ಬೆಂಗಳೂರು, ಆ. 6- ಪಶ್ಚಿಮ ಘಟ್ಟದಲ್ಲಿ ಮಳೆಯಾಗುತ್ತಿರುವ ಪರಿಣಾಮ ಭೂಕುಸಿತ ಉಂಟಾಗಿ ಎಡಕುಮರಿ- ಕಡಗವಳ್ಳಿ ರೈಲ್ವೆ ಮಾರ್ಗ ದುರಸ್ತಿ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಆ. 8ರವರೆಗೆ 12 ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ಎಡಕುಮರಿ ಕಡಗವಳ್ಳಿ ರೈಲ್ವೆ ಮಾರ್ಗದಲ್ಲಿ ಭೂಕುಸಿತ ಉಂಟಾಗಿದ್ದರಿಂದ ಬೆಂಗಳೂರು- ಮಂಗಳೂರು ಮಧ್ಯೆ ರೈಲು ಸಂಚಾರವನ್ನು ರದ್ದುಗೊಳಿಸಲಾಗಿತ್ತು.
ಈ ಮಾರ್ಗದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಅದು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಆ.8ರವರೆಗೆ 12 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಕೆಎಸ್‌ಆರ್ ಬೆಂಗಳೂರು- ಕಾರವಾರ ಎಕ್ಸ್ ಪ್ರೆಸ್ ರೈಲು ಸಂಚಾರ ಆ.7ರವರೆಗೆ ರದ್ದಾಗಲಿದೆ.
ಕಾರವಾರ ಕೆಎಸ್‌ಆರ್ ಬೆಂಗಳೂರು ಎಕ್ಸ್ ಪ್ರೆಸ್- ಕಾರವಾರ ಮಡಗಾಂವ್, ಮಡಗಾಂವ್- ಕಾರವಾರ ವಿಶೇಷ ರೈಲಿನ ಸಂಚಾರವನ್ನು ಆ.8ರ ವರೆಗೆ ರದ್ದು ಮಾಡಲಾಗಿದೆ. ಸರ್.ಎಂ. ವಿಶ್ವೇಶ್ವರಯ್ಯ- ಮುರ್ಡೇಶ್ವರ ಎಕ್ಸ್ ಪ್ರೆಸ್, ಯಶವಂತಪುರ- ಕಾರವಾರ ಎಕ್ಸ್ ಪ್ರೆಸ್ ರೈಲುಗಳ ಸಂಚಾರವನ್ನು ಆ. 8ರವರೆಗೆ ಸಂಪೂರ್ಣವಾಗಿ ರದ್ದು ಮಾಡಲಾಗಿದೆ.
ಕಳೆದ ವಾರ ಸುರಿದ ಭಾರೀ ಮಳೆಗೆ ದೋಣಿ ಹಗಲ್ ರೈಲು ಮಾರ್ಗದಲ್ಲಿ ಭೂಕುಸಿತ ಉಂಟಾಗಿ ರೈಲು ಸಂಚಾರ ಸ್ಥಗಿತ ಉಂಟಾಗಿತ್ತು. ಇದೀಗ ಭೂಕುಸಿತದ ಸ್ಥಳದಲ್ಲಿ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದ್ದು, ಹಳಿ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣಗೊಂಡಿವೆ.
ಪ್ರಾಯೋಗಿಕವಾಗಿ ಗೂಡ್ಸ್ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ದುರಸ್ಥಿ ಕಾರ್ಯ ನಡೆಯುತ್ತಿರುವ ಸ್ಥಳ ಹಾಗೂ ಆಸುಪಾಸಿನಲ್ಲಿ 15 ಕಿಲೋ ಮೀಟರ್ ವೇಗದಲ್ಲಿ ಗೂಡ್ಸ್ ರೈಲಿನ ಪ್ರಾಯೋಗಿಕ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಪ್ರಯಾಣಿಕರ ರೈಲು ಸಂಚಾರಕ್ಕೆ ಇನ್ನೂ ಅವಕಾಶ ನೀಡಿಲ್ಲ. ಆ. 8ರವರೆಗೆ ಬೆಂಗಳೂರು- ಮಂಗಳೂರು ಮಧ್ಯೆ ರೈಲ್ವೇ ಸಂಚಾರ ರದ್ದುಗೊಳಿಸಿದ್ದು, ಆ. 8ರ ನಂತರ ಪ್ರಯಾಣಿಕರ ರೈಲು ಸಂಚಾರಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ.