ಬೆಂಗಳೂರು,ಆ.7- ಪರಿಶಿಷ್ಟ ಜಾತಿ, ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಆ.16ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಆಯೋಗವು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯನ್ನು ಸಂಪುಟ ಸಭೆ ಒಪ್ಪಿದೆ. ಅಧ್ಯಯನ ಮಾಡಲು ಎಲ್ಲಾ ಸಚಿವರಿಗೆ ವರದಿಯ ಪ್ರತಿಗಳನ್ನು ನೀಡಲಾಗಿದೆ. ಕಡಿಮೆ ಸಮಯದಲ್ಲಿ ವೈಜ್ಞಾನಿಕವಾಗಿ ಶೇ.92ರಷ್ಟು ಸಮೀಕ್ಷೆ ಮಾಡಲಾಗಿದೆ ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಕೈಗೊಳ್ಳಲು ಮತದಾರರ ಪಟ್ಟಿಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಆರು ವರ್ಷ ಮೇಲ್ಪಟ್ಟ ವ್ಯಕ್ತಿ ಆಧಾರ್ ದೃಢೀಕರಣ, ಡಿಜಿಟಲ್ ರೂಪದಲ್ಲಿ ಸಮೀಕ್ಷೆಯನ್ನು ನ್ಯಾ.ನಾಗಮೋಹನದ್ ದಾಸ್ ಆಯೋಗದ ಮಾದರಿಯಲ್ಲೇ ನಡೆಸಲು ತೀರ್ಮಾನಿಸಲಾಯಿತು ಎಂದು ಅವರು ಹೇಳಿದರು.
ಕೃಷಿ ಇಲಾಖೆಯ 13 ಶೀತಲಘಟಕ ನಿರ್ಮಾಣ ಕಾಮಗಾರಿಗಳ 171.91 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತಕ ಅನುಮೋದನೆ ನೀಡಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಹೊಸದಾಗಿ ಮಂಜೂರಾದ ವಿದ್ಯಾರ್ಥಿ ನಿಲಯಗಳಿಗೆ 40 ಕೋಟಿ ರೂ. ವೆಚ್ಚದಲ್ಲಿ 15 ಟು ಟಯರ್ ಮಂಚಗಳನ್ನು 10 ಕೋಟಿ ವೆಚ್ಚದಲ್ಲಿ 15 ಸಾವಿರ ಕಾಯರ್ ಮಾಟ್ರೆಸ್‌ಗಳನ್ನು ಖರೀದಿಸಲು ಒಪ್ಪಿಗೆ ದೊರೆತಿದೆ.ಹಿಂದುಳಿದ ವರ್ಗಗಳಿಗೆ ಸೇರಿದ ನಿರುದ್ಯೋಗಿಗಳು ಆಹಾರ ಕ್ಯೂಯೋಸ್ಕ್ ಪ್ರಾರಂಭಿಸಲು 103 ವಿದ್ಯುತ್ ಚಾಲಿತ 4 ಚಕ್ರಗಳ ವಾಹನಗಳನ್ನು 33.09 ಕೋಟಿ ರೂ. ವೆಚ್ಚದಲ್ಲಿ , ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ಖರೀದಿಸಲು ಆಡಳಿತಾತಕ ಅನುಮೋದನೆ ನೀಡಲಾಗಿದೆ.
ಕಿತ್ತೂರು ಹಾಗೂ ಮೊಳಕಾಲೂರಿನಲ್ಲಿ ತಲಾ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು 200 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಉನ್ನತೀಕರಿಸಲು ಸಂಪುಟ ಅನುಮೋದಿಸಿದೆ.ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 100 ಹಾಸಿಗೆಗಳ ಸಾಮರ್ಥ್ಯದ ಕ್ಯಾನ್ಸರ್ ಆಸ್ಪತ್ರೆಯನ್ನು 36 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತಕ ಅನುಮೋದನೆ ನೀಡಿದೆ.ತಲಕಾಡನ್ನು ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ, ಭಟ್ಕಳ, ಹಿಂಡಿ ಪುರಸಭೆಯನ್ನು ನಗರಸಭೆಗಳನ್ನಾಗಿ ಮಸ್ತೇನಹಳ್ಳಿ ಗ್ರಾಪಂ ಅನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ.
ಗ್ರೇಟರ್ ಬೆಂಗಳೂರು ಆಡಳಿತ(ತಿದ್ದುಪಡಿ)ವಿಧೇಯಕ ಸೇರಿದಂತೆ 2025 ಸೇರಿದಂತೆ ವಿವಿಧ 18 ವಿಧೇಯಕಗಳಿಗೆ ಸಂಪುಟ ಅನುಮೋದನೆ ನೀಡಿದೆ. ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಲು ಮತದಾರರ ಪಟ್ಟಿ ಸಿದ್ಧಪಡಿಸಲು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಅವಕಾಶ ಕಲ್ಪಿಸಲಿದೆ ಎಂದರು.ದೇವದಾಸಿಯ ಮಗ ಅಥವಾ ಮಗಳು ತಂದೆಯ ಹೆಸರು ನಮೂದಿಸುವುದರಿಂದ ವಿನಾಯ್ತಿ ನೀಡುವ ಕರ್ನಾಟಕ ದೇವದಾಸಿ ಪದ್ಧತಿ(ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ವಿದೇಯಕ 2025ಕ್ಕೆ ಸಂಪುಟ ಸಮತಿಸಿದೆ ಎಂದು ಅವರು ತಿಳಿಸಿದರು.ಜೆಎಸ್‌ಟಿ ಪರಿಷತ್‌ನಲ್ಲಿ ಮಾಡಲಾಗಿರುವ ಶಿಫಾರಸ್ಸುಗಳು ಆತಂಕಕಾರಿಯಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗೆ ಅಧಿಕಾರ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.