Friday, November 22, 2024
Homeಬೆಂಗಳೂರುಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

ಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

ಕೆಲಸಕ್ಕಿದ್ದ ಮನೆಯಲ್ಲೇ ಆಭರಣ ಕಳ್ಳತನ : ಮನೆಕೆಲಸದಾಕೆ ಸೇರಿ ಮೂವರ ಸೆರೆ
ಬೆಂಗಳೂರು,ಜು.30- ಮನೆ ಮಾಲೀಕರ ಕಣ್ತಪ್ಪಿಸಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕಳ್ಳತನ ಮಾಡಿದ್ದ ಮನೆಗೆಲಸದಾಕೆ ಸೇರಿದಂತೆ ಮೂವರನ್ನು ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿ 30 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ನೀಲಸಂದ್ರದ ಮನೆಗೆಲಸದಾಕೆ ದಿವ್ಯ, ಈಕೆಯ ದೊಡ್ಡಮ ಆಸ್ಟೀನ್‌ಟೌನ್‌ನ ಮಂಜು ಮತ್ತು ಪರಿಚಯಸ್ಥ ಈಜೀಪುರದ ಜೋಮನ್‌ ಬಂಧಿತ ಆರೋಪಿಗಳು.

ಮನೆಯಲ್ಲಿಟ್ಟಿದ್ದ ಸುಮಾರು 50 ರಿಂದ 60 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಮತ್ತು ವಜ್ರದ ಒಡವೆಗಳು ಕಳುವಾಗಿದ್ದು, ತಮ ಮನೆಯಲ್ಲಿ ಕೆಲಸ ಮಾಡುವ ಒಟ್ಟು 7 ಜನ ಕೆಲಸಗಾರರಲ್ಲಿ ಯಾರೋ ಕಳ್ಳತನ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಿ ಮಾಲೀಕರಾದ ವಿಕ್ರಮ ವೈದ್ಯನಾಥನ್‌ ದೂರು ನೀಡಿದ್ದರು.

ಮಾರತ್ತಹಳ್ಳಿ ಠಾಣೆ ಪೊಲೀಸರು ಕಳುವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿ ಮನೆಕೆಲಸಕ್ಕೆಂದು ಬಂದ ಕೆಲಸದಾಕೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಆಭರಣ ಕಳವು ಮಾಡಿರುವುದಾಗಿ ತಿಳಿಸಿದ್ದಾಳೆ.ಆಕೆಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ ದಾಗ, ಕಳುವು ಮಾಡಿರುವ ಚಿನ್ನಾಭರಣಗಳನ್ನು ನೀಲಸಂದ್ರದಲ್ಲಿ ವಾಸವಿರುವ ದೊಡ್ಡಮನ ಬಳಿ ಕೊಟ್ಟಿರುವುದಾಗಿ ಹೇಳಿದ್ದಾಳೆ.

ನೀಲಸಂದ್ರದಲ್ಲಿ ಆರೋಪಿತೆ ದೊಡ್ಡಮ ಮಂಜುವನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪರಿಚಯಸ್ಥ ಈಜೀಪುರದ ಜೋಮನ್‌ಗೆ ಆಭರಣ ನೀಡಿರುವುದಾಗಿ ತಿಳಿಸಿದ್ದಾಳೆ.ಈ ಹಿನ್ನೆಲೆಯಲ್ಲಿ ಪೊಲೀಸರು ಜೋಮನ್‌ ಮನೆಗೆ ಹೋಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈ ಮಹಿಳೆಯಿಂದ ಪಡೆದ ಆಭರಣವನ್ನು ಈಜೀಪುರದ ವಿವಿಧ ಜ್ಯುವೆಲ್ಲರಿ ಶಾಪ್‌ಗಳಲ್ಲಿ ಮಾರಾಟ ಮಾಡಿದ್ದಾಗಿ ಹೇಳಿದ್ದಾನೆ.

ತನಿಖೆಯನ್ನು ಮುಂದುವರೆಸಿದ ಪೊಲೀಸರು ಕೆಲಸದಾಕೆಯ ಮನೆಯಿಂದ ಒಂದು ವಾಚ್ ಮತ್ತು ಒಂದು ಚಿನ್ನದ ಸರ ಹಾಗೂ ಈಜೀಪುರದ ವಿವಿಧ ಜ್ಯೂವೆಲರಿ ಶಾಪ್‌ಗಳಿಂದ 30 ಲಕ್ಷ ರೂ. ಬೆಲೆ ಬಾಳುವ ಚಿನ್ನ ಮತ್ತು ವಜ್ರದ ಒಡವೆಗಳನ್ನು ವಶಕ್ಕೆ ಪಡೆದಿದ್ದಾರೆ.

ಮೊಬೈಲ್‌ ಸುಲಿಗೆಕೋರನ ಬಂಧನ : 1.50 ಲಕ್ಷ ವೌಲ್ಯದ 13 ಮೊಬೈಲ್‌ ಜಪ್ತಿ
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸ್ವಿಗ್ಗಿ ಡೆಲವರಿ ಬಾಯ್‌ನನ್ನು ಅಡ್ಡಗಟ್ಟಿ ಮೊಬೈಲ್‌ ಸುಲಿಗೆ ಮಾಡಿದ್ದ ಆರೋಪಿಯೊಬ್ಬನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿ 1.50 ಲಕ್ಷ ರು. ಮೌಲ್ಯದ 13 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿ.ನಾರಾಯಣಪುರದಲ್ಲಿ ಯುವಕನೊಬ್ಬ ಸ್ವಿಗ್ಗಿ ಡೆಲವರಿ ಮಾಡಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಮೂವರು ಸುಲಿಗೆಕೋರರು ಇವರ ವಾಹನ ತಡೆದು, ಚಾಕು ತೋರಿಸಿ ಬೆದರಿಸಿ ಮೊಬೈಲ್‌ ಕಿತ್ತುಕೊಂಡು ಹೋಗಿದ್ದ ಬಗ್ಗೆ ದೂರು ದಾಖಲಾಗಿತ್ತು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಖಚಿತ ಮಾಹಿತಿ ಕಲೆಹಾಕಿ ಬಾಣಸವಾಡಿಯಲ್ಲಿ ಮೂವರು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದುದನ್ನು ಗಮನಿಸಿ ವಾಹನ ತಡೆದಾಗ ಇಬ್ಬರು ಇಳಿದು ಪರಾರಿಯಾಗಿದ್ದಾರೆ.

ಒಬ್ಬ ಆರೋಪಿ ಮೊಬೈಲ್‌ ಫೋನ್‌ ಸಮೇತ ಸಿಕ್ಕಿಬಿದ್ದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈ ಪ್ರಕರಣದಲ್ಲಿ ಮೊಬೈಲ್‌ ಫೋನ್‌ ಸುಲಿಗೆ ಮಾಡಿರುವುದಾಗಿ ತಿಳಿಸಿದ್ದಾನೆ.ಆರೋಪಿಯನ್ನು ಸುದೀರ್ಘ ವಿಚಾರಣೆ ಗೊಳಪಡಿಸಿದಾಗ ಸುಲಿಗೆ ಮಾಡಿದ 12 ಮೊಬೈಲ್‌ ಫೋನ್‌ಗಳನ್ನು ತನ್ನ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ ಮೇರೆಗೆ ಪೊಲೀಸರು ಆತನ ಮನೆಯಿಂದ ಮೊಬೈಲ್‌ಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪರಾರಿಯಾಗಿರುವ ಇನ್ನಿಬ್ಬರು ಸುಲಿಗೆಕೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಷೋರೂಮ್‌ನಿಂದಲೇ ಎಲೆಕ್ಟ್ರಾನಿಕ್‌ ವಸ್ತು ಕಳ್ಳತನ : ಸೇಲ್ಸ್ ಎಕ್ಸಿಕ್ಯುಟಿವ್‌ ಬಂಧನ
ಷೋರೂಮ್‌ನಲ್ಲಿ ಕೆಲಸ ಮಾಡಿಕೊಂಡೇ ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌ಗಳನ್ನು ಕಳವು ಮಾಡಿದ್ದ ಸೇಲ್ಸ್ ಎಕ್ಸಿಕ್ಯೂಟಿವ್‌ನನ್ನು ರಾಮಮೂರ್ತಿ ಠಾಣೆ ಪೊಲೀಸರು ಬಂಧಿಸಿ 1.50 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಮಮೂರ್ತಿನಗರ ಮುಖ್ಯರಸ್ತೆಯಲ್ಲಿರುವ ಷೋರೂಮ್‌ನಲ್ಲಿ ಲ್ಯಾಪ್‌ಟಾಪ್‌ ಮತ್ತು ಇತರೆ ಎಲೆಕ್ಟ್ರಾನಿಕ್‌ ವಸ್ತುಗಳು ಕಳ್ಳತನವಾಗಿರುವ ಬಗ್ಗೆ ಷೋರೂಮ್‌ ಮಾಲೀಕರು ದೂರು ನೀಡಿದ್ದರು.ದೂರಿನಲ್ಲಿ ಷೋರೂಮ್‌ನಿಂದ 3 ಹೆಚ್‌.ಪಿ ಕಂಪನಿಯ ಲ್ಯಾಪ್‌ಟಾಪ್‌ಗಳು, 1 ಡೆಲ್‌ ಕಂಪನಿಯ ಲ್ಯಾಪ್‌ಟಾಪ್‌ ಹಾಗೂ 16 ಹೆಚ್‌.ಪಿ ಕಂಪನಿಯ ಪೆನ್‌ಡ್ರೈವ್‌ಗಳನ್ನು, ಜುಲೈ ಮಾಹೆಯ ಮೊದಲನೆ ಮತ್ತು ಎರಡನೇ ವಾರದಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿದ್ದರು.

ಈ ಕುರಿತು ರಾಮಮೂರ್ತಿ ನಗರ ಪೊಲೀಸ್‌‍ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ ಷೋರೂಮ್‌ನ ಸೇಲ್‌್ಸ ಎಕ್ಸಿಕ್ಯೂಟಿವ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಕಳವು ಮಾಡಿದ ಕೆಲವು ಲ್ಯಾಪ್‌ಟಾಪ್‌ ಹಾಗೂ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ, ಬಂದಂತಹ ಹಣವನ್ನು ಖರ್ಚು ಮಾಡಿಕೊಂಡಿರುವುದಾಗಿ ತಿಳಿಸಿದ್ದಾನೆ.

ಉಳಿದ ಮೂರು ಲ್ಯಾಪ್‌ಟಾಪ್‌ ಹಾಗೂ ಐದು ಹೆಚ್‌.ಪಿ ಪೆನ್‌ಡ್ರೈವ್‌ಗಳನ್ನು ತನ್ನ ವಾಸದ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ ಮೇರೆಗೆ ಪೊಲೀಸರು ಆತನ ಮನೆಯಿಂದ ಅವುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

4.50 ಲಕ್ಷ ವೌಲ್ಯದ 32 ಮೊಬೈಲ್‌ ಜಪ್ತಿ
ತನ್ನ ದುಶ್ಚಟಗಳಿಗಾಗಿ ಹಣ ಹೊಂದಿಸಲು ಮೊಬೈಲ್‌ ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ವೈಟ್‌ಫೀಲ್‌್ಡ ಠಾಣೆ ಪೊಲೀಸರು ಬಂಧಿಸಿ 4.50 ಲಕ್ಷ ರೂ. ಮೌಲ್ಯದ 32 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯನಗರ ಮುಖ್ಯರಸ್ತೆಯಲ್ಲಿರುವ ಕಾರ್‌ ವಾಟರ್‌ ವಾಷ್‌ ಅಂಗಡಿಯಲ್ಲಿ ವ್ಯಕ್ತಿಯೊಬ್ಬರು ಮಲಗಿದ್ದಾಗ ಅವರ ಮೊಬೈಲ್‌ ಕಳ್ಳತನವಾಗಿತ್ತು. ಈ ಬಗ್ಗೆ ಅವರು ವೈಟ್‌ಫೀಲ್‌್ಡ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಆರೋಪಿಯನ್ನು ವಿಜಯನಗರ ಮುಖ್ಯರಸ್ತೆಯ ಉರ್ದು ಶಾಲೆ ಮುಂಭಾಗದಲ್ಲಿ ಎರಡು ಮೊಬೈಲ್‌ ಸಮೇತ ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮೊಬೈಲ್‌ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದು, ಆತನು ನೀಡಿದ ಮಾಹಿತಿ ಮೇರೆಗೆ ಕಾಡುಗೋಡಿ ಪೊಲೀಸ್‌‍ ಠಾಣಾ ವ್ಯಾಪ್ತಿಯ ಚಿಕ್ಕಬನಹಳ್ಳಿಯ ಮುನಿಯಪ್ಪನವರ ಲೇಬರ್‌ ಶೆಡ್‌ನಲ್ಲಿ ಇಟ್ಟಿದ್ದಂತಹ ಕಳ್ಳತನ ಮಾಡಿದ್ದ 30 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಮೌಲ್ಯ 4.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಹಗಲು-ರಾತ್ರಿ ವೇಳೆ ಮನೆಗಳ್ಳತನ : 8 ಲಕ್ಷ ವೌಲ್ಯದ ಚಿನ್ನಾಭರಣ ವಶಕ್ಕೆ
ಹಗಲು ಮತ್ತು ರಾತ್ರಿ ವೇಳೆ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿ 8 ಲಕ್ಷ ರೂ. ಬೆಲೆ ಬಾಳುವ 101 ಗ್ರಾಂ ತೂಕದ ಚಿನ್ನಾಭರಣ ಹಾಗೂ 2 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿಕ್ಕಬಾಣವಾರದ ವಿನಾಯಕ ಲೇಔಟ್‌ನ ನಿವಾಸಿಯೊಬ್ಬರು ತಮ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿ, ನಂತರ ಗಂಗಮನಗುಡಿಯಲ್ಲಿರುವ ಅಕ್ಕನ ಮನೆಗೆ ಹೋಗಿ ಅಲ್ಲಿಯೇ ಉಳಿದುಕೊಂಡಿದ್ದರು.ಮಾರನೆಯ ದಿನ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಪಕ್ಕದ ಮನೆಯವರು ದೂರವಾಣಿ ಕರೆ ಮಾಡಿ ನಿಮ ಮನೆಯ ಬಾಗಿಲ ಬೀಗವನ್ನು ಯಾರೋ ಕಳ್ಳರು ಹೊಡೆದಿದ್ದಾರೆಂದು ತಿಳಿಸಿದ್ದು, ತಕ್ಷಣ ನಿವಾಸಿ ಮನೆಯ ಬಳಿ ಹೋಗಿ ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಕಳ್ಳರು ಮನೆಯ ಮುಂದಿನ ಬಾಗಿಲನ್ನು ಒಡೆದು ಒಳನುಗ್ಗಿ, ಕೊಠಡಿಯ ಬೀರುವಿನಲ್ಲಿದ್ದ 40-50 ಗ್ರಾಂ ತೂಕದ ಚಿನ್ನಾಭರಣ, 1-ಲ್ಯಾಪ್‌ಟಾಪ್‌ ಕಳುವಾಗಿರುತ್ತದೆಂದು ಅವರು ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಕಲೆ ಹಾಕಿ ನೆಲಮಂಗಲದ ಕುಣಿಗಲ್‌ ಬೈಪಾಸ್‍ ರಸ್ತೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮನೆಗಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ.

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಕಳುವು ಮಾಡಿರುವ ಚಿನ್ನಾಭರಣಗಳ ಪೈಕಿ ತನ್ನ ವಾಸದ ಮನೆಯಲ್ಲಿಟ್ಟಿದ್ದ 50 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಲ್ಲದೆ, 51 ಗ್ರಾಂ ಚಿನ್ನಾಭರಣಗಳನ್ನು ಹಾಸನ ಜಿಲ್ಲೆಯ ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಒಟ್ಟು 101 ಗ್ರಾಂ ಚಿನ್ನಾಭರಣ, 2-ಲ್ಯಾಪ್‌ಟಾಪ್‌ಗಳು ಮತ್ತು 1 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯ ಬಂಧನದಿಂದ ಸೋಲದೇವನಹಳ್ಳಿ ಪೊಲೀಸ್‌‍ ಠಾಣೆಯ 5 ರಾತ್ರಿ ಕನ್ನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಇನ್‌್ಸಪೆಕ್ಟರ್‌ ಹರಿಯಪ್ಪ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ವೀಲಿಂಗ್‌ ಹುಚ್ಚಾಟ : ಮೂವರ ವಿರುದ್ಧ ಎಫ್‌ಐಆರ್
ದ್ವಿಚಕ್ರ ವಾಹನದಲ್ಲಿ ವೀಲಿಂಗ್‌ ಮಾಡುತ್ತಾ ರಸ್ತೆಯಲ್ಲಿ ಹುಚ್ಚಾಟ ಮೆರೆಯುತ್ತಿದ್ದ ಮೂವರ ವಿರುದ್ಧ ನಗರ ಸಂಚಾರಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಶಿವಾಜಿನಗರ ಸಂಚಾರಿ ಠಾಣಾ ವ್ಯಾಪ್ತಿಯ ಬಿಆರ್‌ವಿ ಜಂಕ್ಷನ್‌ ಬಳಿ ಇಬ್ಬರು ದ್ವಿಚಕ್ರ ವಾಹನ ಸವಾರರನ್ನು ವಾಹನ ಸಮೇತ ವಶಕ್ಕೆ ಪಡೆದು ಎಫ್‌ಐಆರ್‌ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಎಚ್‌ಎಎಲ್‌ ಏರ್‌ಪೋರ್ಟ್‌ ಸಂಚಾರಿ ಠಾಣೆ ಪೊಲೀಸರು ಕಾಡುಬೀಸನಹಳ್ಳಿ ಬ್ರಿಡ್ಜ್ ಬಳಿ ವೀಲ್ಹಿಂಗ್‌ ಮಾಡುತ್ತಿದ್ದ ಸವಾರನನ್ನು ದ್ವಿಚಕ್ರ ವಾಹನ ಸಮೇತ ಜಪ್ತಿ ಮಾಡಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಆಡುಗೋಡಿ ಸಂಚಾರಿ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಡೈರಿ ವೃತ್ತದ ಕಡೆಯಿಂದ ಮೈಕೋ ಬಂಡೆ ಜಂಕ್ಷನ್‌ ಕಡೆಗೆ ವೀಲ್ಹಿಂಗ್‌ ಮಾಡುತ್ತಾ ಬಂದ ಅಪ್ರಾಪ್ತನನ್ನು ತಡೆದು ವಾಹನ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

RELATED ARTICLES

Latest News