ಬೆಂಗಳೂರು, ಸೆ.18- ಸೂಕ್ತ ದಾಖಲೆ ಹಾಗೂ ಬಿಲ್‌ಗಳಿಲ್ಲದೆ ಸಾಗಾಟ ಮಾಡುತ್ತಿದ್ದ ಒಂದು ಕೋಟಿ ರೂ. ಮೊತ್ತದ ತಂಬಾಕು ಪದಾರ್ಥಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ 850 ಬಾಕ್ಸ್ ಗಳಲ್ಲಿ ಸಾಗಾಣಿಕೆ ಮಾಡಲಾದ ಕಮಲಾಪಸಂದ್ ಪಾನ್‌ಮಸಾಲ, ಹನ್ಸ್ ಚಾಪ್, ಚೈನಿ ಫಿಲ್ಟರ್ ತಂಬಾಕು ಹಾಗೂ ಶಿಖರ್ ಪಾನ್‌ಮಸಾಲ ಎಂಬ ಪ್ರಸಿದ್ಧ ಬ್ರ್ಯಾಂಡ್‌ಗಳ ಸರಕನ್ನು ರೈಲಿನ ಮೂಲಕ ಸಾಗಾಣಿಕೆ ಮಾಡಲಾಗಿದೆ.
ರೈಲ್ವೆ ನಿಲ್ದಾಣದ ಫ್ಲಾಟ್‌ಫಾರಂನಲ್ಲಿ ಹಾಗೂ ವಾಹನಗಳಲ್ಲಿ ಸೂಕ್ತ ದಾಖಲೆಗಳಿಲ್ಲದೇ ದಾಸ್ತಾನು ಮಾಡಿದ ಈ ಸರಕಿನ ಬಗ್ಗೆ ಖಚಿತ ಮಾಹಿತಿ ಆಧರಿಸಿ ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಿಭಾಗದ ಜಾರಿ ವಿಭಾಗದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ವಿಸ್ತೃತವಾದ ಪರಿಶೀಲನೆಯ ಬಳಿಕ ಈ ಸರಕುಗಳಿಗೆ ಸೂಕ್ತ ದಾಖಲೆಗಳು ಹಾಗೂ ವಾರಸುದಾರರಿಲ್ಲದಿರುವುದು ಕಂಡು ಬಂದಿದೆ.
ತಂಬಾಕು ಉತ್ಪನ್ನಗಳಿಗೆ ಶೇ. 28 ರಷ್ಟು ಜಿಎಸ್‌ಟಿ ಹಾಗೂ ಸೆಸ್ ಸೇರಿ ಒಟ್ಟು ಶೇ. 56ರ ರಷ್ಟು ತೆರಿಗೆ ಇದೆ. ಸುಮಾರು ಒಂದು ಕೋಟಿ ರೂ. ಮೌಲ್ಯದ ಈ ಸರಕಿನಲ್ಲಿ ಸರ್ಕಾರಕ್ಕೆ ಭಾರೀ ಪ್ರಮಾಣದ ರಾಜಸ್ವ ನಷ್ಟವಾಗಿರುವುದು ಕಂಡು ಬಂದಿದೆ.
ನಿಯಮಾನುಸಾರ ಖರೀದಿ ಮಾಡದೇ ಸೂಕ್ತ ರಸೀದಿಗಳಿಲ್ಲದೇ ಸಾಗಾಣಿಕೆ ಮಾಡಲಾಗುತ್ತಿದ್ದ ಸರಕುಗಳನ್ನು ವಶಕ್ಕೆ ತೆಗೆದುಕೊಂಡಿರುವ ಜಾರಿ ವಿಭಾಗದ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ ಕನಿಷ್ಕ ತಿಳಿಸಿದ್ದಾರೆ.