ನವದೆಹಲಿ,ಸೆ.8- ಆಡಳಿತರೂಢ ಎನ್‌ಡಿಎ ಹಾಗೂ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ನಡುವಿನ ತೀವ್ರ ಹಣಾಹಣಿಗೆ ಸಾಕ್ಷಿಯಾಗಿರುವ ದೇಶದ 17ನೇ ಉಪರಾಷ್ಟ್ರಪತಿ ಚುನಾವಣೆ ನಾಳೆ ನಡೆಯಲಿದ್ದು, ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ನಡುವಿನ ಸಮರದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಲೋಕಸಭೆ ಹಾಗೂ ರಾಜ್ಯ ಸಭೆ ಸದಸ್ಯರು (ನಾಮ ನಿದೇರ್ಶನ ಸೇರಿದಂತೆ) ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಸಂಜೆ ನಂತರ ಫಲಿತಾಂಶ ಪ್ರಕಟಗೊಳ್ಳಲಿದೆ.
ಈಗಿನ ಅಂಕಿ ಸಂಖ್ಯೆಗಳ ಪ್ರಕಾರ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಹಾಗೂ ಮಹಾರಾಷ್ಟ್ರದ ಹಾಲಿ ರಾಜ್ಯಪಾಲರಾಗಿರುವ ಸಿ.ಪಿ. ರಾಧಾಕೃಷ್ಣನ್ ಅವರ ಗೆಲವು ತುಂಬಾ ಸ್ಪಷ್ಟವಾಗಿದೆ.ಇವರಿಗೆ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಮತ್ತು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಪ್ರಬಲ ಸ್ಪರ್ಧೆ ಒಡ್ಡಿರುವುದು ಚುನಾವಣಾ ಕಣದ ಕಾವು ಹೆಚ್ಚುವಂತೆ ಮಾಡಿದೆ. ರಾಜಕಾರಣದಲ್ಲಿ ನಡೆಯುವ ಕೊನೆ ಕ್ಷಣದ ಬೆಳವಣಿಗೆಗಳು ಇಡೀ ಲೆಕ್ಕಚಾರವನ್ನೇ ಬುಡಮೇಲು ಮಾಡಬಹುದು.
ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆ, ಇದೀಗ ಕೇವಲ ಸಂಖ್ಯಾಬಲದ ಸ್ಪರ್ಧೆಯಾಗಿ ಉಳಿದಿಲ್ಲ. ಬದಲಾಗಿ, ಇದು ದಕ್ಷಿಣ ಭಾರತದ ಇಬ್ಬರು ಪ್ರಮುಖ ವ್ಯಕ್ತಿಗಳ ನಡುವಿನ ಹೋರಾಟವಾಗಿ ಮಾರ್ಪಟ್ಟಿದ್ದು, ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.ಇದು ರಾಜಕೀಯ ತಂತ್ರಗಾರಿಕೆ ಹಾಗೂ ಸೈದ್ಧಾಂತಿಕ ಸಂಘರ್ಷಕ್ಕೆ ವೇದಿಕೆಯಾಗಿದೆ.
ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ, ತಮಿಳುನಾಡಿನ ಹಿರಿಯ ರಾಜಕಾರಣಿ ಮತ್ತು ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಕಣಕ್ಕಿಳಿಸಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಸ್ಪಷ್ಟ ಕಾರ್ಯತಂತ್ರವನ್ನು ಬಿಜೆಪಿ ಪ್ರದರ್ಶಿಸಿದೆ.
ಇದಕ್ಕೆ ಪ್ರತಿಯಾಗಿ, ಇಂಡಿಯಾ ಮೈತ್ರಿಕೂಟವು ಸುದೀರ್ಘ ಚರ್ಚೆಯ ನಂತರ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಆಂಧ್ರ ಪ್ರದೇಶ ಮೂಲದ ಬಿ. ಸುದರ್ಶನ್ ರೆಡ್ಡಿ ಅವರನ್ನು ತಮ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದೆ. ಅನುಭವಿ ರಾಜಕಾರಣಿಯ ವಿರುದ್ಧ ನ್ಯಾಯಾಂಗದ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಕಣಕ್ಕಿಳಿಸುವ ಮೂಲಕ, ವಿಪಕ್ಷಗಳು ಈ ಚುನಾವಣೆಯನ್ನು ಸೈದ್ಧಾಂತಿಕ ಹೋರಾಟವಾಗಿ ಪರಿವರ್ತಿಸಲು ಯತ್ನಿಸಿವೆ.
ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ಅವರು ಜುಲೈ 22 ರಂದು ತಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಚುನಾವಣೆ ನಡೆಯಲಿದೆ.
ರಾಜ್ಯಸಭೆಯ ಕಾರ್ಯದರ್ಶಿ ಜನರಲ್ ಪಿ.ಸಿ.ಮೋದಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. ರಾಜ್ಯಸಭಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಗರಿಮಾ ಜೈನ್ ಮತ್ತು ರಾಜ್ಯಸಭಾ ಸಚಿವಾಲಯದ ನಿರ್ದೇಶಕ ವಿಜಯ್ ಕುಮಾರ್ ಅವರನ್ನು ಸಹಾಯಕ ಚುನಾವಣಾಧಿಕಾರಿಗಳಾಗಿ ನೇಮಿಸಲಾಗಿದೆ. ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಸಲು ಸಂವಿಧಾನದ ವಿಧಿ 324ರ ಅಡಿಯಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ ಅಧಿಕಾರವಿದೆ. ವಿಧಿ 66(1)ರ ಪ್ರಕಾರ, ಉಪರಾಷ್ಟ್ರಪತಿಯನ್ನು ರಾಜ್ಯಸಭೆಯ ಚುನಾಯಿತ ಸದಸ್ಯರು, ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು ಮತ್ತು ಲೋಕಸಭೆಯ ಚುನಾಯಿತ ಸದಸ್ಯರನ್ನು ಒಳಗೊಂಡ ಚುನಾವಣಾ ಕಾಲೇಜ್ ಆಯ್ಕೆ ಮಾಡುತ್ತದೆ.
ಯಾರು ಈ ಸಿ.ಪಿ.ರಾಧಾಕೃಷ್ಣನ್? :
ತಮಿಳುನಾಡು ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ರಾಧಾಕೃಷ್ಣನ್, ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು. 1998 ಮತ್ತು 1999ರಲ್ಲಿ ಕೊಯಮತ್ತೂರು ಕ್ಷೇತ್ರದಿಂದ ಸತತ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಪಶ್ಚಿಮ ತಮಿಳುನಾಡಿನ ಪ್ರಬಲ ೞಗೌಂಡರ್‌ೞ ಸಮುದಾಯಕ್ಕೆ ಸೇರಿದ ಇವರನ್ನು, ಆ ಭಾಗದಲ್ಲಿ ೞತಮಿಳುನಾಡಿನ ವಾಜಪೇಯಿ; ಎಂದೂ ಕರೆಯಲಾಗುತ್ತದೆ. ಅವರ ಸೌಮ್ಯ ಸ್ವಭಾವ ಮತ್ತು ಅಜಾತಶತ್ರು ವ್ಯಕ್ತಿತ್ವವು ಅವರ ರಾಜಕೀಯ ಜೀವನದ ಪ್ಲಸ್ ಪಾಯಿಂಟ್ ಆಗಿದೆ.
ಬಿಜೆಪಿಯ ಹಿಂದಿನ ರೂಪವಾದ ಜನಸಂಘದಿಂದಲೂ ಅವರು ಬಿಜೆಪಿಯಲ್ಲೊಬ್ಬರಾಗಿ, ದೇಶದಲ್ಲಿ ಆ ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರಾಗಿದ್ದಾರೆ.ಸಾರ್ವಜನಿಕ ಜೀವನದಲ್ಲಿ ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿ, ಎರಡು ಬಾರಿ ಸಂಸದರಾಗಿದ್, ಆನಂತರ ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳಿಗೆ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಅವರಿಗೆ ಆರ್.ಎಸ್.ಎಸ್ ನಂಟು ಬೆಳೆದಿತ್ತು. ಆರ್ ಎಸ್‌ಎಸ್ ಸಿದ್ಧಾಂತಗಳಿಂದ ಪ್ರಭಾವಿತರಾದ ಅವರು ತಮಗಿನ್ನೂ 16 ವರ್ಷ ವಯಸ್ಸಿದ್ದಾಗಲೇ ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಿಸುತ್ತಿದ್ದರು. ಆರ್‌ಎಸ್‌ಎಸ್‌ನಲ್ಲಿ ಜನಸಂಘಟನೆ ಇತ್ಯಾದಿಗಳನ್ನು ಕರತಲಾಮಲಕ ಮಾಡಿಕೊಂಡ ಅವರು, ಈಗಿನ ಭಾರತೀಯ ಜನತಾ ಪಕ್ಷದ ಹಿಂದಿನ ಸ್ವರೂಪವಾದ ಜನಸಂಘ ಪಕ್ಷಕ್ಕೆ ಸೇರ್ಪಡೆಯಾದರು. ಆ ಪಕ್ಷದಿಂದ ಕೈಗೊಳ್ಳಲಾದ ಹಲವಾರು ಜನಪರ ಅಭಿಯಾನಗಳಲ್ಲಿ, ಆಂದೋಲನಗಳಲ್ಲಿ ಭಾಗವಹಿಸಿದ್ದರು.
ಪ್ರಾದೇಶಿಕ ಪಕ್ಷಗಳ ಧರ್ಮಸಂಕಟ :
ಈ ಚುನಾವಣೆಯು ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಎನ್‌ಡಿಎ, ತಮಿಳುನಾಡಿನ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಡಿಎಂಕೆಗೆ ಪರೋಕ್ಷ ಸವಾಲು ಹಾಕಿದೆ. ಇದೀಗ ವಿಪಕ್ಷಗಳು ಆಂಧ್ರ ಪ್ರದೇಶದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಎನ್‌ಡಿಎ ಮಿತ್ರಪಕ್ಷವಾದ ಟಿಡಿಪಿ ಹಾಗೂ ಜನಸೇನಾ ಮತ್ತು ವೈಎಸ್‌ಆರ್ ಕಾಂಗ್ರೆಸ್ ಹಾಗೂ ಬಿಆರ್‌ಎಸ್ ಪಕ್ಷಗಳಿಗೆ ಇದು ಧರ್ಮಸಂಕಟ ತಂದೊಡ್ಡಿದೆ.
ಈ ಹಿಂದೆ ಎನ್‌ಡಿಎಗೆ ಬೆಂಬಲ ಘೋಷಿಸಿದ್ದ ವೈಎಸ್‌ಆರ್ ಕಾಂಗ್ರೆಸ್ ಈಗ ತಮದೇ ರಾಜ್ಯದ ಅಭ್ಯರ್ಥಿ ಸ್ಪರ್ಧೆಯಲ್ಲಿರುವುದರಿಂದ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ನ್ಯಾ. ರೆಡ್ಡಿ ಅವರು ಸಾಗಿ ಬಂದ ಹಾದಿ :
ನ್ಯಾಯಮೂರ್ತಿ ರೆಡ್ಡಿ ಜುಲೈ 8, 1946ರಲ್ಲಿ ಜನಿಸಿದರು.1971ರಲ್ಲಿ ಉಸಾನಿಯಾ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದರು. ಅದೇ ವರ್ಷ, ಅವರು ಆಂಧ್ರಪ್ರದೇಶದ ವಕೀಲರ ಪರಿಷತ್‌ನಲ್ಲಿ ನ್ಯಾಯವಾದಿಯಾಗಿ ನೋಂದಾಯಿಸಿಕೊಂಡರು.
ಅವರು ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ರಿಟ್ ಮತ್ತು ಸಿವಿಲ್ ಪ್ರಕರಣಗಳ ವಕೀಲಿಕೆ ಮಾಡಿದ್ದಾರೆ. 198890ರ ಅವಧಿಯಲ್ಲಿ ಹೈಕೋರ್ಟ್‌ನಲ್ಲಿ ಸರ್ಕಾರಿ ವಕೀಲರಾಗಿ ಮತ್ತು 1990ರಲ್ಲಿ 6 ತಿಂಗಳು ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ವಕೀಲರಾಗಿ ರೆಡ್ಡಿ ಅವರು ಕೆಲಸ ಮಾಡಿದ್ದಾರೆ. ಉಸಾನಿಯಾ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರ ಮತ್ತು ಸ್ಥಾಯಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಒಟ್ಟು ಮತದಾರರು 787
ಅಭ್ಯರ್ಥಿ ಗೆಲುವಿಗೆ ಮತಗಳು 394
ರಾಜ್ಯಸಭೆಯ ಒಟ್ಟು ಮತಗಳು 245
ರಾಜ್ಯಸಭೆ 233
12( ನಾಮನಿರ್ದೇಶಿತ ಸೇರಿ)
(5 ಸ್ಥಾನಗಳು ಖಾಲಿ)
ಬಿಜೆಪಿ129 ಸದಸ್ಯರು
ಇಂಡಿಯಾ ಒಕ್ಕೂಟ 79 ಸದಸ್ಯರು
ಲೋಕಸಭೆ 543
ಎನ್‌ಡಿಎ 293
ಇಂಡಿಯಾ ಒಕ್ಕೂಟ234
ಎನ್‌ಡಿಎ ಗೆ ಸಿಗಬಹುದಾದ ಮತಗಳು 422
ಇಂಡಿಯಾ ಒಕ್ಕೂಟಕ್ಕೆ ಬರಬಹುದಾದ ಮತಗಳು 313