ಬೆಂಗಳೂರು,ಏ.19-ರಾಜ್ಯದ 2ನೇ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಇಂದು ಮುಕ್ತಾಯಗೊಂಡಿದೆ. ಏ.12ರಿಂದ ನಿನ್ನೆಯವರೆಗೆ ಒಟ್ಟು 241 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಇದರಲ್ಲಿ 221 ಪುರುಷ, 20 ಮಹಿಳೆಯರು, 143 ಸ್ವತಂತ್ರ ಅಭ್ಯರ್ಥಿಗಳು ಸೇರಿದ್ದಾರೆ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಸ್ರ್ಪಸಿದ್ದಾರೆ. ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಚುನಾವಣೆಯಿಂದ ದೂರ ಉಳಿದಿದೆ. ಆದರೆ ಒಬ್ಬ ಅಭ್ಯರ್ಥಿ ಮಾತ್ರ ಬಿಜಾಪುರ ಕ್ಷೇತ್ರದಲ್ಲಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
ಬಿಜೆಪಿಯ 14 ಅಭ್ಯರ್ಥಿಗಳಿಂದ 45 ನಾಮಪತ್ರಗಳು, ಕಾಂಗ್ರೆಸ್‍ನ 14 ಅಭ್ಯರ್ಥಿಗಳಿಂದ 48, ಎಎಪಿಯಿಂದ ಒಬ್ಬರು, ಬಿಎಸ್‍ಪಿಯಿಂದ 15 ನಾಮಪತ್ರಗಳು ಸಲ್ಲಿಕೆಯಾಗಿವೆ. ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ನಾಳೆ ನಡೆಯಲಿದ್ದು, ಏ.22ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅಂದು ಸಂಜೆ ಅಂತಿಮ ಚುನಾವಣಾ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಅಕೃತ ಪ್ರಕಟಣೆಯನ್ನು ಹೊರಡಿಸಲಿದ್ದಾರೆ.
ಮೇ 7ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.