ಚಿಕ್ಕಮಗಳೂರು, ಮೇ 28- ಕಾಫಿನಾಡಿನಾದ್ಯಂತ ಮಳೆ ಅಬ್ಬರ ಮುಂದುವರೆದಿದ್ದು, ಮೂಡಿಗೆರೆ ತಾಲೂಕಿನ ಚಾರ್ಮುಡಿ ಘಾಟಿಯಲ್ಲಿ ಧುಮ್ಮಿಕ್ಕುವ ಜಲಪಾತಗಳಿಗೆ ಜೀವಕಳೆ ಬಂದಿದ್ದು, ಪ್ರವಾಸಿಗರ ಉಚ್ಚಾಟ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಕಡಿವಾಣ ಹಾಕಿದ್ದಾರೆ. ಜಾರುವ ಬಂಡೆಗಳ ಮೇಲೆ ಪ್ರವಾಸಿಗರ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಪೊಲೀಸ್ ಮುಖ್ಯ ಅಧಿಕಾರಿ ವಿಕ್ರಂ ಅಮುಟೆ ಸ್ಥಳಕ್ಕೆ ಪೊಲೀಸರನ್ನು ಕಳುಹಿಸಿ ಪ್ರವಾಸಿಗರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಘಾಟಿಯ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ನಿರಂತರವಾಗಿ ನೀರು ಬಂಡೆಗಳ ಮೇಲೆ ಹರಿಯುವುದರಿಂದ ಹಸಿರು ಪಾಚಿ ಉಂಟಾಗಿ ಬಂಡೆಗಳು ಜಾರುತ್ತವೆ. ಇಂತಹ ಬಂಡೆಗಳ ಮೇಲೆ ಪ್ರವಾಸಿಗರು ಹತ್ತಿ ಉಚ್ಚಾಟ ಪ್ರದರ್ಶಿಸಲು ಮುಂದಾದರೆ ದೊಡ್ಡ ಅಪಾಯ ಕಟ್ಟಿಟ್ಟ ಬುತ್ತಿ. ಇದನ್ನು ಮನಗಂಡಿರುವ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಚಾರ್ಮುಡಿ ಘಾಟಿಯ ಅಲೆಕಾನ್ ಹೊರಟ್ಟಿ ಹಾಗೂ ಅಣ್ಣಪ್ಪಸ್ವಾಮಿ ದೇವಾಲಯದ ದೂರದಲ್ಲಿ ಸಿಗುವ ಜಲಪಾತಗಳ ಬಳಿ ನಿತ್ಯವೂ ಜಲಪಾತ ಕಣ್ಣುಂಬಿಕೊಳ್ಳುವ ಸಲುವಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ರಸ್ತೆ ಬದಿಯಲ್ಲಿ ತಿನಿಸುಗಳ ಅಂಗಡಿಗಳು ಕೂಡ ತೆರೆಯಲಾಗಿದೆ. ಇದನ್ನು ತಪ್ಪಿಸಲು ಜಿಲ್ಲಾಡಳಿತ ಪೊಲೀಸರನ್ನು ನಿಯೋಜಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಚಾರ್ಮುಡಿ ಘಾಟ್ ಪ್ರದೇಶದಲ್ಲಿ ನಾಲ್ವರು ಯುವಕರು ಬಂಡೆಯ ಮೇಲೆ ನಿಂತು ಫೋಟೋ ತೆಗೆದುಕೊಳ್ಳುತ್ತಿದ್ದನ್ನು ಗಮನಿಸಿದ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಾಬಾಬುಡನ್ ಗಿರಿಗೆ ತೆರಳುವ ಮಾರ್ಗದಲ್ಲಿ ಭೂ ಕುಸಿಯುವ ಆತಂಕ ಎದುರಾಗಿದೆ. ಕಳೆದ ವರ್ಷ ಮಳೆಗಾಲದ ಅವಧಿಯಲ್ಲಿ ದತ್ತ ಪೀಠಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಕವಿಕಲ್ ಗಂಡಿ ಬಳಿ ಭೂಕುಸಿತ ಸಂಭವಿಸಿದ್ದರಿಂದ ದತ್ತಪೀಠಕ್ಕೆ ಪ್ರವಾಸಿಗರಿಗೆ ಒಂದು ತಿಂಗಳ ಕಾಲ ನಿರ್ಬಂಧ ಹೇರಲಾಗಿತ್ತು. ಆದರೆ, ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನವೇ ದತ್ತಪೀಠ ರಸ್ತೆಯಲ್ಲಿ ಭೂ ಕುಸಿತದ ಆತಂಕ ಎದುರಾಗಿದೆ.
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಗಿರಿ ಶ್ರೇಣಿಯ ಮಣ್ಣು ಸಡಿಲಗೊಳ್ಳುತ್ತಿದೆ. ಮಳೆಗಾಲದ ಅವಧಿಯಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ಭೂಕುಸಿತ ಸಂಭವಿಸುವ ಮುನ್ನವೇ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳಿಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ ತಾಲೂಕುಗಳಲ್ಲಿ ವಿದ್ಯುತ್ ಹಾಗೂ ಮೊಬೈಲ್ ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರು ಮಳೆಗಾಲಕ್ಕೆ ಸೌದೆ ಸರಿ ಮಾಡಿಕೊಳ್ಳಲು ಸಮಯಾವಕಾಶ ಬೇಕಿತ್ತು. ಆದರೆ ಮಳೆಗಾಲಕ್ಕೆ ಮೊದಲೇ ಮಳೆಯ ಆರಂಭವಾಗಿದ್ದು, ಮಳೆ ಬಿಡುವು ನೀಡಬಹುದು ಎಂದು
ಅಂದಾಜಿಸಿ ಕಟ್ಟಿಗೆ ಸಿದ್ಧತೆ ಮಾಡಿಕೊಳ್ಳದವರು ಸಮಸ್ಯೆ ಎದುರಿಸುವಂತಾಗಿದೆ.
ಭದ್ರಾ ನದಿ ಮತ್ತು ಉಪನದಿಗಳು ಉಕ್ಕಿ ಹರಿಯುತ್ತಿವೆ. ಕುದುರೆಮುಖ ಸಮೀಪದ ಜಾಬಳೆಯಲ್ಲಿ ಭದ್ರಾನದಿ ನೀರಿನ ಹರಿವಿನಿಂದ ಧರೆ ಕುಸಿದಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮಳೆ ಅವಾಂತರ ಸೃಷ್ಟಿಯಾಗಿದ್ದು, ಹೀಗೆ ಮಳೆ ಮುಂದುವರೆದರೆ ಇನ್ನಷ್ಟು ಅನಾಹುತಗಳಾಗುವ ಸಂಭವವಿದೆ. ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಕ್ಷಣದಿಂದಲೇ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.