* ದ್ವಿಚಕ್ರ ವಾಹನ ಕಳ್ಳನ ಬಂಧನ :
ಬೆಂಗಳೂರು, ಮೇ 21- ಮನೆ ಮುಂದೆ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದಂತಹ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಜೆ.ಜೆ. ನಗರ ಠಾಣೆ ಪೊಲೀಸರು ಬಂಧಿಸಿ 1.67 ಲಕ್ಷ ರೂ. ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ.ಹಳೇಗುಡ್ಡದಹಳ್ಳಿ ನಿವಾಸಿ ಆರೀಫ್ ಪಾಷಾ (24) ಬಂಧಿತ ಆರೋಪಿ.
ವಿಜಯನಗರದ ಪೈಪ್‌ಲೈನ್ ನಿವಾಸಿ ವೆಂಕಟೇಶ್ ಎಂಬುವವರು ತಮ ಹೋಂಡಾ ಆ್ಯಕ್ಟೀವ ದ್ವಿಚಕ್ರ ವಾಹನ ಕಳುವಾಗಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿ ಬಂಧನದಿಂದ ಜೆ.ಜೆ. ನಗರದ 2 ಪ್ರಕರಣ ಹಾಗೂ ಚಾಮರಾಜಪೇಟೆಯ ಒಂದು ದ್ವಿಚಕ್ರ ವಾಹನ ಕಳುವು ಪ್ರಕರಣ ಪತ್ತೆಯಾಗಿದೆ.
* ಮೊಬೈಲ್ ಕಳ್ಳತನ: ಇಬ್ಬರ ಬಂಧನ : 22.40 ಲಕ್ಷ ಮೌಲ್ಯದ 176 ಮೊಬೈಲ್‌ಗಳು ಖಾಕಿ ವಶಕ್ಕೆ
ಬೆಂಗಳೂರು, ಮೇ 21- ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿ 22.40 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 176 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಏ.22 ರಂದು ಬೆಳಗಿನ ಜಾವ ವ್ಯಕ್ತಿಯೊಬ್ಬರು ಶಿವಮೊಗ್ಗದಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದು ನಂತರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದಾಗ ದರೋಡೆಕೋರನೊಬ್ಬ ಅವರ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ವ್ಯಕ್ತಿಯೊಬ್ಬನನ್ನು ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ ಆತ ಇನ್ನಿಬ್ಬರ ಬಗ್ಗೆ ಮಾಹಿತಿ ನೀಡಿದ್ದಾನೆ.ಈತನ ಮಾಹಿತಿ ಮೇರೆಗೆ ಬಾಗಲೂರಿನ ಗೋಪಾಲಪುರದಲ್ಲಿ ಇಬ್ಬರನ್ನು ವಶಕ್ಕೆ ಪಡೆದು, ಠಾಣೆಗೆ ಕರೆತಂದು ವಿಚಾರಿಸಲಾಗಿ ಮೊಬೈಲ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ 176 ವಿವಿಧ ಕಂಪನಿಯ ಮೊಬೈಲ್ ಫೋನ್‌ಗಳು ಮತ್ತು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಟಾಯೋಟಾ ಇಟಿಯಾಸ್ ಕಾರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.ಈ ಇಬ್ಬರ ಬಂಧನದಿಂದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 3 ಮೊಬೈಲ್ ಫೋನ್ ಕಳುವು ಪ್ರಕರಣ ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ.
* ಮೊಬೈಲ್ ಸುಲಿಗೆ: 5 ಮಂದಿಯ ಬಂಧನ
ಒಂಟಿಯಾಗಿ ನಡೆದು ಹೋಗುವ ಸಾರ್ವಜನಿಕರ ಮೊಬೈಲ್‌ಗಳನ್ನು ಎಗರಿಸುತ್ತಿದ್ದ 5 ಮಂದಿಯನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿ 6.31 ಲಕ್ಷ ರೂ.ಬೆಲೆ ಬಾಳುವ 32 ಮೊಬೈಲ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.ನಾಗರಭಾವಿ ಸುವರ್ಣ ಲೇಔಟ್ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ 1 ಲಕ್ಷ ರೂ. ಬೆಲೆ ಬಾಳುವ ಐಪೋನ್‌ನನ್ನು ಕಳ್ಳನೊಬ್ಬ ಸುಲಿಗೆ ಮಾಡಿ ಪರಾರಿಯಾಗಿದ್ದ ಬಗ್ಗೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಪಿರ್ಯಾದುದಾರರ ಮೊಬೈಲ್‌ನ ಫೈಂಡ್ ಮೈ ಡಿವೈಸ್ ಅಪ್ಲಿಕೇಷನ್ ಮುಖಾಂತರ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಆತನು ನೀಡಿದ ಮಾಹಿತಿ ಮೇರೆಗೆ ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ.ಆರೋಪಿಗಳಿಂದ ಸುಮಾರು 6.31 ಲಕ್ಷ ಮೌಲ್ಯದ ಒಟ್ಟು 32 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 3 ಮೊಬೈಲ್ ಸುಲಿಗೆ ಪ್ರಕರಣ ಪತ್ತೆಯಾಗಿದ್ದು ತನಿಖೆ ಮುಂದುವರೆದಿದೆ.
* ಸ್ಪಾ ಮೇಲೆ ದಾಳಿ: 7 ಯುವತಿಯರ ರಕ್ಷಣೆ
ಬೆಂಗಳೂರು, ಮೇ 21- ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಇಂದಿರಾ ನಗರ ಠಾಣೆೆ ಪೊಲೀಸರು ದಾಳಿ ಮಾಡಿ ವಿದೇಶಿ ಹಾಗೂ ಹೊರ ರಾಜ್ಯದ ಏಳು ಯುವತಿಯರನ್ನು ರಕ್ಷಿಸಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.ಇಲ್ಲಿನ 12ನೇ ಮುಖ್ಯ ರಸ್ತೆಯಲ್ಲಿರುವ ಸ್ಪಾವೊಂದರಲ್ಲಿ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಸ್ಪಾ ಮೇಲೆ ದಾಳಿ ನಡೆಸಿ, ವಿದೇಶಿ ಮತ್ತು ಹೊರ ರಾಜ್ಯಗಳ ಒಟ್ಟು 7 ಜನ ಸಂತ್ರಸ್ತ ಯುವತಿಯರನ್ನು ರಕ್ಷಿಸಿದ್ದಾರೆ.
* ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಒಬ್ಬಾತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.
ಸ್ಪಾ ನಲ್ಲಿ ಕ್ರಾಸ್ ಮಸಾಜ್, ಬಾಡಿ ಟು ಬಾಡಿ ಮಸಾಜ್, ಹ್ಯಾಪಿ ಎಂಡಿಂಗ್ ಎಂಬಿತ್ಯಾದಿ ಹೆಸರಿನ ಮಸಾಜ್‌ಗಳನ್ನು ಮಾಡುವುದಾಗಿ ಗ್ರಾಹಕರನ್ನು ಆಕರ್ಷಿಸಿ, ಪ್ರಾಯದ ಯುವತಿಯರಿಂದ ಬಲವಂತವಾಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದುದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.7 ಜನ ಸಂತ್ರಸ್ತ ಯುವತಿಯರನ್ನು ರಕ್ಷಿಸಿ ಅವರ ಕುಟುಂಬಸ್ಥರಿಗೆ ಒಪ್ಪಿಸಲಾಗಿರುತ್ತದೆ.ಸ್ಪಾನ ಮಾಲೀಕ ತಲೆಮರೆಸಿಕೊಂಡಿದ್ದು, ಶೋಧ ಮುಂದುವರೆದಿದೆ.
* ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಇಬ್ಬರ ಬಂಧನ
ಬೆಂಗಳೂರು, ಮೇ 21- ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ನಂತರ ನ್ಯಾಯಾಲಯಕ್ಕೆ ಹಾಜರಾಗದೇ ಮನೆ ಖಾಲಿ ಮಾಡಿಕೊಂಡು ಹೋಗಿದ್ದ ಇಬ್ಬರನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೆ.ಎಸ್. ಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಬಂಧನಕ್ಕೆ ಒಳಗಾದ ಇಬ್ಬರು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿ, ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಗೊತ್ತಿದ್ದರೂ ಸಹ ಹಾಜರಾಗದೇ ಠಾಣೆಯಲ್ಲಿ ನೀಡಿರುವ ವಿಳಾಸವನ್ನು ಖಾಲಿ ಮಾಡಿಕೊಂಡು ಹೋಗಿದ್ದರು.
ಈ ಪ್ರಕರಣದ ಅರೋಪಿಗಳನ್ನು ಪತ್ತೆ ಹಚ್ಚಿದ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.ಈ ಪೈಕಿ ಒಬ್ಬ ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಮತ್ತೊಬ್ಬ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.ಮತ್ತಿಬ್ಬರು ಎಲ್.ಪಿ.ಆರ್ ಪ್ರಕರಣದಲ್ಲಿ ನ್ಯಾಯಾಲಯದಿಂದ ರಿಕಾಲ್ ಮಾಡಿಸಿಕೊಂಡಿರುತ್ತಾರೆ.
* ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಕಳ್ಳತನ : ಅಂತಾರಾಜ್ಯ ಕಳ್ಳನ ಬಂಧನ
ಬೆಂಗಳೂರು, ಮೇ 21- ರಾತ್ರಿ ಮತ್ತು ಬೆಳಗಿನ ಜಾವ ಸುತ್ತಾಡುತ್ತಾ ವಿದ್ಯಾರ್ಥಿಗಳು ವಾಸಿಸುತ್ತಿದ್ದ ಮನೆ ಬಳಿ ಹೋಗಿ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳನೊಬ್ಬನನ್ನು ಕುಮಾರ ಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 25 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ದಯಾನಂದ ಸಾಗರ ಕಾಲೇಜಿನ ಮೂವರು ವಿದ್ಯಾರ್ಥಿಗಳು ಕಾಲೇಜು ಸಮೀಪವೇ ಮನೆ ಮಾಡಿಕೊಂಡು ವಾಸವಾಗಿದ್ದು ಮೇ 5 ರಂದು ರಾತ್ರಿಯಿಂದ ಬೆಳಗ್ಗೆ ಸುಮಾರು 6.45 ವರೆಗೂ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಿದ್ದಾರೆ.
ನಂತರ ಬೆಳಿಗ್ಗೆ 7 ಗಂಟೆಯಲ್ಲಿ ಅಡುಗೆ ಮಾಡುವ ಕೆಲಸದವನು ಬಂದು ಅಡುಗೆ ಮಾಡುತ್ತಾನೆಂದು ರೂಮಿನ ಬಾಗಿಲನ್ನು ತೆಗೆದು ಬೀಗ ಹಾಕದೇ ನಿದ್ರೆಗೆ ಜಾರಿದ್ದರು.
9.30ರ ಸುಮಾರಿನಲ್ಲಿ ಎದ್ದು ನೋಡಿದಾಗಸುಮಾರು 2.30 ಲಕ್ಷ ರೂ. ಬೆಲೆ ಬಾಳುವ ಮೂರು ವಿವಿಧ ಕಂಪನಿಯ ಲ್ಯಾಪ್‌ಟಾಪ್‌ಗಳು, ಒಂದು ಮೊಬೈಲ್ ಫೋನ್ ಕಳುವಾಗಿರುವುದು ಗೊತ್ತಾಗಿದೆ.ತಕ್ಷಣ ಅವರು ಕೆ.ಎಸ್. ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಸಿ.ಸಿ ಟಿವಿ ಯಿಂದ ಮಾಹಿತಿಯನ್ನು ಕಲೆಹಾಕಿ, ಕಾಟನಪೇಟೆಯಲ್ಲಿರುವ ಪಿಜಿಯೊಂದರಲ್ಲಿ ವಾಸವಾಗಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಅಲ್ಲಿಗೆ ಹೋಗಿ ನೋಡಿದಾಗ ಆತನು ಆ ಪಿಜಿಯಲ್ಲಿ ಇರಲಿಲ್ಲ.
ಆತನ ಬಗ್ಗೆ ಪೊಲೀಸರು ಕೆಲವು ಮಾಹಿತಿಗಳನ್ನು ಕಲೆಹಾಕಿ ನಂತರ, ಇಂದಿರಾನಗರದ ಮೆಟ್ರೋ ಪಿಲ್ಲರ್ ಕೆಳಭಾಗದಲ್ಲಿ ಆಂಧ್ರಪ್ರದೇಶದಿಂದ ಬಂದಿರುವ ಅವರ ಸಂಬಂಧಿಕರ ಜೊತೆ ಇರುವುದು ತಿಳಿದು ಅಲ್ಲಿಗೂ ತೆರಳಿ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಲ್ಯಾಪ್‌ಟಾಪ್ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯು ಕಳ್ಳತನ ಮಾಡುತ್ತಿದ್ದ ಲ್ಯಾಪ್‌ಟಾಪ್‌ಗಳನ್ನು ತಮಿಳುನಾಡಿನ ಶಂಕರ್‌ಪುರದಲ್ಲಿರುವ ವ್ಯಕ್ತಿಗೆ ನೀಡಿದ್ದು, ಆತನ ವಶದಿಂದ ಒಟ್ಟು 25 ಲ್ಯಾಪ್‌ಟಾಪ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.