ತಲೆ ಮರೆಸಿಕೊಂಡಿದ್ದ ಮನೆಗಳ್ಳನ ಬಂಧನ, 23.64 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ಬೆಂಗಳೂರು,ನ.5- ಬರೋಬ್ಬರಿ 150 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕುಖ್ಯಾತ ಮನೆಗಳ್ಳನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ 23.64 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಮೈಸೂರಿನ ನಿವಾಸಿ ಸೈಯದ್ ಅಸ್ಲಂ ಅಲಿಯಾಸ್ ಅಸ್ಲಂ (40) ಬಂಧಿತ ಆರೋಪಿ. ತಮ ವಿಭಾಗದ ಪೊಲೀಸ್ ಠಾಣೆಗಳ ಸ್ವತ್ತು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ವಾರಂಟ್ ಜಾರಿ ಮಾಡಲು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಜೀತ್ ಅವರು ಸೂಚಿಸಿದ್ದರು.
ಚಿಕ್ಕಬೆಟ್ಟಹಳ್ಳಿಯ ಸಾಯಿ ಲೇಔಟ್‌ನ ನಿವಾಸಿ ಸರಸ್ವತಿ ಎಂಬುವವರು ರೂಮಿನ ಕಿಟಕಿ ತೆಗೆದು ಮಂಚದ ಮೇಲೆ ಮಲಗಿದ್ದಾಗ ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಕಿಟಕಿ ಮೂಲಕ ಯಾರೋ ಕೈತೋರಿಸಿ ಕೊರಳಿಗೆ ಕೈ ಹಾಕಿದ್ದಾರೆ.ಏನೋ ಸ್ಪರ್ಷಿಸಿದಂತೆ ಆಗಿ ತಕ್ಷಣ ಅವರು ಎಚ್ಚರಗೊಂಡು ನೋಡಿಕೊಂಡಾಗ ಕೊರಳಲ್ಲಿದ್ದ ಮಾಂಗಲ್ಯ ಸರ ಇರಲಿಲ್ಲ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಅದರಂತೆ ಈ ತಂಡಗಳು ಕಾರ್ಯಾ ಚರಣೆ ನಡೆಸಿ ಮಾಹಿತಿಗಳನ್ನು ಕಲೆಹಾಕಿ, ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ಈಗಾಗಲೇ ನಗರ, ಮೈಸೂರು, ಚಿಕ್ಕಮಗಳೂರು, ಹಾಸನ, ಮಂಡ್ಯ , ಶಿವಮೊಗ್ಗ, ದಾವಣಗೆರೆ, ನಂಜನಗೂಡು, ಕನಕಪುರ ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ರಾತ್ರಿ ವೇಳೆ ಮನೆಗಳ್ಳತನ ಮಾಡಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿರುವ ಆರೋಪಿ ಸೈಯದ್ ಅಸ್ಲಂ ನನ್ನು ಬಂಧಿಸಿವೆ.
ಆರೋಪಿಯನ್ನು ಸುದೀರ್ಘ ವಿಚಾರಣೆ ಒಳಪಡಿಸಿ ಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ 22.80 ಲಕ್ಷ ರೂ. ಬೆಲೆ ಬಾಳುವ 120 ಗ್ರಾಂ ಚಿನ್ನಾಭರಣಗಳು, 4 ಕೆಜಿ 292 ಗ್ರಾಂ ಬೆಳ್ಳಿ ವಸ್ತುಗಳು, 2 ಮೊಬೈಲ್, 3 ಕೈಗಡಿಯಾರ ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಬಂಧನದಿಂದ ವಿದ್ಯಾರಣ್ಯಪುರ 2, ಬಾಗಲಗುಂಟೆ 1 ಹಾಗೂ ಸೋಲದೇವನಹಳ್ಳಿಯ 3 ಪ್ರಕರಣಗಳು ಪತ್ತೆಯಾದಂತಾ ಗಿವೆ.ಈ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಇನ್‌್ಸಪೆಕ್ಟರ್ ಶಿವಸ್ವಾಮಿ, ಸಬ್ ಇನ್‌್ಸಪೆಕ್ಟರ್‌ಗಳಾದ ಪ್ರಭು, ಇಬ್ರಾಹಿಂ ಹಾಗೂ ಸಿಬ್ಬಂದಿಗಳನ್ನು ಮೇಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಆರೋಪಿ ವಿರುದ್ಧ ಬೆಂಗಳೂರಿನ 7 ವಿವಿಧ ಪೊಲೀಸ್ ಠಾಣೆಗಳಲ್ಲಿ, ಮೈಸೂರಿನ ಮಂಡಿ, ಹುಬ್ಬಳ್ಳಿಯ ವಿದ್ಯಾನಗರ, ಹೊಸಕೋಟೆ, ದಾವಣಗೆರೆಯ ಹೊನ್ನಳ್ಳಿ, ರಾಣೆಬೆನ್ನೂರು, ಬಾಣವಾರ, ಸಿಗ್ಗಾವ್, ಶಿವಮೊಗ್ಗದ 29 ವಿವಿಧ ಪೊಲೀಸ್ ಠಾಣೆಗಳಲ್ಲಿ, ಕೆಆರ್‌ನಗರ, ಸಾಲಿಗ್ರಾಮ ತಲಾ 1, ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ 3, ಕಡೂರು ಪೊಲೀಸ್ ಠಾಣೆಯಲ್ಲಿ 4 , ಚಿಕ್ಕಮಗಳೂರು 2 ಪ್ರಕರಣಗಳು ಸೇರಿದಂತೆ 150 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿ ಬಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು `ಈ ಸಂಜೆ’ಗೆ ತಿಳಿಸಿದ್ದಾರೆ.
8 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
ಮನೆಗಳ್ಳತನವನ್ನೇ ಕಸುಬನ್ನಾಗಿ ಮಾಡಿಕೊಂಡು ಸುಮಾರು ಎಂಟು ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ದಾರನಾಯಕನಪಾಳ್ಯ ಗ್ರಾಮದ ನಾರಾಯಣಸ್ವಾಮಿ (35) ಬಂಧಿತ ಆರೋಪಿ.
ಈತನ ವಿರುದ್ಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ 3 ಮನೆಗಳವು, ವಿದ್ಯಾರಣ್ಯಪುರ 2, ಗೌರಿಬಿದನೂರು 2, ಚಿಕ್ಕಬಳ್ಳಾಪುರ 2, ಗುಡಿಬಂಡೆ 1, ಉಡುಪಿ ಮಣಿಪಾಲ್ ಪೊಲೀಸ್ ಠಾಣೆಯ 3, ಮಂಚೇನಹಳ್ಳಿ 2 ಹಾಗೂ ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣಗಳು ಭಾಗಿಯಾಗಿವೆ.
ಆರೋಪಿಯು ಮನೆಗಳವು ಪ್ರಕರಣಗಳಲ್ಲಿ ಭಾಗಿಯಾಗಿ ಆಗಾಗ್ಗೆ ತನ್ನ ವಿಳಾಸವನ್ನು ಬದಲಿಸುತ್ತಾ ಸುಮಾರು 8 ವರ್ಷಗಳಿಂದ ಪೊಲೀಸರಿಗೆ ಸಿಗದೇ, ನ್ಯಾಯಾಲಯಕ್ಕೂ ಹಾಜರಾಗದೇ ಕಳ್ಳಾಟವಾಡುತ್ತಿ ದ್ದನು. ಇದೀಗ ಯಲಹಂಕ ಉಪನಗರ ಠಾಣೆಯ ಇನ್‌್ಸಪೆಕ್ಟರ್ ಸುಧಾಕರ ರೆಡ್ಡಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕದ್ದ ವಾಹನದಲ್ಲೇ ಸರಗಳ್ಳತನ ಮಾಡುತ್ತಿದ್ದವನ ಬಂಧನ
ಕಳ್ಳತನ ಮಾಡಿದ ದ್ವಿಚಕ್ರವಾಹನದಲ್ಲೇ ಸುತ್ತಾಡುತ್ತಾ ಸರ ಅಪಹರಣ ಮಾಡುತ್ತಿದ್ದ ಸರಗಳ್ಳನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿ 2 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಸುದ್ದಗುಂಟೆಪಾಳ್ಯದ ನಿವಾಸಿ ನೇಹರಾಜ್ (26) ಬಂಧಿತ ವಾಹನ ಹಾಗೂ ಸರಗಳ್ಳ. ಸುಲ್ತಾನಪಾಳ್ಯದ ನಿವಾಸಿ ಯೊಬ್ಬರು ಹೆಬ್ಬಾಳದ ಮನೋ ರಾಯನಪಾಳ್ಯದ ಅಪಾರ್ಟ್ ಮೆಂಟ್‌ವೊಂದರ ಬಳಿ ನಡೆದು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಹಿಂಭಾಲಿಸಿಕೊಂಡು ಬಂದ ಇಬ್ಬರು ಅವರ ಕುತ್ತಿಗೆಗೆ ಕೈ ಹಾಕಿ 30 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ.ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ತಲಘಟ್ಟಪುರ ಠಾಣೆಯ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರಗಳವು ಮಾಡಿರುವುದಾಗಿ ಹೇಳಿದ್ದಾನೆ.
ಆರೋಪಿಯು ನಗರದ ವಿವಿಧ ಪೊಲೀಸ್‌ಠಾಣೆ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡಿ ಅವುಗಳನ್ನು ವಿ.ನಾಗೇನಹಳ್ಳಿಯ ಪಿಳೆಕಮ ದೇವಸ್ಥಾನ ಮುಂಭಾಗದ ಖಾಲಿ ಜಾಗದಲ್ಲಿ ನಾಲ್ಕು ವಾಹನಗಳನ್ನು ನಿಲ್ಲಿಸಿರುವುದಾಗಿ ಹೇಳಿದ್ದು, ಆ ವಾಹನಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ.
ಸೊಸೈಟಿ ವಂಚನೆ ಪ್ರಕರಣ:ಆರೋಪಿಗಳ ಮನೆಗಳ ಮೇಲೆ ದಾಳಿ
ಬೆಂಗಳೂರು,ನ.5- ನಗರದ ರಾಜಾರಾಮ್ ಮೋಹನ್‌ರಾಯ್ ರಸ್ತೆಯಲ್ಲಿರುವ ಇಪಿಎಫ್‌ಒ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಆರೋಪಿಗಳ ಮನೆಗಳ ಮೇಲೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ದಾಳಿ ಮಾಡಿದ್ದಾರೆ. ನಗರದ ರಿಚ್‌ಮಂಡ್ ಸರ್ಕಲ್ ಬಳಿಯ ಕಚೇರಿ ಹಾಗೂ ಆರ್‌ಆರ್‌ನಗರ, ಜೆಪಿ ನಗರ ಮತ್ತು ಅಂಜನಾಪುರದಲ್ಲಿರುವ ನಾಲ್ವರು ಆರೋಪಿಗಳ ಮನೆಗಳನ್ನು ಪೊಲೀಸರು ಶೋಧ ನಡೆಸಿದಾಗ ಚಿನ್ನಾಭರಣ, ಹಣ, ದಾಖಲೆಗಳು, ಹೂಡಿಕೆ ಪತ್ರಗಳು ಪತ್ತೆಯಾಗಿವೆ. ಭವಿಷ್ಯದ ದಿನಗಳಲ್ಲಿ ಸಹಾಯವಾಗುತ್ತದೆ ಎಂದು ಅನೇಕರು ಉಳಿತಾಯದ ಹಣವನ್ನು ತಾವೇ ಮಾಡಿಕೊಂಡಿದ್ದ ಇಪಿಎಫ್‌ಒ ಸ್ಟಾಫ್ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿಯಲ್ಲಿ ಹೂಡಿಕೆ ಮಾಡಿದ್ದರು.
ಈ ಸೊಸೈಟಿ ಚೆನ್ನಾಗಿ ನಡೆಯುತ್ತಿತ್ತು. ಪ್ರತಿ ತಿಂಗಳು ಬಡ್ಡಿಯೂ ಬರುತ್ತಿತ್ತು. ಆದರೆ ಕಳೆದ ಮೂರು ತಿಂಗಳಿಂದ ಬಡ್ಡಿ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡು ಹೂಡಿಕೆ ಮಾಡಿದ್ದವರು ಸೊಸೈಟಿಯಲ್ಲಿ ಹಣದ ವಹಿವಾಟು ಪರಿಶೀಲಿಸಿದಾಗ 73 ಕೋಟಿ ಹಣದ ಪೈಕಿ 70 ಕೋಟಿ ವಂಚನೆ ನಡೆದಿರುವುದು ಗೊತ್ತಾಗಿದೆ. ಸೊಸೈಟಿಯಲ್ಲಿ ಕೇವಲ 3 ಕೋಟಿ ಹಣವನ್ನಷ್ಟೇ ಬಿಟ್ಟು, ಉಳಿದ ಹಣವನ್ನೆಲ್ಲಾ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಿಇಓ ಹಾಗೂ ಅಕೌಂಟೆಂಟ್ ವಿರುದ್ಧ ಹೂಡಿಕೆದಾರರು ಗಂಭೀರ ಆರೋಪ ಮಾಡಿ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರುಬಂಧಿಸಿದ್ದಾರೆ.
ಸೊಸೈಟಿಯ ಲೆಕ್ಕಾಧಿಕಾರಿಗೆ ತಿಂಗಳಿಗೆ 21 ಸಾವಿರ ಸಂಬಳವಿತ್ತು. ಹೀಗಿದ್ದರೂ ಅವರ ಮನೆಯಲ್ಲಿ ಐಷಾರಾಮಿ ಕಾರುಗಳು, ಆತನ ಪತ್ನಿಖಾತೆಯಲ್ಲಿ ಕೋಟ್ಯಾಂತರ ವಹಿವಾಟು ನಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಕಾರ್ಯಾಚರಣೆ ಮುಂದುವರೆಸಿ ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಸೊಸೈಟಿಯ ಖಾತೆಯಿಂದಲೇ ಹಣ ವರ್ಗಾವಣೆಯಾಗಿರುವುದು ಕಂಡು ಬಂದಿದೆ. ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
ಕಾರು ಡಿಕ್ಕಿ ಬಿಹಾರದ ಮೆಕ್ಯಾನಿಕ್ ಸಾವು..
ಸ್ಕೂಟರ್‌ನಲ್ಲಿಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಕೆಆರ್‌ಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಿಹಾರ ಮೂಲದ ರಜತ್ ಅಲಿ (26) ಮೃತಪಟ್ಟ ಸ್ಕೂಟರ್ ಸವಾರ. ಈತ ್ರಡ್‌್ಜ ಹಾಗೂ ಎಸಿ ರಿಪೇರಿ ಮಾಡುವ ಮೆಕ್ಯಾನಿಕ್.ಕಲ್ಕೆರೆಯಲ್ಲಿ ವಾಸವಾಗಿದ್ದ ರಜತ್‌ಅಲಿ ಅವರು ರಾತ್ರಿ 9.30 ರ ಸುಮಾರಿನಲ್ಲಿ ತನ್ನ ಸ್ಕೂಟಿಯಲ್ಲಿ ಬೂದಿಗೆರೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಅತೀ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕೆಆರ್ ಪುರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದ್ವಿಚಕ್ರ ವಾಹನ:ಕಳ್ಳನ ಬಂಧನ
ಮನೆಗಳ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಪರಿಚಯಸ್ಥನಿಗೆ ನೀಡಿದ್ದ ಆರೋಪಿಯೊಬ್ಬನನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿ 1.50 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ರಾಜಗೋಪಾಲನಗರದ ನಿವಾಸಿ ಅಭಿಷೇಕ್ (30) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ಮುಂದುವರೆದಿದೆ.
ಸಾಗರಹಳ್ಳಿ ಯ ಬಯ್ಯಣ್ಣ ಲೇಔಟ್ ನಿವಾಸಿಯೊಬ್ಬರು ತಮ ಮನೆ ಮುಂಭಾಗ ದ್ವಿಚಕ್ರ ವಾಹನ ನಿಲ್ಲಿಸಿದ್ದು, ಮಾರನೇ ದಿನ ನೋಡಿದಾಗ ವಾಹನ ಇರಲಿಲ್ಲ.ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಲಗ್ಗೆರೆ ಬಿಡ್ಜ್ ಬಳಿ ಆರೋಪಿಯನ್ನು ದ್ವಿಚಕ್ರ ವಾಹನ ಸಮೇತ ಬಂಧಿಸಿದ್ದಾರೆ.ಆರೋಪಿಯು ರಾಜಾಜಿ ನಗರದಲ್ಲೂ ದ್ವಿಚಕ್ರವಾಹನ ಕಳವು ಮಾಡಿರುವುದು ವಿಚಾರಣೆಯಿಂದ ಗೊತ್ತಾಗಿದೆ.ಇನ್‌್ಸಪೆಕ್ಟರ್ ಭೈರ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು.
ಚೋರನ ಬಂಧನ:6.95 ಲಕ್ಷ ಮೌಲ್ಯದ ವಾಹನಗಳ ಜಪ್ತಿ
ವಾಹನ ಚೋರನೊಬ್ಬನನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿ 6.95 ಲಕ್ಷ ಮೌಲ್ಯದ 10 ಸೈಕಲ್‌ಗಳು,ಗೂಡ್ಸ್ ವಾಹನ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ನಾಗಪುರದ ನಿವಾಸಿಯೊಬ್ಬರು ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಸೈಕಲ್ ಕಳವಾಗಿತ್ತು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ರಾಜಾಜಿನಗರದ ನವರಂಗ್ ಚಿತ್ರಮಂದಿರದ ಬಳಿ ಸೈಕಲ್ ಸಮೇತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈ ಸೈಕಲ್ ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ.ಅಲ್ಲದೇ ನಗರದ ವಿವಿಧ ಕಡೆಗಳಲ್ಲಿ ಸೈಕಲ್‌ಗಳು ಮತ್ತು ದ್ವಿಚಕ್ರ ವಾಹನ ಹಾಗೂ ಟಾಟಾ ಏಸ್ ವಾಹನ ಕಳವು ಮಾಡಿ ಅವುಗಳನ್ನು ಪೈಪ್‌ಲೈನ್ ರಸ್ತೆಯ ಈಶ್ವರ ದೇವಸ್ಥಾನದ ಪಕ್ಕದ ಖಾಲಿ ಜಾಗದಲ್ಲಿ ಹಾಗೂ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಉಲ್ಲಾಸ್ ಚಿತ್ರಮಂದಿರ ಮುಂಭಾಗ ನಿಲ್ಲಿಸಿರುವುದಾಗಿ ತಿಳಿಸಿದ್ದು, ಅದರಂತೆ ಆ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್ ಮಂಜು ಹಾಗೂ ಸಿಬ್ಬಂದಿ ತಂಡ ಕೈಗೊಂಡು ಆರೋಪಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
