ಮೈಸೂರು,ಅ.13- ವಿಶ್ವ ವಿಖ್ಯಾತ ಮೈಸೂರು ದಸರಾದ ಆಕರ್ಷಣೆಯಲ್ಲಿ ಜಂಬೂ ಸವಾರಿ ನಂತರ ಪ್ರಮುಖವಾಗಿ ಎದ್ದು ಕಾಣುವ ಪಂಜಿನ ಕವಾಯತಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು. ಪೊಲೀಸ್ ಪಡೆಯಿಂದ ಗೌರವ ವಂದನೆ ಸ್ವೀಕರಿಸುವ ಮೂಲಕ ಅವರು ವರ್ಣರಂಜಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬನ್ನಿಮಂಟಪದ ಪಂಜಿನ ಕವಾಯತು, ಮೈದಾನದಲ್ಲಿ ಆಕರ್ಷಕ ಕವಾಯತಿನೊಂದಿಗೆ ದಸರಾಗೆ ತೆರೆ ಬಿದ್ದಿದೆ. ಪಂಜಿನ ಕವಾಯತಿನಲ್ಲಿ ನಾನಾ ಸಾಹಸ ದೃಶ್ಯಗಳನ್ನು ಸಾರ್ವಜನಿಕರು, ಪ್ರೇಕ್ಷಕರು ಕಣ್ತುಂಬಿಕೊಂಡರು.
ಮಿಲಿಟರಿ ಪೊಲೀಸರ ಶೇತಾಶ್ವ ತಂಡದ ಬೈಕ್ ಕಸರತ್ತು ಪ್ರೇಕ್ಷಕರ ಮೈ ನವಿರೇಳಿಸಿತು. ಡ್ರೋನ್ ಪ್ರದರ್ಶನವು ರಾಷ್ಟ್ರ ಧ್ವಜ, ಚಂದ್ರಯಾನ, ಸೌರವ್ಯೂಹ, ಸೈನಿಕರ ಸೆಲ್ಯೂಟ್ ಮಾಡುವುದು, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಚಾಮುಂಡೇಶ್ವರಿ ಸೇರಿದಂತೆ ಹಲವು ವಿನ್ಯಾಸಗಳೊಂದಿಗೆ ಜನರಿಗೆ ಮುದ ನೀಡಿತು.
ಕರ್ನಾಟಕ ಪೊಲೀಸ್ ಇಲಾಖೆಯು 300 ಪೊಲೀಸರು 600 ಪಂಜುಗಳನ್ನು ಹಿಡಿದು ಅಕ್ಷರಾಕೃತಿಗಳನ್ನು ರಚಿಸಿದ್ದರು. ಅಂತಿಮವಾಗಿ ಜೈಹಿಂದ್ ಆಕೃತಿಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.