ಶಿವಮೊಗ್ಗ,ಜು.15- ಶರಾವತಿ ನದಿಪಾತ್ರದಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ಜೋಗಜಲಪಾತದ ರಾಜ, ರಾಣಿ, ರೋರಲ್‌ಲೇಡಿ ಹಾಗೂ ರಾಕೇಟ್ ದುಮಿಕ್ಕಿ ಹರಿಯುತ್ತಿದ್ದು ಈ ರಮಣಿಯ ಸೌಂದರ್ಯ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಜೋಗಜಲಪಾತದಲ್ಲಿ ಹಾಲ್ನೋರೆಯಂತೆ ಬಂಡೆಗಳ ನಡುವೆ ಹರಿಯುತ್ತಾ ಸದ್ದು ಮಾಡುತ್ತಾ ಭಾರಿ ಎತ್ತರದಿಂದ ಧುಮಿಕ್ಕಿ ಹರಿಯುವ ಮನೋಹರ ದೃಶ್ಯವನ್ನು ನೋಡುವುದೆ ಒಂದು ಚಂದ ಅದರಲ್ಲೂ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ನೀರಿನ ರಭಸ ಜೋರಾಗಿದ್ದು ಸ್ವರ್ಗವೆ ಧರೆಗಿಳಿದಂತೆ ಭಾಸವಾಗುತ್ತದೆ.
ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ನೆನ್ನೆ ವಿಕೆಂಡ್ ಹಿನ್ನಲೆಯಲ್ಲಿ ಚುಮು ಚುಮ ಚಳಿ, ತುಂತುರು ಮಳೆ ನಡುವೆಯೂ ಬೆಂಗಳೂರು, ಮೈಸೂರು, ತುಮಕೂರು, ಸೇರಿದಮಂತೆ ವಿವಿಧ ಜಿಲ್ಲೆಗಳಿಂದ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು ವಾಹನ ದಟ್ಟಣೆ ಹಾಗೂ ಜನ ದಟ್ಟಣೆ ಉಂಟಾಗಿತ್ತು.ಸರದಿ ಸಾಲಿನಲ್ಲಿ ನಿಂತು ಜನರು ಟಿಕೆಟ್ ಖರೀದಿಸಿ ಜಲಪಾತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡರು.