ಸಂಪಿಗೆ ಚಿತ್ರಮಂದಿರ ಮಾಲೀಕರ ಮನೆಯಲ್ಲಿ ದೋಚಿದ್ದ ನೇಪಾಳ ಮೂಲದ ಮೂವರ ಬಂಧನ : 1.12 ಕೋಟಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳ ವಶ
ಸಂಪಿಗೆ ಚಿತ್ರಮಂದಿರದ ಮಾಲೀಕರು ಮನೆಯಲ್ಲಿ ಒಂಟಿಯಾಗಿದ್ದಾಗ ಅವರಿಗೆ ಪ್ರಜ್ಞೆ ತಪ್ಪಿಸುವ ಔಷಧಿಯನ್ನು ಮದ್ಯದಲ್ಲಿ ಬೆರೆಸಿ ಕೋಟ್ಯಂತರ ರೂ. ಮೌಲ್ಯದ ಆಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದ ನೇಪಾಳ ಮೂಲದ ಮೂವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ 1.12 ಕೋಟಿ ಮೌಲ್ಯದ ಚಿನ್ನಾಭರಣ, ಬೆಳ್ಳಿವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಅಫಿಲ್ ಶಾಯಿ(41), ಫುಡ್ ಡೆಲವರಿ ಬಾಯ್ ಜಗದೀಶ್ ಶಾಯಿ(30) ಮತ್ತು ಮತ್ತೊಬ್ಬ ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಶಾಯಿ(40) ಬಂಧಿತರು. ಈ ಪ್ರಕರಣದ ಪ್ರಮುಖ ಆರೋಪಿಗಳಾದ ನೇಪಾಳ ದಂಪತಿ ಗಣೇಶ್ ಮತ್ತು ಗೀತಾ ತಲೆಮರೆಸಿಕೊಂಡಿದ್ದು, ಇವರ ಪತ್ತೆ ಕಾರ್ಯ ಮುಂದುವರೆದಿದೆ.
ಜಯನಗರ ಮೂರನೇ ಹಂತದಲ್ಲಿ ಸಂಪಿಗೆ ಚಿತ್ರಮಂದಿರದ ಮಾಲೀಕ ನಾಗೇಶ್(65) ಅವರ ಮನೆಯಿದ್ದು, ಇವರ ಮನೆಯಲ್ಲಿ ಎರಡು ವರ್ಷಗಳಿಂದ ನೇಪಾಳ ಮೂಲದ ದಂಪತಿ ಸೆಕ್ಯೂರಿಟಿಗಾರ್ಡ್ ಹಾಗೂ ಗಾರ್ಡನ್ ಕೆಲಸ ಮಾಡಿಕೊಂಡಿದ್ದರು.
ಅ.21ರಂದು ಸಂಜೆ ನಾಗೇಶ್ ಅವರ ಮಗ ವೆಂಕಟೇಶ್ ಕುಟುಂಬದವರೊಂದಿಗೆ ಹೊರಗೆ ಹೋಗಿದ್ದು, ಆ ವೇಳೆ ನಾಗೇಶ್ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಇದೇ ಸಮಯಕ್ಕಾಗಿ ಹೊಂಚು ಹಾಕುತ್ತಿದ್ದ ನೇಪಾಳದ ದಂಪತಿ ನಾಗೇಶ್ ಅವರಿಗೆ ಮದ್ಯದಲ್ಲಿ ಪ್ರಜ್ಞೆ ತಪ್ಪಿಸುವ ಔಷಧಿ ಬೆರೆಸಿದ್ದಾರೆ. ನಾಗೇಶ್ ಆ ಮದ್ಯ ಸೇವಿಸಿದ ನಂತರ ಪ್ರಜ್ಞೆ ತಪ್ಪಿರುತ್ತಾರೆ. ನಂತರ ತನ್ನ ಮೂವರು ಸಹಚರರೊಂದಿಗೆ ಸೇರಿಕೊಂಡು ಮನೆಯ ಕೊಠಡಿಯ ಬೀರುವಿನಲ್ಲಿದ್ದ 2 ಕೆಜಿ 510 ಗ್ರಾಂ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ 5 ಲಕ್ಷ ರೂ. ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಕಾರ್ಯಕ್ರಮದ ನಿಮಿತ್ತ ಹೊರಗೆ ಹೋಗಿದ್ದ ನಾಗೇಶ್ ಅವರು ಮನೆಗೆ ಬಂದಾಗ ಮನೆಯಲ್ಲಿದ್ದ ಸೆಕ್ಯೂರಿಟಿಗಾರ್ಡ್ ಹಾಗೂ ಆತನ ಪತ್ನಿ ಇರಲಿಲ್ಲ. ಅನುಮಾನಗೊಂಡು ಕೊಠಡಿಯೊಳಗೆ ಹೋಗಿ ನೋಡಿದಾಗ ಹಣ, ಆಭರಣ ಕಳವಾಗಿರುವುದು ಗೊತ್ತಾಗಿದೆ. ತಕ್ಷಣ ವೆಂಕಟೇಶ್ ಅವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ 5 ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ತನಿಖಾ ತಂಡಗಳು ಗುಜರಾತ್, ರಾಜಸ್ಥಾನ, ದೆಹಲಿ ಹಾಗೂ ಮುಂಬೈಗೆ ತೆರಳಿ ಆರೋಪಿಗಳ ಮೊಬೈಲ್ ನೆಟ್ವರ್ಕ್ ಆಧರಿಸಿ ಮಾಹಿತಿ ಕಲೆ ಹಾಕಿದಾಗ ಆರೋಪಿ ದಂಪತಿ ನೇಪಾಳಕ್ಕೆ ಪರಾರಿಯಾಗಿರುವುದು ಗೊತ್ತಾಗಿದೆ.ತನಿಖೆ ಮುಂದುವರೆಸಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ವರ್ತೂರಿನ ಬಲಗೆರೆ ರಸ್ತೆಯಲ್ಲಿ ನೇಪಾಳ ಮೂಲದ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಚಿನ್ನಾಭರಣ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಮೂವರನ್ನು ಸುದೀರ್ಘ ವಿಚಾರಣೆಗೊಳಪಡಿಸಿದಾಗ ಆರೋಪಿಯೊಬ್ಬ, ವರ್ತೂರಿನ ಮನೆಯಲ್ಲಿ ಕಳವು ಮಾಡಿದ ಚಿನ್ನಾಭರಣಗಳನ್ನು ಇಟ್ಟಿರುವುದಾಗಿ ತಿಳಿಸಿದ ಮೇರೆಗೆ ಆತನ ಮನೆಯಿಂದ 1 ಕೆಜಿ 600 ಗ್ರಾಂ ಚಿನ್ನಾಭರಣ, 450 ಗ್ರಾಂ ಬೆಳ್ಳಿ ವಸ್ತುಗಳು, ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 1.12 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಇನ್ಸ್ಪೆಕ್ಟರ್ ದೀಪಕ್ ಮತ್ತು ಸಿಬ್ಬಂದಿ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಕೇರ್ಟೇಕರ್ ಸೆರೆ : 12 ಲಕ್ಷ ಮೌಲ್ಯದ ಆಭರಣ ಜಪ್ತಿ
ಬೆಂಗಳೂರು, ನ.12- ಮನೆಯೊಂದರಲ್ಲಿ ಕೇರ್ ಟೇಕರ್ ಕೆಲಸ ಮಾಡಿಕೊಂಡು ಮಾಲೀಕರ ಕಣ್ತಪ್ಪಿಸಿ ಆಭರಣ ಕಳವು ಮಾಡಿದ್ದ ಮಹಿಳಾ ಕೇರ್ ಟೇಕರ್ಳನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ 12 ಲಕ್ಷ ಮೌಲ್ಯದ 108 ಗ್ರಾಂ ಆಭರಣ ವಶಪಡಿಸಿಕೊಂಡಿದ್ದಾರೆ.
ಅಂಜನಾದ್ರಿ ಲೇಔಟ್ನ ಅಪಾರ್ಟ್ಮೆಂಟ್ವೊಂದ ರಲ್ಲಿ ವಾಸವಿರುವ ನಿವಾಸಿ ಯೊಬ್ಬರು ಮನೆಯಲ್ಲಿ ಅತ್ತೆಯನ್ನು ನೋಡಿ ಕೊಳ್ಳಲು ಮಹಿಳೆ ಯೊಬ್ಬರನ್ನು ಕೇರ್ ಟೇಕರ್ ಆಗಿ ಕೆಲಸಕ್ಕೆ ನೇಮಿಸಿಕೊಂಡಿದ್ದರು.ಆಕೆ ಇವರ ಮನೆಯಲ್ಲಿರುವ ಆಭರಣಗಳನ್ನೆಲ್ಲ ಗಮನಿಸಿದ್ದಾಳೆ. ದಸರಾ ಹಬ್ಬದಂದು ಅನಂತಪದನಾಭ ದೇವರ ವ್ರತ ಮಾಡಿದ್ದು, ಮನೆಯವರೆಲ್ಲ ಚಿನ್ನದ ಆಭರಣಗಳನ್ನು ಧರಿಸಿದ್ದು, ಮಾರನೆ ದಿನ ಆಭರಣಗಳನ್ನು ತೆಗೆದು ರೂಮಿನಲ್ಲಿ ಕಬ್ಬಿಣದ ಪೆಟ್ಟಿಗೆಯಲ್ಲಿ ಇಡಲಾಗಿತ್ತು.
ಅ.31ರಂದು ಬೆಳಗ್ಗೆ ಲಕ್ಷ್ಮಿಪೂಜೆ ಮಾಡುವ ಸಲುವಾಗಿ ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ಚಿನ್ನದ ಒಡವೆಗಳನ್ನು ನೋಡಿದಾಗ ಅದರಲ್ಲಿ ಒಡವೆಗಳು ಇರಲಿಲ್ಲ. ಮನೆಯಲ್ಲಿ ಕೇರ್ ಟೇಕರ್ ಕೆಲಸ ಮಾಡಿಕೊಂಡಿದ್ದ ಮಹಿಳೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು ಸಿಕೆ ಪಾಳ್ಯದ ಬಿಜಿ ರಸ್ತೆಯಲ್ಲಿರುವ ಕೇರ್ ಟೇಕರ್ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆಭರಣ ಕಳವು ಮಾಡಿರುವುದಾಗಿ ತಿಳಿಸಿದ್ದಾಳೆ.ಆಕೆಯ ಹೇಳಿಕೆ ಮೇರೆಗೆ ಮನೆಯಲ್ಲಿಟ್ಟಿದ್ದ 18 ಗ್ರಾಂ ಆಭರಣ, ಆರ್ಬಿಐ ಲೇಔಟ್ನ ಜ್ಯುವೆಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದ 82 ಗ್ರಾಂ ಆಭರಣ ಹಾಗೂ ಆಕೆಯ ಗಂಡನಿಗೆ ನೀಡಿದ್ದ 8 ಗ್ರಾಂ ಚಿನ್ನದ ಓಲೆಯನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 12 ಲಕ್ಷ ರೂ.ಗಳೆಂದು ಇನ್ಸ್ಪೆಕ್ಟರ್ ಪಾಪಣ್ಣ ತಿಳಿಸಿದ್ದಾರೆ.
ಜ್ಯುವೆಲರಿ ಅಂಗಡಿ ದೋಚಿದ್ದ ಆರೋಪಿ ಸೆರೆ : 9 ಲಕ್ಷ ಮೌಲ್ಯದ 126 ಗ್ರಾಂ ಆಭರಣ ಜಪ್ತಿ
ಬೆಂಗಳೂರು, ನ.12- ಜ್ಯುವೆಲರಿ ಅಂಗಡಿಯೊಂದರಲ್ಲಿ ಆಭರಣ ಕಳವು ಮಾಡಿ ಮಾರಾಟ ಮಾಡಿದ್ದ ಬಿಕಾಂ ಪದವೀಧರನನನ್ನು ಸುಬ್ರಹಣ್ಯಪುರ ಠಾಣೆ ಪೊಲೀಸರು ಬಂಧಿಸಿ 9 ಲಕ್ಷ ಮೌಲ್ಯದ 126 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಮಂಡ್ಯ ಮೂಲದ ಬಿಕಾಂ ಪದವೀಧರ ಲಿಖಿತ್ ಬಂಧಿತ ಆರೋಪಿ. ಈತ ನಗರದ ಸುಂಕದಕಟ್ಟೆಯಲ್ಲಿ ವಾಸವಿದ್ದನು.
ಸೂರ್ಯನಗರ ಜ್ಯುವೆಲರಿ ಅಂಗಡಿಯೊಂದರಲ್ಲಿ ಚಿನ್ನಾಭರಣದ ಬಾಕ್ಸ್ ವೊಂದನ್ನು ಕಳವು ಮಾಡಿ ಆ ಬಾಕ್ಸ್ ನಲ್ಲಿದ್ದ ಆಭರಣಗಳ ಪೈಕಿ 34 ಗ್ರಾಂ ಆಭರಣಗಳನ್ನು ದೊಡ್ಡಬಸ್ತಿಯಲ್ಲಿರುವ ಜ್ಯುವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದನು.
ಸುಬ್ರಹಣ್ಯಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾಗ ಉತ್ತರಹಳ್ಳಿ ಸರ್ಕಲ್ ಬಳಿ ಜ್ಯುವೆಲರಿ ಅಂಗಡಿಯೊಂದರ ಮುಂಭಾಗ ಅನುಮಾನಾಸ್ಪದವಾಗಿ ಬ್ಯಾಗ್ ಹಿಡಿದುಕೊಂಡು ಓಡಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಬ್ಯಾಗ್ನಲ್ಲಿ ಚಿನ್ನಾಭರಣದ ಬಾಕ್ಸ್ ಇರುವುದು ಕಂಡುಬಂದಿದ್ದು, ಅದರಲ್ಲಿದ್ದ 92 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡರು.
ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸೂರ್ಯನಗರ ಜ್ಯುವೆಲರಿ ಅಂಗಡಿಯೊಂದರಲ್ಲಿ ಕಳವು ಮಾಡಿರುವುದಾಗಿ ತಿಳಿಸಿದ ಮೇರೆಗೆ ದೊಡ್ಡಬಸ್ತಿಯಲ್ಲಿರುವ ಜ್ಯುವೆಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದ 34 ಗ್ರಾಂ ಚಿನ್ನಾಭರಣ ಸೇರಿ ಒಟ್ಟು 126 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದು, ಅದರ ಮೌಲ್ಯ 9 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಇನ್್ಸಪೆಕ್ಟರ್ ರಾಜು ಮತ್ತು ಸಿಬ್ಬಂದಿ ತಂಡ ಪ್ರಕರಣ ಪತ್ತೆಮಾಡುವಲ್ಲಿ ಯಶಸ್ವಿಯಾಗಿದೆ.
ಮನೆ ಬಾಗಿಲು ಒಡೆದು ಕಳ್ಳತನ ಮಾಡಿದವನ ಬಂಧನ : 25 ಲಕ್ಷ ಮೌಲ್ಯದ ಆಭರಣ, 2.5 ಲಕ್ಷ ಹಣ ಜಪ್ತಿ
ಸ್ವೀಟ್ ಅಂಗಡಿಯೊಂದರ ಮ್ಯಾನೇಜರ್ ಮನೆಯ ಬಾಗಿಲು ಒಡೆದು ಒಳನುಗ್ಗಿ ಬೀರುವಿನಲ್ಲಿದ್ದ ಆಭರಣ ಹಾಗೂ ನಗದು ಕಳ್ಳತನ ಮಾಡಿದ್ದ ಅಂತಾರಾಜ್ಯ ಆರೋಪಿಯೊಬ್ಬನನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿ, 25 ಲಕ್ಷ ರೂ. ಮೌಲ್ಯದ 208 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ ವಸ್ತುಗಳು ಹಾಗೂ 2.5 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.
ಮೂಲತಃ ಕೋಲಾರ ಜಿಲ್ಲೆಯ ನಾಗರಾಜ(62) ಬಂಧಿತ ಅಂತಾರಾಜ್ಯ ಕಳ್ಳ. ಈತ ತಮಿಳುನಾಡಿನಲ್ಲಿ ವಾಸವಾಗಿದ್ದನು. ಈತನ ವಿರುದ್ಧ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಟ್ಟು 32 ಪ್ರಕರಣಗಳು ದಾಖಲಾಗಿವೆ. ಕೋಣನಕುಂಟೆ ಕ್ರಾಸ್ನಲ್ಲಿ ವಾಸವಿರುವ ಕಾಂತಿ ಸ್ವೀಟ್ಸ್ ಅಂಗಡಿಯಲ್ಲಿ ಮ್ಯಾನೇಜರ್ ಆಗಿರುವ ನಾಗೇಶ್ ಅವರು ಆಯುಧ ಪೂಜೆ ನಿಮಿತ್ತ ಸ್ವೀಟ್ಸ್ ಆರ್ಡರ್ ಹೆಚ್ಚಾಗಿದ್ದ ಕಾರಣ ರಾತ್ರಿ ಅಲ್ಲಿಯೇ ಉಳಿದುಕೊಂಡು ಮಾರನೇ ದಿನ ಮನೆಗೆ ಬಂದಾಗ ಬಾಗಿಲು ಒಡೆದಿರುವುದು ಕಂಡುಬಂದಿದೆ.
ಒಳಗೆ ಹೋಗಿ ನೋಡಿದಾಗ ಬೀರುವಿನಲ್ಲಿದ್ದ ಹಣ, ಆಭರಣಗಳು ಕಳ್ಳತನವಾಗಿರುವ ಬಗ್ಗೆ ತಿಳಿದು ಸುಬ್ರಮಣ್ಯಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆ ಹಾಕಿ ಅತ್ತಿಬೆಲೆ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿ ಸಿದಾಗ ಕಳವು ಮಾಡಿರುವುದಾಗಿ ತಿಳಿಸಿದ್ದಾನೆ.
ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ತನ್ನ ಸ್ನೇಹಿತನಿಗೆ ನೀಡಿದ್ದ 140 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 2.5 ಲಕ್ಷ ನಗದನು ಆತ ವಾಸವಿರುವ ಕೃಷ್ಣಗಿರಿ ತಾಲ್ಲೂಕಿನ ಸೂಳಗೇರಿಯ ಮನೆಯಿಂದ ವಶಪಡಿಸಿಕೊಂಡಿದ್ದಾರೆ.ಅಲ್ಲದೆ ಆರೋಪಿಯು ಬಾಮೈದುನನಿಗೆ ನೀಡಿದ್ದ 67 ಗ್ರಾಂ ಚಿನ್ನಾಭರಣ ಹಾಗೂ 900 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ಪೆಕ್ಟರ್ ರಾಜು ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ. ಆರೋಪಿಯ ಬಂಧನದಿಂದ ಸುಬ್ರಹಣ್ಯಪುರ ಪೊಲೀಸ್ ಠಾಣೆಯ ಒಂದು ಮನೆಗಳವು ಪ್ರಕರಣ ಹಾಗೂ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ಮೂರು ಮನೆಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ಹಣ ಕೊಡದ ಹೆತ್ತ ತಾಯಿಯನ್ನೇ ಕೊಂದ ಮಗನ ಬಂಧನ
ಹಣ ಕೊಡಲಿಲ್ಲವೆಂದು ಹೆತ್ತ ತಾಯಿಯನ್ನೇ ಕೊಂದಿದ್ದ ಮಗ ಹಾಗೂ ಕುಮಕ್ಕು ನೀಡಿದ್ದ ಸಂಬಂಧಿಯನ್ನು ಬೊಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಜಯಮ ಅವರ 2ನೇ ಮಗ ಚಾಲಕ ವೃತ್ತಿ ಮಾಡಿಕೊಂಡಿದ್ದ ಉಮೇಶ್(33) ಹಾಗೂ ಸಂಬಂಧಿ ಸುರೇಶ್(43) ಬಂಧಿತ ಆರೋಪಿಗಳು.
ಹೊಂಗಸಂದ್ರದಲ್ಲಿ ವಾಸವಾಗಿದ್ದ ಜಯಮ ಅವರಿಗೆ ಇಬ್ಬರು ಮಕ್ಕಳು. ಮೊದಲನೇ ಮಗ ಆನೇಕಲ್ನಲ್ಲಿ ನೆಲೆಸಿದ್ದು, ಕೆಎಸ್ಆರ್ಟಿಸಿ ಬಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2ನೇ ಮಗ ಉಮೇಶ್ ನಗರದಲ್ಲೇ ವಾಸವಾಗಿದ್ದುಕೊಂಡು ಟೆಂಪೋ, ಆಟೋ ಚಾಲಕ ವೃತ್ತಿ ಮಾಡಿಕೊಂಡಿದ್ದು, ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದನು.ಜಯಮ ಅವರು ಮೊದಲನೇ ಮಗನಿಗೆ ಹಣ ಕೊಡುತ್ತಿದ್ದರು. 2ನೇ ಮಗನಿಗೆ ಕೊಡುತ್ತಿರಲಿಲ್ಲ. ಇದೇ ವಿಚಾರವಾಗಿ ತಾಯಿ ಮಗನ ಮಧ್ಯೆ ಮನಸ್ತಾಪ ಉಂಟಾಗುತ್ತಿತ್ತು. ಇದಕ್ಕೆ ಸಂಬಂಧಿಕ ಸುರೇಶ್ ಕುಮಕ್ಕು ನೀಡುತ್ತಿದ್ದನು.
ಇದೇ 8 ರಂದು ರಾತ್ರಿ ಮನೆಗೆ ಬಂದ ಉಮೇಶ್ ತಾಯಿ ಜಯಮ ಅವರ ಜೊತೆ ಜಗಳ ಮಾಡಿ ಮುಖಕ್ಕೆ ಗುದ್ದಿ, ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದನು. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಕೈಗೊಂಡ ಪೊಲೀಸರು ಮಕ್ಕಳನ್ನು ವಿಚಾರಣೆಗೊಳ ಪಡಿಸಿದಾಗ 2ನೇ ಮಗ ಉಮೇಶ್ ಕೊಲೆ ಮಾಡಿರುವುದು ಗೊತ್ತಾಗಿದೆ. ಉಮೇಶ್ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊಲೆಗೆ ಸಹಕರಿಸಿದ ಸುರೇಶ್ನನ್ನು ಸಹ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದ ನಾಲ್ವರು ಸುಲಿಗೆಕೋರರ ಸೆರೆ
ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿ 3 ಲಕ್ಷ ಮೌಲ್ಯದ 2 ದ್ವಿಚಕ್ರ ವಾಹನ, 11 ಗ್ರಾಂ ಚಿನ್ನದ ಸರ ಹಾಗೂ ಮೂರು ಐಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.ದೊರೆಸ್ವಾಮಿ ಪಾಳ್ಯದ ನಿವಾಸಿ ಬನೇರುಘಟ್ಟದಲ್ಲಿ ಔಷಧಿ ಅಂಗಡಿ ಇಟ್ಟುಕೊಂಡಿದ್ದು, ಸ್ನೇಹಿತರನ್ನು ಭೇಟಿ ಮಾಡುವ ಸಲುವಾಗಿ ಶೆಟ್ಟಿಹಳ್ಳಿಗೆ ಹೋಗಿದ್ದರು.
ಸ್ನೇಹಿತರೊಂದಿಗೆ ಅವರ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ನಾಲ್ವರು ಸುಲಿಗೆಕೋರರು ಚಾಕು ತೋರಿಸಿ ಬೆದರಿಸಿ ಹಣ ಹಾಗೂ ಮೊಬೈಲ್ ನೀಡುವಂತೆ ತಾಕೀತು ಮಾಡಿದಾಗ ಇವರುಗಳು ನಿರಾಕರಿಸಿದ್ದರಿಂದ ಚಾಕುವಿನಿಂದ ಹಲ್ಲೆ ಮಾಡಿ ಕತ್ತಿನಲ್ಲಿದ್ದ 50 ಸಾವಿರ ಬೆಲೆ ಬಾಳುವ ಚಿನ್ನದ ಸರ ಹಾಗೂ ಪರ್ಸ್ನಲ್ಲಿದ್ದ 5 ಸಾವಿರ ಹಣ, ಎರಡು ಮೊಬೈಲ್ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ 3 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ಪೆಕ್ಟರ್ ಹನುಮಂತರಾಜು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ನಾಲ್ವರು ಅಂತರರಾಜ್ಯ ಕಳ್ಳರ ಬಂಧನ 21 ಬೈಕ್ಗಳ ವಶ
ನಾಲ್ವರು ಅಂತರರಾಜ್ಯ ಬೈಕ್ ಕಳ್ಳರನ್ನು ಬಂಧಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು 25 ಲಕ್ಷ ರೂ. ಮೌಲ್ಯದ, 21 ಐಷಾರಾಮಿ ಬೈಕ್ಗಳನ್ನ ವಶಪಡಿಸಿಕೊಂಡಿದ್ದಾರೆ. ಆನೇಕಲ್ ಉಪವಿಭಾಗ ವ್ಯಾಪ್ತಿಯ ಠಾಣೆಗಳಲ್ಲಿ ದ್ವಿಚಕ್ರ ವಾಹನಗಳ ಪತ್ತೆಗಾಗಿ ಎಸ್ಪಿ ಬಾಬಾ ಅವರು ಎಎಸ್ಪಿ ಮತ್ತು ಆನೇಕಲ್ ಡಿಎಸ್ಪಿ, ಜಿಗಣಿ ಟಾಣೆ ಇನ್ಸ್ ಪೆಕ್ಟರ್ ಮಂಜುನಾಥ್ ಮತ್ತು ವಿಭಾಗಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದ್ದರು.
ಈ ವಿಶೇಷ ತಂಡ ಜಿಗಣಿ ಠಾಣೆಯಲ್ಲಿ ಕಳುವಾಗಿದ್ದ ದ್ವಿಚಕ್ರವಾಹನವನ್ನು ಪತ್ತೆ ಕಾರ್ಯವನ್ನು ಕೈಗೊಂಡು ಸಿಸಿಟಿವಿಗಳನ್ನು ಪರಿಶೀಲಿಸಿದಾಗ, ಕಾನೂನು ಸಂಘರ್ಷಕ್ಕೊಳಗಾದ ಮೂವರು ಬಾಲಕರೂ ಸೇರಿದಂತೆ ಒಟ್ಟು 7 ಜನ ಆರೋಪಿಗಳನ್ನು ಬಂಧಿಸಿ ವಿವದೆಡೆ ಕಳುವಾಗಿದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಲಾಗಿದೆ. ಆರೋಪಿಗಳು ಜಿಗಣಿ ಠಾಣೆ ವ್ಯಾಪ್ತಿಯಲ್ಲಿ ಆರು ಪ್ರಕರಣ ಸೂರ್ಯನಗರದಲ್ಲಿ -4, ಆನೇಕಲ್ನಲ್ಲಿ-3, ಹೆಬ್ಬಗೋಡಿ, ಅತ್ತಿಬೆಲೆ ಹಾಗೂ ಕೋಲಾರ ಜಿಲ್ಲೆಯಲ್ಲಿ ಬಂಗಾರಪೇಟೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣ ಪತ್ತೆಯಾಗಿದೆ.
ಇದಲ್ಲದೆ ತಮಿಳುನಾಡಿನಲ್ಲೂ 5 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 21 ಐಷಾರಾಮಿ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಹೊಸೂರಿನ ಸಿನಿಮಾ ಮಾಲ್ವೊಂದರಲ್ಲಿ ಬೌನ್ಸರ್ರಾಗಿ ಕೆಲಸ ಮಾಡುತ್ತಿದ್ದು, ವಿಲಾಸಿ ಜೀವನಕ್ಕಾಗಿ ಸ್ನೇಹಿತರ ಜೊತೆ ಸೇರಿ ಮೋಜು ಮಸ್ತಿಗಾಗಿ ರಾತ್ರಿ ವೇಳೆ ದ್ವಿಚಕ್ರ ವಾಹನಗಳ ನಿಲುಗಡೆ ಮಾಡಿರುವ ಪ್ರದೇಶಗಳಲ್ಲಿ ಸುತ್ತಾಡಿ ನಂತರ ಬೆಳಗ್ಗಿನ ಜಾವ ಕಳವು ಮಾಡುತ್ತಿದ್ದರು. ಕಳವು ಮಾಡಿ ಅದರ ನಂಬರ್ ಪ್ಲೇಟ್ಗಳನ್ನು ನಾಶಗೊಳಿಸಿ ನಂತರ ಡಂಕಣಿಕೋಟೆ ತಾಲೂಕಿನ ರೈತರುಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು ತಿಳಿದು ಬಂದಿದೆ.
ಆರು ಮಂದಿ ಬಂಧನ 50 ಕೆಜಿ ಚರಸ್ ಚಾಕಲೇಟ್ ವಶ
ಗೂಡ್ಸ್ ವಾಹನದಲ್ಲಿ ಗಾಂಜಾ ಮತ್ತು ಚರಸ್ ಚಾಕಲೇಟ್ಗಳನ್ನು ಮಾರಾಟ ಮಾಡುತ್ತಿದ್ದ 6 ಮಂದಿ ಅಂತರ್ರಾಜ್ಯ ಮಾದಕ ವಸ್ತು ಮಾರಾಟಗಾರ ಆರೋಪಿಗಳನ್ನು ಬಂಧಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ಪೊಲೀಸರು 10 ಲಕ್ಷ ರೂ. ಮೌಲ್ಯದ 50 ಕೆಜಿ ಚರಸ್ ಚಾಕಲೇಟ್ ಹಾಗೂ ಅರ್ಧ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಅಂಕೂರ್, ಸುರಜ್, ಸೋಮ್ಸೇನ್, ಆನಂದ್ ಕುಮಾರ್, ಜೀತ್ಸಿಂಗ್ ಮತ್ತು ಅಭಯ್ ಸಿಂಗ್ ಎಂದು ಗುರುತಿಲಾಗಿದೆ. ರಾಜಾಜಿನಗರದ ಮನೆಯೊಂದರ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಅಲ್ಲಿ 14 ಕೆಜಿ, 400 ಗ್ರಾಂ ತೂಕದ 2880 ಚರಸ್ ಚಾಕಲೇಟ್ ಹಾಗೂ ಬಂಧಿತ ಆರೋಪಿಗಳಿಂದ ಒಟ್ಟು 60 ಕೆಜಿ ತೂಕದ 12000 ಚರಸ್ ಚಾಕಲೇಟ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ನ. 11ರಂದು ಬೆಳಗ್ಗೆ 11.30ರ ಸಂದರ್ಭದಲ್ಲಿ ಜಿಗಣಿ ಕೆರೆಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಜಿಗಣಿ ಠಾಣಾ ಪೊಲೀಸರು ಕಾರ್ಯಾಚರಣೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿ ಅವರು ತಂದಿದ್ದ ಗೂಡ್್ಸ ವಾಹನ ಜೊತೆಗೆ ಅದರಲ್ಲಿದ್ದ ಅರ್ಧ ಕೆಜಿ ಗಾಂಜಾ ಹಾಗೂ 5 ಚರಸ್ ಚಾಕಲೇಟ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಅವರನ್ನು ವಿಚಾರಣೆ ನಡೆಸಿದಾಗ ರಾಜಾಜಿನಗರ ಮನೆಯೊಂದರಲ್ಲಿ ಇದನ್ನು ತಯಾರಿಸುತ್ತಿರುವುದು ಗೊತ್ತಾಗಿ ಅಲ್ಲಿ ದಾಳಿ ನಡೆಸಿ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಿ ಬಾರಿ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
4.50 ಲಕ್ಷ ಮೌಲ್ಯದ ಆಭರಣ ವಶ :
ಮನೆಗಳ್ಳತನ ಹಾಗೂ ಸರಗಳ್ಳನ ಮಾಡುತ್ತಿದ್ದ ಇಬ್ಬರನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕ್ಲೋನಿ ಕಾನ್ವೆಂಟ್ ಎದುರಿನ ನಿವಾಸಿಯೊಬ್ಬರ ಮನೆಯ ಟೇಬಲ್ ಮೇಲೆ ಇಟ್ಟಿದ್ದ 40 ಗ್ರಾಂ ಚಿನ್ನಾಭರಣ ಹಾಗೂ 2 ಸಾವಿರ ಹಣ ಕಳವಾಗಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ನಾಗಪ್ಪ ಬ್ಲಾಕ್ ಶ್ರೀರಾಮಪುರದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ನಂತರ ತನಿಖೆ ಮುಂದುವರೆಸಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬನನ್ನು ಶ್ರೀರಾಮಪುರದ ಆತನ ಮನೆಯಿಂದ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಕಳವು ಮಾಡಿದ ಚಿನ್ನಾಭರಣಗಳನ್ನು ವಯ್ಯಾಲಿಕಾವಲ್ನ ಗಿರವಿ ಅಂಗಡಿಯಲ್ಲಿ ಇಟ್ಟಿರುವುದಾಗಿ ತಿಳಿಸಿದ ಮೇರೆಗೆ ಪೊಲೀಸರು ಆ ಅಂಗಡಿಯಿಂದ 20 ಗ್ರಾಂ ಸರವನ್ನು ವಶಕ್ಕೆ ಪಡೆದಿದ್ದಾರೆ.
ಒಟ್ಟಾರೆ ಈ ಪ್ರಕರಣದ ಇಬ್ಬರು ಆರೋಪಿಗಳಿಂದ 4.50 ಲಕ್ಷ ರೂ. ಮೌಲ್ಯದ 57 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದು, ಆರೋಪಿಗಳ ಬಂಧನದಿಂದ ಮೂರು ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಇನ್ಸ್ಪೆಕ್ಟರ್ ಜಗದೀಶ್ ತಿಳಿಸಿದ್ದಾರೆ.
ಇ-ಕಾಮರ್ಸ್ ವಿತರಕ ಸವಾರರ ವಿರುದ್ಧ ಕಾರ್ಯಾಚರಣೆ :
ನಗರ ಸಂಚಾರಿ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡುವ ಇ-ಕಾಮರ್ಸ್ ವಿತರಕ ಸವಾರರ ವಿರುದ್ಧ ನಿನ್ನೆ ವಿಶೇಷ ಕಾರ್ಯಾಚರಣೆ ಕೈಗೊಂಡು 5,979 ಪ್ರಕರಣಗಳನ್ನು ದಾಖಲಿಸಿಕೊಂಡು 30.57 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.
ಹೆಲೆಟ್ ರಹಿತ ಚಾಲನೆ 523 ಪ್ರಕರಣ, 2.62 ಲಕ್ಷ ರೂ. ದಂಡ, ಚಾಲನೆ ವೇಳೆ ಮೊಬೈಲ್ ಬಳಕೆ 179-86 ಸಾವಿರ ರೂ., ಸಿಗ್ನಲ್ ಜಂಪ್ 281-1.33 ಲಕ್ಷ ರೂ., ನೋ ಎಂಟ್ರಿ 671-3.34 ಲಕ್ಷ ರೂ., ಟ್ರಿಪಲ್ ರೈಡಿಂಗ್ 146-85,500 ರೂ., ನೋ ಪಾರ್ಕಿಂಗ್ 1260-6.14 ಲಕ್ಷ ರೂ., ದೋಷಪೂರಿಕ ಸಂಖ್ಯಾಫಲಕ 85-51,500 ರೂ., ಏಕಮುಖ ಸಂಚಾರ ಚಾಲನೆ 109-55 ಸಾವಿರ ರೂ., ಹಿಂಬದಿ ಸವಾರನ ಹೆಲೆಟ್ ರಹಿತ ಚಾಲನೆ 2304-11.29 ಲಕ್ಷ ರೂ., ಫುಟ್ಪಾತ್ ಪಾರ್ಕಿಂಗ್ 99- 47,900 ರೂ., ಫುಟ್ಪಾತ್ ಚಾಲನೆ 29-24,500 ರೂ., ಸಂಖ್ಯಾಫಲಕ ಇಲ್ಲದೆ ವಾಹನ ಚಾಲನೆ 37-18,500 ರೂ. ಹಾಗೂ ಇತರೆ ಸಂಚಾರ ನಿಯಮ ಉಲ್ಲಂಘಿಸಿದ 256 ಪ್ರಕರಣಗಳಲ್ಲಿ 2.14 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿ ವಿಶೇಷ ಕಾರ್ಯಾಚರಣೆಯನ್ನು ಹಮಿಕೊಂಡು ಸಂಚಾರಿ ನಿಯಮ ಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.