ತಿರುಪತಿ,ನ.19- ಹಿಂದೂಗಳ ಪವಿತ್ರಾ ಧಾರ್ಮಿಕ ಕೇಂದ್ರವಾದ ವಿಶ್ವ ಪ್ರಸಿದ್ಧ ತಿರುಪತಿ ತಿರುಮಲ ದೇವಾಲಯದಲ್ಲಿರುವ ಹಿಂದೂಯೇತರ ಅಧಿಕಾರಿಗಳು ಸ್ವಯಂ ನಿವೃತ್ತಿ (ವಿಆರ್ಎಸ್ ) ತೆಗೆದುಕೊಳ್ಳಬೇಕು ಅಥವಾ ಆಂಧ್ರಪ್ರದೇಶದ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆಯನ್ನು ಆರಿಸಿಕೊಳ್ಳಬೇಕೆಂದು ನಿರ್ಣಯವನ್ನು ಅಂಗೀಕರಿಸಿದೆ.
ಹೊಸದಾಗಿ ರಚನೆಯಾಗಿರುವ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ ಉದ್ಯೋಗದಲ್ಲಿರುವ ಹಿಂದೂಯೇತರರು ಒಂದೋ ಸ್ವಯಂ ನಿವೃತ್ತಿ ಪಡೆದುಕೊಳ್ಳಿ, ಇಲ್ಲವೇ ಕೂಡಲೇ ವರ್ಗಾವಣೆ ತೆಗೆದುಕೊಳ್ಳಿ ಎಂದು ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ (ಟಿಟಿಡಿ) ನಿರ್ದೇಶಿಸಿದೆ.
ತಿರುಮಲದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಟಿಟಿಡಿ ಹಿಂದೂ ಧಾರ್ಮಿಕ ಸಂಸ್ಥೆಯಾಗಿದ್ದು, ದೇವಸ್ಥಾನದಲ್ಲಿ ಕೆಲಸ ಮಾಡಲು ಹಿಂದೂಯೇತರರನ್ನು ನೇಮಿಸಿಕೊಳ್ಳಬಾರದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. ಅವರನ್ನು ಬೇರೆ ಬೇರೆ ಇಲಾಖೆಗಳಲ್ಲಿ ಸೇರಿಸಿಕೊಳ್ಳಲು ಅಥವಾ ಅವರಿಗೆ ಸ್ವಯಂ ನಿವೃತ್ತಿ ಯೋಜನೆ ನೀಡಲು ನಾವು ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್ ನಾಯ್ದು ತಿಳಿಸಿದ್ದಾರೆ.
ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಉಸ್ತುವಾರಿ ವಹಿಸಿರುವ ಹೊಸದಾಗಿ ರಚನೆಯಾಗಿವ ತಿರುಮಲ ತಿರುಪತಿ ದೇವಸ್ಥಾನಮ್ ಮಂಡಳಿಯು ಈ ಹಿಂದೆಯೇ ಹಿಂದೂಯೇತರರಿಗೆ ಇಲ್ಲಿ ಅವಕಾಶ ಇಲ್ಲ ಎಂದು ಹೇಳಿತ್ತು. ಇದೀಗ ಈ ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಧಿಕಾರವಧಿಯಲ್ಲಿ ತಿರುಪತಿ ದೇಗುಲದಲ್ಲಿ ನೌಕರರಾಗಿ ಸೇರಿದ್ದ ಹಿಂದೂಯೇತರ ಅಧಿಕಾರಿಗಳಿಗೆ ಕೂಡಲೇ ಜಾಗ ಖಾಲಿ ಮಾಡುವಂತೆ ಟಿಟಿಡಿ ಸೂಚಿಸಿದೆ.
ತಿರುಪತಿ ತಿರುಮಲೇಶ್ವರ ದೇಗುಲ ಹಿಂದೂ ದೇವಸ್ಥಾನವಾಗಿದ್ದು, ಇಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶವಿರಬೇಕು. ದೇವಾಲಯವನ್ನು ನಿರ್ವಹಿಸಲು ಮತ್ತು ಕೆಲಸ ಮಾಡಲು ಹಿಂದೂ ಸಮುದಾಯದ ಸದಸ್ಯರನ್ನು ಮಾತ್ರ ನೇಮಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ತಿರುಮಲ ತಿರುಪತಿ ದೇವಸ್ಥಾನಮ್ ಮಂಡಳಿಯು ನಿರ್ಧರಿಸಿದೆ.
ಈಗಾಗಲೇ ತಿರುಪತಿ ದೇಗುಲದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರ ಉದ್ಯೋಗಿಗಳ ಬಗ್ಗೆ ಸೂಕ್ತ ಕ್ರಮವನ್ನು ಕೋರುವಂತೆ ಆಂಧ್ರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆಯಲು ಟಿಟಿಡಿ ನಿರ್ಧರಿಸಿದೆ. ಇದರ ಜೊತೆಗೆ ತಿರುಪತಿ ಲಡ್ಡು ತಯಾರಿಕೆಯಲ್ಲಿ ವರ್ಧಿತ ಗುಣಮಟ್ಟದ ತುಪ್ಪವನ್ನು ಬಳಸಲು ಟಿಟಿಡಿ ಟ್ರಸ್ಟ್ ಬೋರ್ಡ್ ನಿರ್ಧರಿಸಿದ್ದು, ಈ ನಿರ್ಣಯಗಳನ್ನು ಮೊದಲ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ತಿರುಪತಿ ದೇಗುಲದಲ್ಲಿ ಸುಮಾರು 700ರಷ್ಟು ನೌಕರರು ಇದ್ದು, ಆದರೆ ಹಿಂದೂಯೇತರ ನೌಕರರ ಸಂಖ್ಯೆ ಎಷ್ಟು ಇದೆ ಅನ್ನೋದನ್ನು ಬಹಿರಂಗಪಡಿಸಲು ತಿರುಮಲ ತಿರುಪತಿ ದೇವಸ್ಥಾನಮ್ ಮಂಡಳಿಯು ನಿರಾಕರಿಸಿದೆ. ಮೂಲಗಳ ಪ್ರಕಾರ 300ರಷ್ಟು ನೌಕರರು ಹಿಂದೂ ಧರ್ಮೀಯರಲ್ಲದವರು ಇದ್ದಾರೆ ಎಂದು ತಿಳಿದು ಬಂದಿದ್ದು, ಅವರೆಲ್ಲರ ಉದ್ಯೋಗಕ್ಕೆ ಈಗ ಪೆಟ್ಟು ಬೀಳುವ ಸಾಧ್ಯತೆ ಇದೆ.
ಈ ನಿರ್ಧಾರವು ಆಂಧ್ರಪ್ರದೇಶದ ದತ್ತಿ ಕಾಯ್ದೆ ಮತ್ತು ಟಿಟಿಡಿ ಕಾಯ್ದೆಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿರುವ ಟಿಟಿಡಿ ವಿವಿಧ ನೌಕರರ ಸಂಘಗಳಿಂದ ಬೆಂಬಲವನ್ನು ಪಡೆದುಕೊಂಡಿದೆ. ಅಕ್ಟೋಬರ್ 31 ರಂದು ಟಿಟಿಡಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ನಾಯ್ಡು ಅವರು ದೇವಸ್ಥಾನವನ್ನು ಹಿಂದೂಗಳು ಮಾತ್ರ ನಡೆಸಬೇಕು ಎಂದು ತಮ ನಿಲುವನ್ನು ವ್ಯಕ್ತಪಡಿಸಿದ್ದರು.
ಇದೇ ವರ್ಷ ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ತಿರುಪತಿ ದೇಗುಲದ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗುತ್ತದೆ ಎಂಬ ಆರೋಪವನ್ನು ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ನಂತರ ಸುಪ್ರೀಂ ಕೋರ್ಟ್ ಈ ವಿಚಾರವಾಗಿ ಸಾಕ್ಷ್ಯಾಧಾರಗಳಿಲ್ಲದೇ ಆರೋಪ ಮಾಡುವುದನ್ನು ಖಂಡಿಸಿತ್ತು. ಈ ವಿವಾದ ರಾಷ್ಟ್ರ ಮಟ್ಟದಲ್ಲಿ ಭಾರೀ ವಿವಾದ ಎಬ್ಬಿಸಿತ್ತು.
ಹಲವು ವರ್ಷಗಳಿಂದ, ದೇವಸ್ಥಾನ ಮಂಡಳಿ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು ಎಂದು ಟಿಟಿಡಿ ಕಾಯ್ದೆಯನ್ನು ಮೂರು ಬಾರಿ ತಿದ್ದುಪಡಿ ಮಾಡಲಾಗಿದೆ. 1989 ರಲ್ಲಿ ಹೊರಡಿಸಲಾದ ಸರ್ಕಾರಿ ಆದೇಶವು ಟಿಟಿಡಿ-ಆಡಳಿತದ ಹ್ದುೆಗಳಿಗೆ ನೇಮಕಾತಿಗಳನ್ನು ಹಿಂದೂಗಳಿಗೆ ಸೀಮಿತಗೊಳಿಸಬೇಕೆಂದು ಆದೇಶಿಸಿತ್ತು. ಈ ನಿಬಂಧನೆಗಳ ಹೊರತಾಗಿಯೂ, ಹಿಂದೂಯೇತರರು ದೇವಸ್ಥಾನದ ಒಳಗಡೆ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ಹೇಳಿವೆ.