ಬೆಂಗಳೂರು, ಅ.21– ವಿಧಾನ ಪರಿಷತ್ ನ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಟಿ.ಎ.ಶರವಣ ಹಾಗೂ ಸಮಿತಿ ಸದಸ್ಯರು ತಿರುಪತಿ ತಿರುಮಲಕ್ಕೆ ಭೇಟಿ ನೀಡಿದರು. ಕರ್ನಾಟಕ ಸರ್ಕಾರದಿಂದ ತಿರುಮಲ ಬೆಟ್ಟದ ಮೇಲೆ 220 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಭಾಭವನ ಕಾಮಗಾರಿಯ ಪ್ರಗತಿಯನ್ನು ಸಮಿತಿ ಪರಿಶೀಲನೆ ನಡೆಸಿತು.
ನಂತರ ಕರ್ನಾಟಕ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ.ಎ.ಶರವಣ ಅವರು, ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಯದಿರುವ ಬಗ್ಗೆ ಹಾಗೂ ಹಿರಿಯ ಅಧಿಕಾರಿಗಳು ಪೂರ್ವಾನುಮತಿ ಇಲ್ಲದೇ ಸಭೆಗೆ ಗೈರಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಸ್ವಚ್ಛತಾ ಕೆಲಸ ಮಾಡುವಂತಹ ಸಿಬ್ಬಂದಿಗಳೊಂದಿಗೆ ಮಾತನಾಡಿ ಸಮವಸ್ತ್ರ ಧರಿಸಿ ಕಡ್ಡಾಯವಾಗಿ ಹಾಜರಾತಿಯನ್ನು ದಾಖಲಿಸಬೇಕೆಂದು ಸೂಚಿಸಿದರು, ಕಾನೂನು ರೀತಿಯ ಸಮಸ್ಯೆಗಳನ್ನು ಆಂಧ್ರ ಪ್ರದೇಶ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಕೂಡಲೇ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕರ್ನಾಟಕ ಭವನದಲ್ಲಿ ಈಗಾಗಲೇ ಸಿದ್ಧಗೊಂಡಿರುವ ಕಲ್ಯಾಣ ಮಂಟಪ ಕಾಯ್ದಿರಿಸುವ ಹಾಗೂ ಕರ್ನಾಟಕ ಭವನದಲ್ಲಿ ಸಿಗುವ ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಜಾಲತಾಣದಲ್ಲಿ ಸಾರ್ವಜನಿಕರಿಗೆ ಸಿಗುವಂತೆ ಒದಗಿಸಲು ಹಾಗೂ ಕರ್ನಾಟಕದಿಂದ ಬರುವ ಭಕ್ತಾದಿಗಳಿಗೆ ಅನ್ನ ಪ್ರಸಾದ ಕೊಡಲು ಸೂಚಿಸಿರುವುದಾಗಿ ತಿಳಿಸಿದರು.
ತಿರುಪತಿಯನ್ನು ಭೂ ಲೋಕದ ವೈಕುಂಠ ಎಂದು ಕರೆಯಲಾಗುತ್ತದೆ. ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಕರ್ನಾಟಕ ಸರ್ಕಾರ ವಸತಿ ವ್ಯವಸ್ಥೆ, ಕಲ್ಯಾಣ ಮಂಟಪ ಹಾಗೂ ಇತರ ಹಲವು ಸೌಲಭ್ಯ ಕಲ್ಪಿಸುವ ಕಾಮಗಾರಿ ಕೈಗೊಂಡಿದ್ದು, ಎಲ್ಲವನ್ನೂ ಶೀಘ್ರ ಪೂರ್ಣಗೊಳಿಸಿ, ಯಾತ್ರಿಕರಿಗೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದರು. ಸರ್ಕಾರಿ ಭರವಸೆ ಸಮಿತಿಯ ಸದಸ್ಯರೆಲ್ಲರೂ ತಿರುಪತಿ ಶ್ರೀ ಶ್ರೀನಿವಾಸನ ದರ್ನಶವನ್ನು ಪಡೆದು ರಾಜ್ಯದ ಜನರು ಸುಖ, ನೆಮದಿ ,ಶಾಂತಿಯಿಂದ ಬದುಕಲೆಂದು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.