ಚಿಕ್ಕಮಗಳೂರು,ಜೂ.20- ನರಸಿಂಹರಾಜಪುರ ತಾಲೂಕಿನ ಭದ್ರಾ ಜಲಾಶಯದ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಶಿವಮೊಗ್ಗದ ಮೂವರು ಪ್ರವಾಸಿಗರು ಸಾವನ್ನಪ್ಪಿರುವ ಘಟನೆ ನಡೆದಿದೆ.ಶಿವಮೊಗ್ಗದ ವಿದ್ಯಾನಗರ ಬಡಾವಣೆಯ ಅ್ದಾಖಾನ್ (23), ಆದಿಲ್ (19) ಹಾಗೂ ಸಾಜೀದ್(24) ಮೃತ ದುರ್ದೈವಿಗಳು ಎನ್ನಲಾಗಿದೆ.
ಮಾರಿದಿಬ್ಬ ಬಳಿಯಿಂದ ಹಿನ್ನೀರಿನ ವಿಹಂಗಮ ನೋಟ ಸವಿಯಲು ನಾಲ್ವರು ಯುವಕರು ಒಟ್ಟಿಗೆ ಬಂದಿದ್ದರು. ಇವರ ಪೈಕಿ ಒಬ್ಬರು ದಡದಲ್ಲಿ ಕುಳಿತಿದ್ದರು. ಉಳಿದ ಮೂವರು ಬದಿಯಲ್ಲಿದ್ದ ತೆಪ್ಪ ತೆಗೆದುಕೊಂಡು ಹಿನ್ನೀರಿನೊಳಗೆ ಸ್ವಲ್ಪ ದೂರ ತೆರಳಿದ್ದಾರೆ. ಚಾಲನೆ ಗೊತ್ತಿಲ್ಲದಿದ್ದರಿಂದ ನಿಯಂತ್ರಣ ತಪ್ಪಿ ತೆಪ್ಪ ಪಲ್ಟಿಯಾಗಿ ಮೂವರು ನೀರಿನಲ್ಲಿ ಮುಳುಗಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ತೆಪ್ಪದ ಮಾಲೀಕ ಕೂಡ ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ಮೃತದೇಹಗಳ ಪತ್ತೆಗೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.
ಶವ ದೊರೆತ ಬಳಿಕ ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದರು.ರಾತ್ರಿ 8ರ ತನಕ ಶೋಧ ಕಾರ್ಯ ನಡೆಸಲಾಯಿತು. ಆದರೂ ಮೃತದೇಹಗಳು ಸಿಗದೆ, ಇಂದೂ ಕೂಡ ಕಾರ್ಯಾಚರಣೆ ಮುಂದುವರೆದಿದೆ.