ನವದೆಹಲಿ,ಮಾ.26- ಏಪ್ರಿಲ್ 1 ರಿಂದ ಅನ್ವಯವಾಗುವಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಶೇ.3 ರಿಂದ 5 ರಷ್ಟು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈಗಾಗಲೇ ಹಲವು ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದು, ಟೋಲ್ ಶುಲ್ಕ ಪರಿಷ್ಕರಣೆ ವಾಹನ ಸವಾರರಿಗೆ ಬೆವರಿಳಿಸುವ ಸಾಧ್ಯತೆಯಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಾಜ್ಯ ಯೋಜನಾ ನಿರ್ದೇಶಕ ಕೆ.ಬಿ.ಜಯರಾಂ ಟೋಲ್ ಶುಲ್ಕ ಹೆಚ್ಚಳದ ಮುನ್ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿರುವ ಮೈಸೂರು-ಬೆಂಗಳೂರು ರಸ್ತೆ, ಬೆಂಗಳೂರು-ತಿರುಪತಿ ರಸ್ತೆ, ಬೆಂಗಳೂರು-ಹೈದರಾಬಾದ್ ರಸ್ತೆ, ಬೆಂಗಳೂರು ವಿಮಾನನಿಲ್ದಾಣ ರಸ್ತೆ, ದಾಬಸ್‌ಪೇಟ್-ದೇವನಹಳ್ಳಿ ನಡುವಿನ ಉಪನಗರ ವರ್ತುಲ ರಸ್ತೆ ಸೇರಿದಂತೆ 66 ಟೋಲ್‌ಗಳಲ್ಲಿ ಶುಲ್ಕ ಪರಿಷ್ಕರಣೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಗಡ್ಕರಿ ಸ್ಪಷ್ಟನೆ :
ಟೋಲ್ ಶುಲ್ಕ ಸಂಗ್ರಹದ ಬಗ್ಗೆ ರಾಜ್ಯಸಭೆಯಲ್ಲಿ ಉತ್ತರ ನೀಡಿರುವ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ದೇಶದ ಒಟ್ಟು ಟೋಲ್ ಶುಲ್ಕ ಸಂಗ್ರಹ 64,809 ಕೋಟಿ ರೂ.ಗಳಿಗೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಅವರು, 2019-20 ರಲ್ಲಿ 27,503 ಕೋಟಿಗಳಷ್ಟಿದ್ದ ಶುಲ್ಕದ ಸಂಗ್ರಹ 2023-24ರ ವೇಳೆಗೆ ಶೇ.35ರಷ್ಟು ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಉಪಗ್ರಹ ಆಧರಿತ ಟೋಲ್ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ಭದ್ರತೆ ಹಾಗೂ ಗೌಪ್ಯತೆಯ ಕಾರಣಗಳಿಗಾಗಿ ಮತ್ತಷ್ಟು ಚರ್ಚೆಗೆ ಒಳಪಡಿಸಲಾಗುತ್ತಿದೆ. ಪ್ರಾಯೋಗಿಕವಾಗಿ ಕೆಲವು ಕಡೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಉಪಗ್ರಹ ಆಧರಿತ ಟೋಲ್ ಶುಲ್ಕ ಸಂಗ್ರಹ ವ್ಯವಸ್ಥೆ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇಂಡಿಯನ್ ರೀಜಿನಲ್ ನ್ಯಾವಿಗೇಷನ್ ಸೆಟಲೈಟ್ ಸಿಸ್ಟಂ (ಐಆರ್‌ಎನ್‌ಎಸ್‌ಎಸ್) ಎಂದು ಕರೆಯಲಾಗುವ ನಾವ್ ಐಸಿ ವ್ಯವಸ್ಥೆ ಜಾರಿಗೆ ಅಮೆರಿಕದ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ ಪ್ರಸ್ತಾವನೆ ನೀಡಿದ್ದು, ಟೋಲ್‌ಗಳನ್ನು ತೆರವು ಮಾಡಿ ಉಪಗ್ರಹ ಆಧಾರಿತ ಶುಲ್ಕ ಸಂಗ್ರಹಣೆಯ ಈ ವ್ಯವಸ್ಥೆಯನ್ನು ಭದ್ರತೆ ಹಾಗೂ ಗೌಪ್ಯತೆಯ ಕಾರಣಕ್ಕಾಗಿ ಮರುಪರಿಶೀಲಿಸುವ ಅಗತ್ಯವಿದೆ ಎಂದು ತಜ್ಞರ ಉನ್ನತಾಧಿಕಾರ ಸಮಿತಿ ಸಲಹೆ ನೀಡಿದೆ.
ಈಗಾಗಲೇ ಸರಣಿ ಸಭೆಗಳನ್ನು ನಡೆಸಿ ಚರ್ಚೆಗಳನ್ನು ಮುಂದುವರೆಸಲಾಗಿದೆ. ಕಾರಿಡಾರ್ ಅಥವಾ ಒಂದು ಯೋಜನೆಯ ವ್ಯಾಪ್ತಿಯಲ್ಲಿ ಎಎನ್‌ಪಿಆರ್ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ರೂಪಿಸಿ ತಡೆರಹಿತ ಪ್ರಯಾಣಕ್ಕೆ ಹಾಗೂ ಕಡಿಮೆ ಬಳಕೆದಾರರ ಶುಲ್ಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈಗಿರುವ ವ್ಯವಸ್ಥೆಯಲ್ಲಿ ನಾವ್ ಐಸಿ ಜಾರಿಗೊಳಿಸಲು ಹೆಚ್ಚುವರಿ ಉಪಗ್ರಹಗಳನ್ನು ಸ್ಥಾಪಿಸಬೇಕಿದೆ ಮತ್ತು ಸ್ವೀಕಾರಾರ್ಹ ವ್ಯವಸ್ಥೆಯನ್ನು ರೂಪಿಸಿ ಕರಾರುವಾಕ್ಕಾದ ಸ್ಥಳ ಗುರುತಿಸುವಿಕೆಗೂ ಕ್ರಮ ಕೈಗೊಳ್ಳಬೇಕಿದೆ ಎಂದಿದ್ದಾರೆ.
ಉತ್ತರ ಪ್ರದೇಶದ ದ್ವಾರಕಾ ಎಕ್‌್ಸಪ್ರೆಸ್‌ಗೆ ಗೋರಂಡ,ಚೊರ್ಸಾಯಿ, ನೆಮಿಲಿ, ಅರ್ಬನ್ ಎಕ್‌್ಸಟೆನ್ಷನ್ ರೋಡ್ ಪ್ರಾಯೋಗಿಕವಾಗಿ ಟೋಲ್ ರಹಿತವಾದ ಶುಲ್ಕ ಸಂಗ್ರಹಣೆಗೆ ಆಸಕ್ತರಿಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಈ ಪ್ರಾಯೋಗಿಕ ಯೋಜನೆಯ ಪರಿಣಾಮಗಳು ಹಾಗೂ ಸಾಮರ್ಥ್ಯವನ್ನು ಆಧರಿಸಿ ಇತರ ಕಡೆಗಳಲ್ಲಿ ಅನುಷ್ಠಾನಕ್ಕೆ ತರಲು ಚರ್ಚಿಸುವುದಾಗಿ ತಿಳಿಸಿದ್ದಾರೆ.
ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ರಹಿತ ವಾಹನಗಳ ಸಂಚಾರದ ದತ್ತಾಂಶಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಉತ್ತರ ಪ್ರದೇಶದ ಮಿರ್ಜಾಪುರ ಟೋಲ್ ಪ್ಲಾಜಾದಲ್ಲಿ ನಕಲಿ ಸಾಫ್‌್ಟವೇರ್ ಮೂಲಕ ರಸ್ತೆ ಬಳಕೆ ಶುಲ್ಕವನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಎಸಗಲಾಗಿದೆ. ಈ ಕುರಿತು ತನಿಖೆಗೆ ಮೂವರು ಅಧಿಕಾರಿಗಳನ್ನೊಳಗೊಂಡ ಉನ್ನತ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.