ಬೆಂಗಳೂರು, ಮೇ 15– ವಿಧಾನ ಪರಿಷತ್ತಿನ ಆರು ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕಡೆಯದಿನ. ಮೇ 9 ರಿಂದ ನಿನ್ನೆಯವರೆಗೆ ಒಟ್ಟು 29 ಅಭ್ಯರ್ಥಿಗಳು ತಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ಪ್ರಕಾರ, ಬಿಜೆಪಿ 3, ಕಾಂಗ್ರೆಸ್ 5, ಜೆಡಿಎಸ್ ಒಂದು ಹಾಗೂ 20 ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ. 29 ಅಭ್ಯರ್ಥಿಗಳಲ್ಲಿ 28 ಪುರುಷ ಹಾಗೂ ಒಬ್ಬ ಮಹಿಳೆ ಸೇರಿದ್ದಾರೆ. ಒಟ್ಟು 40 ನಾಮಪತ್ರಗಳು ಸಲ್ಲಿಕೆಯಾಗಿವೆ. ನಿನ್ನೆ ವಿವಿಧ ಕ್ಷೇತ್ರಗಳಲ್ಲಿ 16 ಅಭ್ಯರ್ಥಿಗಳಿಂದ ಒಟ್ಟು 20 ನಾಮ ಪತ್ರ ಸಲ್ಲಿಕೆಯಾಗಿದ್ದವು.
ಇಂದು ಸಹ ಬೆಂಗಳೂರು ಪದವೀಧರ ಕ್ಷೇತ್ರದಿಂದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ. ಪುಟ್ಟಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕರ್ನಾಟಕ ಈಶಾನ್ಯ ಪದವೀಧರ, ಕರ್ನಾಟಕ ನೈರುತ್ಯ ಪದವೀಧರ, ಬೆಂಗಳೂರು ಪದವೀಧರ, ಕರ್ನಾಟಕ ಆಗ್ನೇಯ ಶಿಕ್ಷಕರ, ಕರ್ನಾಟಕ ನೈರುತ್ಯ ಶಿಕ್ಷಕರ ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 3ರಂದು ಚುನಾವಣೆ ನಡೆಯಲಿದೆ.
ಮೆಲನೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಜೊತೆಗೆ ಸ್ವತಂತ್ರ ಅಭ್ಯರ್ಥಿಗಳೂ ಸ್ಪರ್ಧೆಗಿಳಿದಿದ್ದಾರೆ. ಇಂದು ಮತ್ತು ನಾಳೆ ಮತ್ತಷ್ಟು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಂದು ಸಂಜೆ ತಿರಸ್ಕೃತ ನಾಮಪತ್ರಗಳು ಹಾಗೂ ಒಪ್ಪಿತವಾದ ನಾಮಪತ್ರಗಳ ಪಟ್ಟಿಯನ್ನು ಆಯಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗುತ್ತದೆ.
ನಾಮಪತ್ರ ಹಿಂದಕ್ಕೆ ಪಡೆಯಲು ಮೇ 20ರವರೆಗೂ ಕಾಲಾವಕಾಶವಿದೆ. ಅಂದು ಸಂಜೆ ಅಧಿಕೃತವಾಗಿ ಚುನಾವಣಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಜೂನ್ 6ರಂದು ಮತ ಎಣಿಕೆ ನಡೆಯಲಿದೆ.ಲೋಕಸಭೆ ಚುನಾವಣೆಯಂತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ತಮ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿದ್ದರೆ, ಆಡಳಿತಾರೂಢ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ.