಚಿಕ್ಕಜಾಲ ಪೊಲೀಸ್ ಠಾಣೆಯ ಮೂವರು ಪೊಲೀಸರನ್ನು ಬಾಗಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಜಾಲ ಠಾಣೆಯ ಇಬ್ಬರು ಹೆಡ್‌ಕಾನ್‌ಸ್ಟೇಬಲ್ ಹಾಗೂ ಒಬ್ಬರು ಕಾನ್‌ಸ್ಟೇಬಲ್ ಅನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಹಣ ದ್ವಿಗುಣಗೊಳಿಸುವ ದಂಧೆ ನಡೆಯುತ್ತಿದೆ. ಆ ದಂಧೆಕೋರರು ಪ್ರತಿಷ್ಠಿತ ಹೋಟೆಲ್‌ವೊಂದರ ಬಳಿ ಇದ್ದಾರೆಂದು ಪೊಲೀಸ್ ಮಾಹಿತಿದಾರರೊಬ್ಬರು ಈ ಪೊಲೀಸರಿಗೆ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಚಿಕ್ಕಜಾಲ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿ ದಂಧೆಕೋರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬೆದರಿಸಿ ಆರು ಲಕ್ಷ ರೂ. ಪಡೆದುಕೊಂಡು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಆರೋಪಿಗಳನ್ನು ಬಿಟ್ಟುಕಳುಹಿಸಿದ್ದರು.
ಮಾರನೇ ದಿನ ಈ ದಂಧೆಕೋರರು ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 44 ಲಕ್ಷ ರೂ.ಗಳೊಂದಿಗೆ ಹೋಗಿದ್ದಾಗ ಹಣದ ಬ್ಯಾಗ್ ದರೋಡೆಯಾಗಿದೆ. ಈ ಬಗ್ಗೆ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಈ ಪ್ರಕರಣದಲ್ಲಿ ಚಿಕ್ಕಜಾಲ ಪೊಲೀಸ್ ಠಾಣೆಯ ಪೊಲೀಸರು ಭಾಗಿಯಾಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಾಹಿತಿಗಳನ್ನು ಕಲೆ ಹಾಕಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿ, 44 ಲಕ್ಷ ರೂ. ದರೋಡೆ ಮಾಡಿರುವ ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.ಈ ಪ್ರಕರಣದಲ್ಲಿ ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.