ಬೆಂಗಳೂರು,ಸೆ.22- ತಿರುಪತಿ ಪ್ರಸಾದದಲ್ಲಿ ಕಲಬೆರಕೆ ವಿವಾದಕ್ಕೆ ಸಂಬಂಧಿಸಿದಂತೆ ನಾಳೆಯಿಂದ ಮೂರು ದಿನಗಳ ಕಾಲ ಮಹಾಶಾಂತಿಯಾಗ ನಡೆಸಲು ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ(ಟಿಟಿಡಿ) ನಿರ್ಧರಿಸಿದೆ. ನಾಳೆಯಿಂದ ಶುದ್ಧಿಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಈ ಯಾಗದಲ್ಲಿ ವೇದ ವಿದ್ವಾಂಸರ ಜೊತೆ ಋತ್ವಿಜರು ಸಹ ಭಾಗಿಯಾಗಲಿದ್ದಾರೆ. ಇದರ ನಡುವೆಯೇ ಹೆಚ್ಚುವರಿ ತುಪ್ಪ ನೀಡುವಂತೆ ಕೆಎಂಎಫ್‌ಗೆ ಟಿಟಿಡಿ ಮನವಿ ಮಾಡಿದೆ.
ಈಗಾಗಲೇ ಟಿಟಿಡಿಗೆ ಕೆಎಂಎಫ್ ನಂದಿನಿ ತುಪ್ಪ ಪೂರೈಸುತ್ತಿದ್ದು, ಇದೀಗ ಟಿಟಿಡಿ 3 ಟ್ಯಾಂಕರ್ ಹೆಚ್ಚುವರಿ ತುಪ್ಪಕ್ಕೆ ಬೇಡಿಕೆ ಇಟ್ಟಿದೆ. ಈಗಾಗಲೇ ಕೆಎಂಎಫ್ 3 ಟ್ಯಾಂಕರ್ ತುಪ್ಪ ಪೂರೈಕೆ ಮಾಡುತ್ತಿದ್ದು, 1 ಟ್ಯಾಂಕರ್ನಲ್ಲಿ 20 ಸಾವಿರ ಕೆಜಿ ತುಪ್ಪ ಪೂರೈಕೆ ಮಾಡಲಾಗುತ್ತಿದೆ.
ಈಗ ಮತ್ತೆ ಹೆಚ್ಚುವರಿಯಾಗಿ 60 ಸಾವಿರ ಕೆಜಿ ತುಪ್ಪಕ್ಕೆ ಬೇಡಿಕೆ ಬಂದಿದ್ದು, ಒಟ್ಟಾರೆ ನಂದಿನಿಯಿಂದ 6 ಟ್ಯಾಂಕರ್ ತುಪ್ಪ ಪೂರೈಕೆಗೆ ಮನವಿ ಮಾಡಲಾಗಿದೆ. ಇದರೊಂದಿಗೆ ಕೆಎಂಎಫ್ ನಿಂದ ಟಿಟಿಡಿಗೆ ಒಂದು ಲಕ್ಷ ಇಪತ್ತು ಸಾವಿರ ಕೆಜಿ ತುಪ್ಪ ಪೂರೈಕೆ ಮಾಡಲಾಗುತ್ತದೆ.
ಸದ್ಯಕ್ಕೆ ಬೇರೆ ಭಾಗದಿಂದ ಬರುವ ತುಪ್ಪವನ್ನು ಟಿಟಿಡಿ ಸ್ಟಾಪ್ ಮಾಡಿದೆ. ವಾರಕ್ಕೆ 3 ದಿನ ಮಾತ್ರ ನಂದಿನಿ ತುಪ್ಪ ತೆಗೆದುಕೊಳ್ಳುತ್ತಿದ್ದ ಟಿಟಿಡಿ, ಲಡ್ಡು ವಿವಾದದ ಬೆನ್ನಲ್ಲೇ ಪ್ರತಿನಿತ್ಯ ನಂದಿನಿ ತುಪ್ಪ ತರಿಸಿಕೊಳ್ಳುತ್ತಿದ್ದೆ. ಈ ಹಿಂದೆ 3 ತಿಂಗಳ ಅವಧಿಗೆ 350 ಟನ್ ತುಪ್ಪ ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಸದ್ಯ ಟಿಟಿಡಿಯಿಂದ ಹೆಚ್ಚುವರಿಯಾಗಿ ತುಪ್ಪ ತರೆಸಿಕೊಳ್ಳುತ್ತಿರುವ ಒಪ್ಪಂದ ಒಂದೂವರೆ ತಿಂಗಳಿಗೆ ಮುಗಿಯಲಿದೆ. ನಂತರ 6 ತಿಂಗಳ ಅವಧಿಗೆ ತುಪ್ಪ ಪೂರೈಕೆ ಮಾಡಿಕೊಳ್ಳುವ ಒಪ್ಪಂದದ ಬಗ್ಗೆ ಚಿಂತನೆ ನಡೆಸಿದೆ ಎಂಬ ಮಾಹಿತಿ ಕೆಎಂಎಫ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ತಿರುಪತಿ ಲಡ್ಡುಗೆ ಪ್ರಾಣಿ ಕೊಬ್ಬು ,ಎಣ್ಣೆ ಬಳಕೆ ಆರೋಪ ಬೆನ್ನಲ್ಲೇ ಎಚ್ಚೆತ್ತ ಕೆಎಂಎಫ್ ತುಪ್ಪ ಕಳಿಸುವ ಮುನ್ನ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುತ್ತಿದೆ. ಕೆಎಂಎಫ್ ನಿಂದ ತಿರುಪತಿಗೆ ಹೋಗುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಹಾಗೂ ಮಾರ್ಗ ಮಧ್ಯೆದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಮುಂದಾಗಿದೆ.