ಬೆಂಗಳೂರು, ಜೂ.16- ಲಾಟರಿ ಬೆಳೆ ಎಂದು ಹೇಳಲಾಗುವ ಕೆಂಪು ಸುಂದರಿ ಟಮೊಟೋ ಬೆಲೆ ಮತ್ತೆ ಏರುತ್ತಿದ್ದು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ.ಕಳೆದ ಕೆಲ ತಿಂಗಳ ಹಿಂದೆ ಡಬ್ಬಲ್ ಸೆಂಚುರಿ ಭಾರಿಸಿ ಭಾರಿ ಸುದ್ದಿಯಾಗಿದ್ದ ಟಮೋಟೋ ಮತ್ತೆ ಸೆಂಚುರಿಯತ್ತ ಮುನ್ನುಗ್ಗುತ್ತಿದೆ, ಅಡುಗೆ ಮಾಡಲು ಯಾವ ತರಕಾರಿ ಇಲ್ಲದ್ದರೂ ಪರವಾಗಿಲ್ಲ ಒಂದೆ ಒಂದು ಟಮೋಟೋ ಇದ್ದರೆ ಸಾಕು ಅಂದಿನ ದಿನ ಕಳೆಯಬಹುದು ಅಷ್ಟರ ಮಟ್ಟಿಗೆ ಅಡುಗೆ ಮನೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆ.
ಐಮೋಟೋ ಬೆಳೆದು ಶ್ರೀಮಂತರಾದವರು ಇದ್ದರೆ ಸಾಲದ ಸುಳಿಗೆ ಸಿಲುಕಿರುವವರ ಹಲವಾರು ನಿದರ್ಶನಗಳನ್ನು ಕಾಣಬಹುದಾಗಿದೆ. ಅದಕ್ಕೆ ಗ್ರಾಮಾಂತರ ಭಾಗದಲ್ಲಿ ಇದು ಲಾಟರಿ ಬೆಳೆ ಎಂದು ಹೇಳುತ್ತಾರೆ. ಬೆಳೆ ಕೈ ಹಿಡಿದರೆ ಅದೃಷ್ಟ ಒಲಿಯುತ್ತದೆ, ಇಲ್ಲದಿದ್ದರೆ ಕೆ.ಜಿ.ಗೆ 2 ರಿಂದ 5 ರೂ. ದರವಾಗಿ ರೋಡಿಗೆ ಸುರಿಯ ಬೇಕಾಗುತ್ತದೆ, ಬೆಲೆ ಯಾವಾಗ ಬರುತ್ತದೆ, ಯಾವಾಗ ಕಡಿಮೆಯಾಗುತ್ತದೆ ಎಂದು ಯಾರಿಂದಲೂ ಊಹಿಸಲಾಗದು.
ಕಳೆದ ಕೆಲ ದಿನಗಳ ಹಿಂದೆ ಬರೋಬ್ಬರಿ ಸುಮಾರು ಎರಡು ತಿಂಗಳುಗಳ ಕಾಲ ಮೇಲೇರಿದ ಬೆಲೆ ಕೆಳಗೆ ಇಳಿದೇ ಇರಲಿಲ್ಲ. ಈ ಸಂದರ್ಭದಲ್ಲಿ ಬೆಳೆ ಬೆಳೆದಿದ್ದ ರೈತರು ಲಕ್ಷಾಧೀಶ್ವರರು ಹಾಗೂ ಕೋಟ್ಯಾಧಿಪತಿಗಳಾದ ಉದಾಹರಣೆಗಳನ್ನು ಕಾಣಬಹುದಾಗಿದೆ.
ಕಳೆದ ಎರಡು ಮೂರು ತಿಂಗಳು ಬಿಸಿಲು ಜಾಸ್ತಿ ಇತ್ತು. ನೀರಿಲ್ಲದೆ ಇಳುವರಿ ಇರಲಿಲ್ಲ. ಈಗ ಕೆಲವು ಕಡೆ ಮಳೆಯಾಗುತ್ತಿದೆ ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ ಹಾಗಾಗಿ ಬೆಲೆ ಏರಿಕೆಯಾಗುತ್ತಿದೆ.
ಏಷ್ಯಾದಲ್ಲೆ ದೊಡ್ಡ ಮಾರುಕಟ್ಟೆಯಾದ ಕೋಲಾರ ಮಾರುಕಟ್ಟೆಯಲ್ಲೆ ಬೆಲೆ ದುಬಾರಿಯಾಗಿದೆ. 15 ಕೆ.ಜಿ. ತೂಕದ ಒಂದು ಕ್ರೇಟ್ 800 ರಿಂದ ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಗೆ ಪಾರ್ಸೆಲ್ ಹೊಗುತ್ತಿದ್ದು, ಕೋಲಾರ ಚಿಕ್ಕಬಳ್ಳಾಪುರ, ಮಾಲೂರು, ಹೊಸಕೋಟೆ, ಚಿಂತಾಮಣಿ, ಗೌರಿಬಿದರನೂರು ತಾಲ್ಲೂಕುಗಳಲ್ಲಿ ಹೆಚ್ಚಾಗಿ ಬೆಳೆ ಬೆಳೆಯುವ ಪ್ರದೇಶವಾಗಿದ್ದು, ಕೆಲ ದಿನಗಳಿಂದ ಸುರಿದ ಮಳೆಗೆ ಬೆಳೆ ನಾಶವಾಗಿದ್ದು, ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಾಲು ಬಾರದಿರುವುದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಬಹುದು.
ತುಮಕೂರು, ರಾಮನಗರ, ಮಾಗಡಿ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಗ್ರಾಮಾಂತರ ಪ್ರದೇಶದಿಂದಲೂ ಟಮೋಟೋ ಮಾರುಕಟ್ಟಗೆ ಹೆಚ್ಚಾಗಿ ಬಾರದಿರುವುದರಿಂದ ಬೆಲೆ ಹೆಚ್ಚಳವಾಗಿದೆ.
ಚಿಲ್ಲರೆಯಾಗಿ ಬೆಂಗಳೂರಿನಲ್ಲಿ ಕೆ.ಜಿ.ಗೆ 70 ರಿಂದ 80 ರೂ.ಗೆ ಮರಾಟವಾಗುತ್ತಿದೆ. ಮಳೆ ಬಂದ ಹಿನ್ನಲೆಯಲ್ಲಿ ರೈತರು ಈಗ ಗಿಡಗಳನ್ನು ನಾಟಿ ಮಾಡಿದ್ದು, ಬೆಳೆ ಬರಲು ಇನ್ನೂ ಒಂದೂವರೆ ಎರಡು ತಿಂಗಳು ಕಾಲಾವಕಾಶ ಬೇಕು. ಅಲ್ಲದೆ ಇರುವ ಬೆಳೆ ಮಳೆಗೆ ನಾಶವಾಗಿದ್ದು ಹೊಸ ಮಾಲು ಮಾರುಕಟ್ಟೆಗೆ ಬರುವ ವರೆಗೂ ಬೆಲೆ ಇಳಿಯುವ ಲಕ್ಷಣಗಳಿಲ್ಲ ಎಂದು ವ್ಯಾಪಾರಿ ಗೊವಿಂದರಾಜು ಎನ್ನುವವರು ತಿಳಿಸಿದ್ದಾರೆ.
ಬೆಲೆ ಹೆಚ್ಚಾದರೆ ರೈತರಿಗೇನೂ ಅಷ್ಟೇನೂ ಸಿಗುವುದಿಲ್ಲ. ಇಲ್ಲಿ ವ್ಯಾಪಾರಿಗಳಿಗೆ ಹಾಗೂ ದಲ್ಲಾಳಿಗಳಿಗೆ ಲಾಭವಾಗುತ್ತದೆ. ರೈತರ ಬಳಿ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ಕೂಲಿ, ಗೊಬ್ಬರ, ಬಿತ್ತನೆ ಬೀಜ, ಔಷಧಿ ಎಲ್ಲವನ್ನೂ ಲೆಕ್ಕ ಹಾಕಿದರೆ ರೈತರಿಗೇನೂ ಉಳಿಯವುದಿಲ್ಲ.