ಬೆಂಗಳೂರು, ಏ.4-ಪೂರ್ವ ಮುಂಗಾರು ಮಳೆ ಚೇತರಿಕೆ ಕಂಡಿದ್ದು, ನಿನ್ನೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಿದೆ. ಕೆಲವೆಡೆ ಸಾಧಾರಣ ಮಳೆಯಾಗಿದ್ದರೆ, ಕೆಲವೆಡೆ ಭಾರಿ ಮಳೆಯಾಗಿದೆ.
ಗಾಳಿ, ಮಳೆಗೆ ಬೆಂಗಳೂರು ಸೇರಿದಂತೆ ಕೆಲವೆಡೆ ಮರ, ವಿದ್ಯುತ್ ಕಂಬಗಳು ಮುರಿದು ಬಿದ್ದು, ಕೆಲ ಕಾಲ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಹಾಸನ, ದಕ್ಷಿಣ ಕನ್ನಡ, ಬೆಂಗಳೂರು, ಚಿತ್ರದುರ್ಗ, ಬಾಗಲಕೋಟೆ, ವಿಜಯಪುರ, ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಕೆಲವೆಡೆ ಚದುರಿದಂತೆ ಮತ್ತೆ ಕೆಲವೆಡೆ ಭಾಗಶಃ ವ್ಯಾಪಕ ಮಳೆಯಾಗಿದೆ.
ಬೆಂಗಳೂರಿನಲ್ಲಿ ನಿನ್ನೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ಮಳೆಯಾಗಿದೆ. ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಬಿಟಿಎಂ ಲೇಔಟ್, ಬಸವನಗುಡಿ, ಜಯನಗರ, ನಾಯಂಡಹಳ್ಳಿ, ರಾಜಾಜಿನಗರ, ಬೊಮ್ಮನಹಳ್ಳಿ, ಗಾಂಧಿನಗರ, ಶಿವಾಜಿನಗರ ಸೇರಿದಂತೆ ಬಹಳಷ್ಟು ಬಡಾವಣೆಗಳಲ್ಲಿ ಮಳೆಯಾಗಿತ್ತು.
ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಗುಡುಗು. ಮಿಂಚಿನಿಂದ ಕೂಡಿದ ಮಳೆಯಾಗಲಿದೆ. ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಲಕ್ಷಣಗಳಿವೆ.
ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿದ್ದು, ಮತ್ತೆ ಕೆಲವೆಡೆ ಬಿರುಗಾಳಿ, ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗುವ ಸಂಭವವಿದೆ. ಬಂಗಾಳ ಕೊಲ್ಲಿಯ ಕಡೆಯಿಂದ ಅಂದರೆ ರಾಜ್ಯದ ಆಗ್ನೆಯ ದಿಕ್ಕಿನಿಂದ ತಂಪಾದ ಬಲವಾದ ಮೇಲೆ ಗಾಳಿ ಆಗಾಗ್ಗೆ ಬೀಸಲಿದೆ. ಇದರಿಂದ ಕೆಲವೆಡೆ ತಂಪಾದ ವಾತಾವರಣ ಕಂಡುಬರಲಿದೆ.
ಅಲ್ಲದೆ, ರಾಜ್ಯದ ಒಳನಾಡಿನಲ್ಲಿ ಆಳವಾದ ಟ್ರಫ್ ನಿರ್ಮಾಣವಾಗಿರುವುದರಿಂದ ಮೋಡ ಮುಸುಕಿದ ವಾತಾವರಣ ಬಹಳಷ್ಟು ಕಡೆ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ, ಒಳನಾಡಿನ ಕೆಲವೆಡೆ ಮಾತ್ರ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ.
ಬೆಂಗಳೂರು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆ ನಿರೀಕ್ಷಿಸಬಹುದಾಗಿದೆ.ಅಲ್ಲದೆ, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ದಾವಣಗೆರೆ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ.