ತಿರುವಣ್ಣಾಮಲೈ,ಡಿ .3- ಜಿಲ್ಲೆಯ ಅಣ್ಣಾಮಲೈಯಾರ್‌ನಲ್ಲಿ ಮಳೆಯಿಂದ ಬೆಟ್ಟದಿಂದ ಬಂಡೆಗಳು ಮನೆ ಮೇಲೆ ಬಿದ್ದು ಐವರು ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿರುವ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಧಾರಾಕಾರ ಮಳೆಗೆ ಗುಡ್ಡದ ತುದಿಯಿಂದ ಬಂಡೆಯೊಂದು ಉರುಳಿಬಿಂದು ವಿಒಸಿ ನಗರದಲ್ಲಿ ವಸತಿ ಕಟ್ಟಡ ಮೇಲೆ ಬಿದ್ದು ಅದರಡಿ 7 ಮಂದಿ ಹೂತುಹೋದರು. ಎನ್‌ಡಿಆರ್‌ಎಫ್‌ತಂಡ , ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ಸಿಬ್ಬಂದಿಗಳ ತೀವ್ರ ಶೋಧದ ನಂತರ ನಿನ್ನೆ ಸಂಜೆ ಪತ್ತೆ ಮಾಡಲಾಯಿತು.
ಫೆಂಗಲ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಗೆ ಬೆಟ್ಟದ ತುದಿಯಲ್ಲಿ ಕೆಸರು ಜಾರಿದ್ದರಿಂದ ಬಂಡೆ ಉರುಳಿ ಬಿದ್ದಿದ್ದು, ಮನೆ ನುಜ್ಜುಗುಜ್ಜಾಗಿದೆ. ಇದರಿಂದಾಗಿ ಮನೆ ಸಂಪೂರ್ಣ ಮಣ್ಣಿನಡಿಯಲ್ಲಿ ಹೂತು ಹೋಗಿದೆ ಎಂದು ತಿರುವಣ್ಣಾಮಲೈ ಜಿಲ್ಲಾಧಿಕಾರಿ ಡಿ ಭಾಸ್ಕರ್ ಪಾಂಡಿಯನ್ ಹೇಳಿದ್ದಾರೆ.
ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪ ಮತ್ತು ಸಹಾನುಭೂತಿಗಳನ್ನು ವ್ಯಕ್ತಪಡಿಸುತ್ತೇನೆ. ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ನೀಡಲು ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮೃತರನ್ನು ರಾಜ್‌ಕುಮಾರ್ (32), ಅವರ ಪತ್ನಿ ಮೀನಾ (27), ಅವರ ಮಗ ಮತ್ತು ಮಗಳು, ನೆರೆಹೊರೆಯ ಮೂವರು ಹುಡುಗಿಯರು ಎಂದು ಗುರುತಿಸಲಾಗಿದೆ. ಎಲ್ಲಾ ಐವರು ಮಕ್ಕಳು 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.1ರ ಸಂಜೆ 4 ಗಂಟೆಗೆ ಭಾರೀ ಮಳೆಗೆ ಮನೆ ಮೇಲೆ ಮರ ಬಿದ್ದಿರುವುದನ್ನು ಮನಗಂಡ ರಾಜ್‌ಕುಮಾರ್, ಮನೆಯ ಬಾಗಿಲು ತೆರೆಯಲು ಯತ್ನಿಸಿದಾಗ ಬೆಟ್ಟದಿಂದ ಉರುಳಿಬಿದ್ದ ದೊಡ್ಡ ಬಂಡೆಯೊಂದು ಮನೆಯ ಮೇಲೆ ಬಿದ್ದು ಮನೆ ಆವರಿಸಿತ್ತು.ದುರಂತದ ಬಗ್ಗೆ ತಿಳಿದ ಜಿಲ್ಲಾಡಳಿತವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಅವರ ಕಮಾಂಡಿಂಗ್ ಅಧಿಕಾರಿ ಸೇರಿದಂತೆ 39 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.