ಬೆಂಗಳೂರು, ಅ.5- ದಸರಾ ರಜೆ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ತಾಣಗಳು ಹಾಗೂ ದೇವಾಲಯಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ.ಆಯುಧಪೂಜೆ, ವಿಜಯದಶಮಿ, ಹಾಗೂ ವಾರಾಂತ್ಯದ ರಜೆ ಸೆರಿ ಸಾಲು ಸಾಲು ರಜೆ ಬಂದಿರುವುದರಿಂದ ಜನರು ಪುಣ್ಯಕ್ಷೇತ್ರ ಹಾಗೂ ನೆಚ್ಚಿನ ತಾಣಗಳತ್ತ ಪ್ರವಾಸಕ್ಕೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ. ಹಬ್ಬ ಮುಗಿಸಿಕೊಂಡು ಕೆಲವರು ತಮ ತಮ ಊರುಗಳತ್ತ ಹೊಗಿದ್ದರೆ ಇನ್ನೂ ಕೆಲವರು ಮಕ್ಕಳಿಗೂ ಶಾಲೆ ರಜೆ ಇದೆ ಎಂದು ಪುಣ್ಯಕ್ಷೇತ್ರ ಹಾಗೂ ರಮಣೀಯ ಸ್ಥಳಗಳತ್ತ ತೆರಳಿದ್ದಾರೆ.
ಕೆಲಸದ ಒತ್ತಡ, ಸಂಚಾರ ದಟ್ಟಣೆಯಿಂದ ಬೇಸರವಾಗಿರುವ ಜನರು ಮೈಂಡ್ ರಿಲ್ಯಾಕ್‌್ಸ ಮಾಡಿಕೊಳ್ಳಲು ತಮ ಕುಟುಂಬದೊಂದಿಗೆ ಕೆಲ ದಿನ ನಗರದ ಜಂಜಾಟ ಬೇಡ ಎಂದು ಪ್ರವಾಸಕ್ಕೆ ತೆರಳಿದ್ದಾರೆ.
ಬಡವರ ಊಟಿ ಎಂದೇ ಹೆಸರಾದ ಕಾಫಿನಾಡು ಚಿಕ್ಕಮಗಳೂರು, ಮಡಿಕೇರಿ, ಕೊಡಗು, ಮೈಸೂರು, ಧರ್ಮಸ್ಥಳ, ಹಾಸನ, ಶೃಂಗೇರಿ, ಹೊರನಾಡು. ಗೋಕರ್ಣ, ಮುರುಡೇಶ್ವರ, ಕುಕ್ಕೆಸುಬ್ರಹಣ್ಯ, ಕಟೀಲು, ಮಂಗಳೂರು, ಉಡುಪಿ, ಬೆಲೂರು, ಹಳೇಬೀಡು, ಹಂಪಿ, ಮಂಗಳೂರು. ಮಂತ್ರಾಲಯ ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದು ದೇವಾಯಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ.
ಇನ್ನು ಬೆಂಗಳೂರು ಸಮೀಪದ ನಂದಿಬೆಟ್ಟ, ಮೇಕೆದಾಟು, ಶಿವಗಂಗೆ, ದೇವರಾಯನದುರ್ಗ, ಗೊರವನಹಳ್ಳಿ ಸೇರಿದಂತೆ ಮತ್ತಿತರ ಸ್ಥಳಗಳಿಗೆ ಒನ್ ಡೇ ಟ್ರಿಪ್ ಕೂಡ ಹೋಗಿದ್ದಾರೆ. ಸೂರ್ಯೋದಯದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಕ್ಕೆ ಮುಂಜಾನೆಯೇ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಬೈಕ್, ಕಾರುಗಳಲ್ಲಿ ಬೆಂಗಳೂರಿಗರು ತಂಡೋಪತಂಡವಾಗಿ ತೆರಳಿದ್ದ ದೃಶ್ಯಗಳು ಕಂಡುಬಂದವು. ನಂದಿ ಬೆಟ್ಟದಲ್ಲಿ ಪ್ರಕೃತಿಯ ಸೌಂದರ್ಯ ಸವಿದ ನಂತರ ಸಮೀಪದ ಇಶಾ ಫೌಂಡೇಶನ್‌ಗೂ ಕೂಡ ಭೇಟಿ ನೀಡಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.
ಹೊಟೇಲ್‌ಗಳಿಗೆ ಭಾರೀ ವ್ಯಾಪಾರ:
ಪ್ರವಾಸಿ ತಾಣಗಳಲ್ಲಿ ಎಲ್ಲಾ ಹೋಟೆಲ್, ರೂಂ, ಹೋಮ್ ಸ್ಟೇ, ರೆಸಾರ್ಟ್‌ಗಳು ಭರ್ತಿಯಾಗಿದ್ದು, ವ್ಯಾಪಾರ ಜೋರಾಗಿಯೇ ನಡೆದಿದೆ. ಬೆಂಗಳೂರು, ಹಾಸನ ಹೆದ್ದಾರಿಯಲ್ಲಿ ಬರುವ ಹೊಟೆಲ್ , ಸೇರಿದಂತೆ ರಾಜ್ಯದ ಪ್ರಮಖ ಹೆದ್ದಾರಿಗಳ ಬದಿಯಲ್ಲಿರುವ ಹೋಟೆಲ್‌ಗಳು ಪ್ರವಾಸಿಗರಿಂದ ತುಂಬಿದ್ದವು.
ನಾಳೆ ಸೋಮವಾರ ಕೆಲಸಕ್ಕೆ ಹೋಗಬೇಕೆಂದು ಕೆಲವರು ಲಗೇಜ್‌ಗಳನ್ನು ಪ್ಯಾಕ್ ಮಾಡಿಕೊಂಡು ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಇನ್ನು ಊರಿಗೆ ತೆರಳಿದ್ದವರು ಸಂಜೆ ಮಳೆ ಹಾಗೂ ಟ್ರಾಫಿಕ್ ಜಾಮ್ ಆಗಲಿದೆ ಎಂದು ಇಂದು ಬೆಳಗ್ಗಯೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಸಂಜೆ ಏಕಕಾಲಕ್ಕೆ ಜನರು ಬರುವುದರಿಂದ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. ಗೊರಗುಂಟೆಪಾಳ್ಯ ಹಾಗೂ ನೆಲಮಂಗಲದ ಕುಣಿಗಲ್ ಬೈಪಾಸ್‌ನಲ್ಲಿ ಇಂದು ಸಂಜೆ ಟ್ರಾಫಿಕ್ ಜಾಮ್ ಆಗಲಿದೆ. ಈ ಹಿನ್ನೆಲೆಯಲ್ಲಿ ಜನರು ಬದಲಿ ಮಾರ್ಗ ಅಥವಾ ಬೇಗ ಬಂದು ಬೆಂಗಳೂರು ಸೇರಿದರೆ ಒಳಿತು.ಸದಾ ವಾಹನಗಳಿಂದ ತುಂಬಿ ತುಳುಕುತ್ತಿದ್ದ ನಗರದ ರಸ್ತೆಗಳು ಕಳೆದ ನಾಲ್ಕು ದಿನಗಳಿಂದ ವಾಹನಗಳ ಸಂಚಾರ ವಿರಳವಾಗಿತ್ತು. ಇಂದು ಸಂಜೆ ಮತ್ತು ನಾಳೆ ಎಲ್ಲೆಲ್ಲೂ ಜಾಮ್ ಆಗಲಿದೆ.