Friday, September 20, 2024
Homeರಾಷ್ಟ್ರೀಯ | Nationalಈದ್‌ ಮಿಲಾದ್‌ ಹಿನ್ನೆಲೆಯಲ್ಲಿ ನಾಗಮಂಗಲದಲ್ಲಿ ಬಿಗಿ ಪೊಲೀಸ್‌‍ ಬಂದೋಬಸ್ತ್‌

ಈದ್‌ ಮಿಲಾದ್‌ ಹಿನ್ನೆಲೆಯಲ್ಲಿ ನಾಗಮಂಗಲದಲ್ಲಿ ಬಿಗಿ ಪೊಲೀಸ್‌‍ ಬಂದೋಬಸ್ತ್‌

Tight police presence in Nagamangala on the occasion of Eid Milad

ಬೆಂಗಳೂರು, ಸೆ.16- ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಗಲಭೆ ಉಂಟಾಗಿದ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಈದ್‌ ಮಿಲಾದ್‌ ಅಂಗವಾಗಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದೆ.

ಈದ್‌ಮಿಲಾದ್‌ ಹಿನ್ನಲೆಯಲ್ಲಿ ಮುಸ್ಲಿಂ ಬಾಂಧವರು ಇಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿರುವ ಹಿನ್ನಲೆಯಲ್ಲಿ ಮೆರವಣಿಗೆ ಮೂಲಕ ಸಾಗಲಿದ್ದು, ಈ ಪ್ರದೇಶದಲ್ಲಿ ಮತ್ತೆ ಘರ್ಷಣೆಯಾಗದಂತೆ ಪಟ್ಟಣದಾದ್ಯಂತ ಪೊಲೀಸ್‌‍ ಸರ್ಪಗಾವಲು ಹಾಕಲಾಗಿದ್ದು, ಹೈ ಅಲರ್ಟ್‌ ಮಾಡಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಇಂದು ನಾಗಮಂಗಲ ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಹಾಗೂ ಮೆರವಣಿಗೆಗೆ ಅನುಮತಿ ನೀಡದಿರಲು ಜಿಲ್ಲಾಡಳಿತ ನಿರ್ಧರಿಸಿದೆ. ಸರ್ಕಾರದ ಖಡಕ್‌ ಸೂಚನೆ ಅನ್ವಯ ಎಸ್‌‍ಪಿ ಮಲ್ಲಿಕಾರ್ಜುನ್‌ ಬಾಲದಂಡಿ ಅವರು ನಾಗಮಂಗಲದಲ್ಲಿ ಖುದ್ದು ಹಾಜರಿದ್ದು, ಭದ್ರತೆ ಹಾಗು ಪರಿಸ್ಥಿತಿ ನಿಯಂತ್ರಣದ ಬಗ್ಗೆ ಅವಲೋಕಿಸುತ್ತಿದ್ದಾರೆ.

ನಾಗಮಂಗಲದಲ್ಲಿ ಮೂರು ದಿನಗಳ ಹಿಂದೆ ನಡೆದ ಗಲಭೆ ಹಿನ್ನಲೆಯಲ್ಲಿ ದರ್ಗಾ, ಮಸೀದಿ ಬಳಿ ಹೆಚ್ಚಿನ ಪೊಲೀಸ್‌‍ ಭದ್ರತೆ ಮಾಡಲಾಗಿದ್ದು, ಪ್ರಮುಖವಾಗಿ ಮಂಡ್ಯ ಸರ್ಕಲ್‌, ಈದ್ಗಾ ಮೈದಾನದ ಸುತ್ತ ಪೊಲೀಸರು ಕಣ್ಗಾವಲಿನಲ್ಲಿದ್ದಾರೆ.

ಸ್ಥಳದಲ್ಲಿ ಇಬ್ಬರು ಎಸ್‌‍ಪಿ, ಇಬ್ಬರು ಎಎಸ್‌‍ಪಿ, ನಾಲ್ವರು ಡಿವೈಎಸ್ಪಿ, 20 ಇನ್‌ಸ್ಪೆಕ್ಟರ್‌, ಪಿಎಸ್‌‍ಐ ಜೊತೆಗೆ ಏಳು ಡಿಎಆರ್‌, ಕೆಎಸ್‌‍ಆರ್‌ಪಿ ತುಕಡಿ ಸೇರಿದಂತೆ 700ಕ್ಕೂ ಹೆಚ್ಚು ಪೊಲೀಸ್‌‍ ಸಿಬ್ಬಂದಿ ಬಂದೋಬಸ್ತ್‌ ನಲ್ಲಿದ್ದಾರೆ. ಇಂದು ಎಲ್ಲೆಡೆ ಈದ್‌ ಮಿಲಾದ್‌ ಇರುವುದರಿಂದ ಮುಸ್ಲಿಂ ಬಾಂಧವರು ಮೆರವಣಿಗೆ ಸಾಗುವ ಗಲ್ಲಿ ಗಲ್ಲಿಗಳಲ್ಲಿ, ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

RELATED ARTICLES

Latest News