Monday, November 25, 2024
Homeರಾಜ್ಯಹುಲಿ ಹತ್ಯೆ: ಅರಣ್ಯ ಇಲಾಖೆಯ ವಾಚರ್ ಬಂಧನ

ಹುಲಿ ಹತ್ಯೆ: ಅರಣ್ಯ ಇಲಾಖೆಯ ವಾಚರ್ ಬಂಧನ

ಚಿಕ್ಕಮಗಳೂರು, ಮೇ.2- ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೆಂದು ಗುರುತಿಸಿರುವ ಈ ಹಿಂದೆ ಅರಣ್ಯ ಇಲಾಖೆಯಲ್ಲಿ ದಿನಗೂಲಿ ವಾಚರ್ ಆಗಿದ್ದ ಕುಂಡ್ರ ಗ್ರಾಮದ ಸುರೇಶ್‍ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೂಡಿಗೆರೆ ನ್ಯಾಯಾಲಯದ ಸಮೀಪ ಸುರೇಶ್‍ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮೂಡಿಗೆರೆ ಸಮೀಪದ ಕುಂಡ್ರ ಎಂಬಲ್ಲಿ ಹುಲಿಯೊಂದನ್ನು ಹತ್ಯೆ ಮಾಡಿರುವ ಸಂಬಂಧ ಮೂಡಿಗೆರೆ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಬಂಧಿಸಲಾಗಿತ್ತು. ಈ ಪ್ರಕಣರದಲ್ಲಿ ಪ್ರಮುಖ ಆರೋಪಿ ಎನ್ನಲಾಗಿದ್ದ ಸುರೇಶ್ ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ. ಆತನ ಬಂಧನಕ್ಕೆ ಅರಣ್ಯ ಇಲಾಖೆ ಹುಡುಕಾಟ ನಡೆಸಿತ್ತು.

ಸುರೇಶ್ ಮೂಡಿಗೆರೆ ನ್ಯಾಯಾಲಯಕ್ಕೆ ಶರಣಾಗಲು ಬರುತ್ತಾನೆ ಎಂಬ ಮಾಹಿತಿ ಮೇರೆಗೆ ಮೂಡಿಗೆರೆ ನ್ಯಾಯಾಲಯದ ಸಮೀಪ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಪಹರೆ ಹಾಕಿದ್ದರು.
ಸುಮಾರು 5 ಗಂಟೆಯ ಸಮಯದಲ್ಲಿ ಸುರೇಶ್‍ನನ್ನು ನ್ಯಾಯಾಲಯದ ಸಮೀಪ ವಶಕ್ಕೆ ಪಡೆಯಲಾಗಿತ್ತು. ಆರೋಪಿಯನ್ನು ವಶಕ್ಕೆ ಪಡೆದು ಮೂಡಿಗೆರೆ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದರೊಂದಿಗೆ ಈ ಪ್ರಕರಣದಲ್ಲಿ ಒಟ್ಟು ಆರು ಮಂದಿ ಬಂಧನವಾದಂತಾಗಿದೆ. ಈಗಾಗಲೇ ಬಂಧಿಸಲ್ಪಟ್ಟಿದ್ದ ಐವರು ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ. ಈ ಪ್ರಕರಣದ ಆರೋಪಿಯೊಬ್ಬ ಹುಲಿ ಹತ್ಯೆಯ ಬಗ್ಗೆ ಎಳೆ ಎಳೆಯಾಗಿ ಮಾತನಾಡಿರುವ ವಿಡಿಯೋ ಒಂದು ರೆಕಾರ್ಡ್ ಆಗಿದ್ದು ಅದರಲ್ಲಿ ಕುಂಡ್ರ ಸುರೇಶ್ ನೇ ಹುಲಿಯನ್ನು ಬಂದೂಕಿನಿಂದ ಹೊಡೆದಿದ್ದಾನೆ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಪ್ರಕರಣದ ಒಂದನೇ ಆರೋಪಿಯೆಂದು ಬಂಧಿತರಾಗಿರುವ ಸತೀಶ್ ಅವರ ಬೈಕಿಗೆ ಹುಲಿ ಅಂಗಾಂಗಗಳನ್ನು ಇಟ್ಟು ಅವರನ್ನು ಪ್ರಕರಣದಲ್ಲಿ ಸಿಲುಕಿಸಿರುವ ಬಗ್ಗೆಯೂ ಆತ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.

RELATED ARTICLES

Latest News