Friday, November 22, 2024
Homeರಾಜ್ಯರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಉತ್ತಮ ಮಳೆ ಸಾಧ್ಯತೆ

ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಉತ್ತಮ ಮಳೆ ಸಾಧ್ಯತೆ

ಬೆಂಗಳೂರು, ಜೂ.2- ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ. ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿ ಮೂರು ದಿನ ಕಳೆದಿದ್ದು, ಮತ್ತೆ ಅಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಕರ್ನಾಟಕಕ್ಕೆ ಇಂದು ಮುಂಗಾರು ಆಗಮನವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿತ್ತು. ಆದರೆ ಈತನಕ ಮುಂಗಾರು ಪ್ರವೇಶ ಮಾಡಿರುವುದನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ.

ಇಂದು ಸಂಜೆ ವೇಳೆಗೆ ಅಥವಾ ನಾಳೆ ಮುಂಗಾರು ಪ್ರವೇಶದ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ ಎಂದು ಹವಾಮಾನ ತಜ್ಞ ಸಿ.ಎಸ್‌‍.ಪಾಟೀಲ್‌ ತಿಳಿಸಿದರು. ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಮೇಲೈ ಸುಳಿಗಾಳಿ ಉಂಟಾಗಿದ್ದು, ಅದರ ಪ್ರಭಾವದಿಂದ ಕೇರಳ ಹಾಗೂ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುತ್ತಿದೆ.

ಮುಂದಿನ ನಾಲ್ಕೈದು ದಿನಗಳ ಕಾಲ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಲಿದೆ. ನಿನ್ನೆಯಿಂದಲೇ ಮುಂಗಾರು ರಾಜ್ಯಕ್ಕೆ ಆಗಮಿಸಲು ಪೂರಕವಾದ ವಾತಾವರಣ ಸೃಷ್ಟಿಯಾಗಿದೆ ಎಂದರು.

ಉತ್ತರ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸೂಚನೆಗಳಿವೆ. ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಆಗೊಮೆ ಈಗೊಮೆ 40 ರಿಂದ 50 ಕಿ.ಮೀ. ವೇಗದಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಲಕ್ಷಣಗಳಿವೆ ಎಂದು ಹೇಳಿದರು.
ನಿನ್ನೆ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗಿದೆ ಎಂದು ತಿಳಿಸಿದರು.

ಹವಾಮಾನ ಮುನ್ಸೂಚನೆ ಪ್ರಕಾರ, ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಸಂಜೆ ಅಥವಾ ರಾತ್ರಿ ವೇಳೆ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಗಳಿವೆ. ಕೆಲೆವೆಡೆ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದರು.

ಬೆಂಗಳೂರು, ದೇವನಹಳ್ಳಿ ತಲಾ 5 ಸೆಂ.ಮೀ., ಗಂಗಾವತಿ 6 ಸೆಂ.ಮೀ., ಚಾಮರಾಜನಗರ 4 ಸೆಂ.ಮೀ., ಎಚ್‌.ಡಿ.ಕೋಟೆ, ಚಿಕ್ಕಬಳ್ಳಾಪುರ, ಹೊಸಕೋಟೆ, ಗುಬ್ಬಿ, ಮಂಡ್ಯ, ಮದ್ದೂರು, ಉಡುಪಿ, ಚಿಂತಾಮಣಿಯಲ್ಲಿ ತಲಾ 3 ಸೆಂ.ಮೀ., ಹೆಸರುಘಟ್ಟ, ತುಮಕೂರು, ಮೈಸೂರು, ನಾಗಮಂಗಲ, ಪರಶುರಾಮಪುರ, ಶಿರಾ, ಹುಣಸೂರು ತಲಾ 2 ಸೆಂ.ಮೀ., ಕೋಣನೂರು, ಕೆ.ಆರ್‌.ಪೇಟೆ, ಶ್ರವಣಬೆಳಗೊಳ, ಕೊಳ್ಳೆಗಾಲ, ರಾಮನಗರ, ರಾಯಲ್ಪಡು, ದೇವರಹಿಪ್ಪರಗಿ, ಕುಮಟಾದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

RELATED ARTICLES

Latest News