ಬೆಂಗಳೂರು,ಡಿ.31– ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರು ನಗರ ಸೇರಿದಂತೆ ರಾಜಾದ್ಯಾಂತ ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿದ್ದು, ಭದ್ರತಾ ದೃಷ್ಟಿಯಿಂದ ಕೆಲವು ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರವಾಸಿ ತಾಣಗಳಾದ ಶಿವಗಂಗೆ ಬೆಟ್ಟ, ಸಿದ್ದರಬೆಟ್ಟ, ಮಾಕಳಿದುರ್ಗ, ಆವತಿ ಬೆಟ್ಟ, ತುಮಕೂರು ಜಿಲ್ಲೆಯ ದೇವರಾಯನದುರ್ಗ, ನಾಮದ ಚಿಲುಮೆ, ಬಸದಿ ಬೆಟ್ಟ, ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟ, ರೇವಣಸಿದ್ದೇಶ್ವರ ಬೆಟ್ಟ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ, ಕೋಲಾರದ ಅಂತರಗಂಗೆ, ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿ, ಮುಳ್ಳಯ್ಯನಗಿರಿ, ದತ್ತಪೀಠ, ದೇವರಮನೆ, ಝರಿಫಾಲ್ಸ್ ಸೇರಿದಂತೆ ಮತ್ತಿತರ ಪ್ರವಾಸಿತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಮಾತನಾಡಿ, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾಫಿನಾಡಿಗೆ ರಾಜ್ಯದ ವಿವಿಧ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಕೆಲವು ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.
ರೇವ್ ಪಾರ್ಟಿ, ಮಾದಕ ದ್ರವ್ಯಗಳ ಸೇವನೆ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.ಸಾರ್ವಜನಿಕವಾಗಿ ಅಸಭ್ಯ ನಡವಳಿಕೆ ಕಂಡು ಬಂದರೆ ಸಹಾಯವಾಣಿ 112 ಪೊಲೀಸ್ ಕಂಟೋಲ್ ರೂಂಗೆ ಕರೆ ಮಾಡುವಂತೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸರ ಹದ್ದಿನ ಕಣ್ಣು:
ಹೊಸ ವರ್ಷ ಸ್ವಾಗತಕ್ಕೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದ್ದು, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್ ಮುಂತಾದ ರಸ್ತೆಗಳಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಹ ಅದ್ಧೂರಿ ವರ್ಷಾಚರಣೆ ಸಂಭ್ರಮ ನಡೆಯಲಿದ್ದು, ಸಾರ್ವಜನಿಕರ ಭದ್ರತಾ ದೃಷ್ಟಿಯಿಂದ ಸಿ.ಸಿ.ಕ್ಯಾಮೆರಾಗಳ ಅಳವಡಿಕೆ, ವಾಚ್ ಟವರ್, ವುಮೆನ್ಸ್ ಸೇಫ್ಟಿಲ್ಯಾಂಡ್, ಹೆಲ್ತ್ ಸೆಂಟರ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ನಗರದ ಪ್ರಮುಖ ಆಕರ್ಷಣೆ ಸ್ಥಳಗಳಾದ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂ.ಜಿ.ರಸ್ತೆ, ರಿಚಂಡ್ ಜಂಕ್ಷನ್ ಸೇರಿದಂತೆ ಕೇಂದ್ರ ವಿಭಾಗದ ಪ್ರಮುಖ ಸ್ಥಳಗಳಲ್ಲಿ ಈಗಿರುವ ಸಿಸಿಟಿವಿ ಕ್ಯಾಮೆರಾಗಳ ಜೊತೆಗೆ ಹೆಚ್ಚುವರಿಯಾಗಿ 400 ಕ್ಯಾಮೆರಾಗಳನ್ನು ಜೋಡಿಸಲಾಗಿದೆ. ಇದೇ ರೀತಿ ಇಂದಿರಾನಗರ, ಕೋರಮಂಗಲ, ಮಾರತಹಳ್ಳಿ, ಎಚ್‌ಎಸ್‌ಆರ್ ಲೇಔಟ್ ಮುಂತಾದ ಪ್ರಮುಖ ಸ್ಥಳಗಳಲ್ಲಿ ಸಿದ್ದತೆ ನಡೆಯುತ್ತಿದೆ.
ಮೈಸೂರಿನಲ್ಲೂ ಬಿಗಿ ಕ್ರಮ:
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈಸೂರು ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಚಾಮುಂಡಿ ಬೆಟ್ಟ ಪ್ರವೇಶಿಸಲು ಇರುವ ವಿವಿಧ ಗೇಟ್‌ಗಳು ಬಂದ್ :
ಇಂದು ರಾತ್ರಿ 7 ಗಂಟೆ ನಂತರ ಉತ್ತನಹಳ್ಳಿ ಕ್ರಾಸ್ ಗೇಟ್, ದೇವಿವನ ಗೇಟ್, ಚಾಮುಂಡಿ ಬೆಟ್ಟ ಪಾದದ ಗೇಟ್, ಲಲಿತ್‌ಮಹಲ್ ಗೇಟ್ ಮೂಲಕ ಚಾಮುಂಡಿ ಬೆಟ್ಟ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಇಂದು ರಾತ್ರಿ 9 ಗಂಟೆ ನಂತರ ಸಾರ್ವಜನಿಕರು ಚಾಮುಂಡಿ ಬೆಟ್ಟದಿಂದ ವಾಪಸ್ ಆಗಬೇಕಿದೆ ಎಂದು ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶ ತಿಳಿಸಿದ್ದಾರೆ.
ನೂತನ ವರ್ಷದ ಶುಭ ಕೋರುವ ನೆಪದಲ್ಲಿ ಅಸಭ್ಯ ವರ್ತನೆ ಮಾಡಿದ್ದಲ್ಲಿ ಸೂಕ್ತ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದು, ಮಹಿಳೆಯರ ರಕ್ಷಣೆಗೆ ಪಿಂಕ್ ಗರುಡ ಪಡೆ ಗಸ್ತು ತಿರುಗಲಿದೆ. ವಿದ್ವಂಸಕ ಕೃತ್ಯ ತಡೆಗೆ ಶ್ವಾನ ದಳ ಫೀಲ್ಡ್ ಗಿಳಿಯಲಿದ್ದು, ಸಂಭ್ರಮದ ನೆಪದಲ್ಲಿ ವೀಲಿಂಗ್ ಡ್ರಾಗ್ ರೇಸ್, ಕರ್ಕಶ ಶಬ್ದ ಮಾಡುವುದನ್ನು ತಡೆಗಟ್ಟಲು ಕ್ಷಿಪ್ರ ಪಡೆ ಸನ್ನದ್ದವಾಗಿದೆ.
ಭದ್ರತೆಗಾಗಿ 4 ಡಿಸಿಪಿ, 12ಎಸಿಪಿ, 32ಪಿಐ, 53ಪಿಎಸ್‌ಐ, 112ಎಎಸ್‌ಐ, 895 ಹೆಚ್‌ಸಿ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ 8 ಸಿಎಆರ್ ತುಕಡಿ, 4 ಕೆಎಸ್ ಆರ್‌ಪಿ, 2 ಕಮಾಂಡೊ ಪಡೆ, 1 ಶ್ವಾನ ದಳ, 2 ಎಎಸ್‌ಪಿ ತಂಡಗಳ ಕಣ್ಗಾವಲು ಇರಿಸಲಾಗಿದೆ. ನಿಯಮ ಮೀರಿದರೆ ದಂಡ ಬೀಳುವುದು ಗ್ಯಾರಂಟಿ. ಮಧ್ಯರಾತ್ರಿ 1 ಗಂಟೆಗೆ ಹೊಸ ಸಂಭ್ರಮಚರಣೆ ಮುಕ್ತಾಯಗೊಳಿಸಲು ಪೋಲೀಸರು ಗಡುವು ನೀಡಿದ್ದಾರೆ.
ಕಾವೇರಿ ನದಿ ತೀರದಲ್ಲಿ ಹೊಸ ವರ್ಷಾಚರಣೆಗೆ ನಿಷೇಧ :
ಹೊಸ ವರ್ಷಾಚರಣೆ ಹಿನ್ನೆಲೆ ಮಂಡ್ಯ ಜಿಲ್ಲಾದ್ಯಂತ ಪ್ರಮುಖ ಪ್ರವಾಸಿ ಸ್ಥಳಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಹಿನ್ನೀರು ಸೇರಿದಂತೆ ಬಲಮುರಿ, ಎಡಮುರಿ, ಕಾವೇರಿ ನದಿ ತೀರದಲ್ಲಿ ಮೋಜು ಮಸ್ತಿ ಮಾಡದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಕಟ್ಟಾಜ್ಞೆ ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪೊಲೀಸರು ಆಯಾಯ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಭದ್ರತಾ ದೃಷ್ಟಿಯಿಂದ ಪೊಲೀಸರ ನಿಯೋಜನೆ ಮಾಡಲಾಗಿದೆ.