Monday, April 28, 2025
Homeರಾಜ್ಯಪಾರದರ್ಶಕ ಯುಪಿಎಸ್‌ಸಿ ಪರೀಕ್ಷೆ, ಪಾಸಾಗುತ್ತಿರುವ ಕೆಳಸ್ತರದ ಅಭ್ಯರ್ಥಿಗಳು

ಪಾರದರ್ಶಕ ಯುಪಿಎಸ್‌ಸಿ ಪರೀಕ್ಷೆ, ಪಾಸಾಗುತ್ತಿರುವ ಕೆಳಸ್ತರದ ಅಭ್ಯರ್ಥಿಗಳು

Transparent UPSC exam

ಇತ್ತೀಚೆಗೆ ಕೇಂದ್ರ ಲೋಕಸೇವಾ ಆಯೋಗ (UPSC) ದವರು ನಾಗರಿಕ ಸೇವಾ ಪರೀಕ್ಷೆ (CIVIL SERVICES EXAM) ಫಲಿತಾಂಶ ಪ್ರಕಟಿಸಿದ್ದು ದೇಶಾದ್ಯಂತ 1009 ಮತ್ತು ಕರ್ನಾಟಕದಲ್ಲಿ 20 ಜನ ಅಭ್ಯರ್ಥಿಗಳು ಉತ್ತೀರ್ಣರಾಗಿ ದ್ದಾರೆ.

ಭಾರತೀಯ ಆಡಳಿತ ಸೇವೆ, ಭಾರತೀಯ ಪೋಲೀಸ್‌‍ ಸೇವೆ ಮತ್ತು ಭಾರತೀಯ ವಿದೇಶಾಂಗ ಸೇವೆ ಸೇರಿದಂತೆ ಒಟ್ಟು 24 ಬೇರೆ, ಬೇರೆ ಸೇವೆ ಗಳಿಗೆ ನೇಮಕಾತಿಗಾಗಿ ಪ್ರತಿ ವರ್ಷ ಈ ಪರೀಕ್ಷೆ ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಡೆದ ಜೇಷ್ಠತೆ (Merit) , ಅವರ ಮೀಸಲಾತಿ ಮತ್ತು ಸೇವಾ ಆದ್ಯತೆ ( Service preference) ಗಳನ್ನು ಪರಿಗಣಿಸಿ ಅವರನ್ನು ಬೇರೆ, ಬೇರೆ ಸೇವೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಸಂತೋಷದ ಸಂಗತಿಯೆಂದರೆ ಈ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೇ ಅತಿ ಪಾರದರ್ಶಕವಾಗಿ ನಡೆಯುವುದು. ಅತ್ಯಂತ ಕೆಳ ಸ್ಥರದ ಅಭ್ಯರ್ಥಿಗಳೂ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದೇ ಈ ಮಾತಿಗೆ ಸಾಕ್ಷಿ. ಹೀಗಾಗಿ ಇಂದು ಈ ಪ್ರತಿಷ್ಠಿತ ಸೇವೆಗಳು ವಿಕೇಂದ್ರೀಕರಣಗೊಂಡಿವೆ ಎಂದರೆ ತಪ್ಪಾಗಲಾರದು.

ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಈ ಪರೀಕ್ಷೆ ಮತ್ತು ಸೇವೆಗಳು ಕುಲೀನ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದವು. ಇಂದಿನ ಭಾರತೀಯ ಆಡಳಿತ ಸೇವೆ (IAS) ಯನ್ನು ಆಗ ಭಾರತೀಯ ನಾಗರಿಕ ಸೇವೆ (INDIAN CIVIL SERVICE) ಎಂದೂ, ಅದಕ್ಕೂ ಮುಂಚೆ ಭಾರತೀಯ ಸಾಮ್ರಾಜ್ಯ ಸೇವೆ (INDIAN IMPERIAL SERVICE) ಎಂದೂ ಮತ್ತು ಈ್ಟ್‌‍ ಇಂಡಿಯಾ ಕಂಪನಿಯ ಪ್ರಾರಂಭದ ದಿನಗಳಲ್ಲಿ Covenated civil service (CCS) ಎಂದೂ ಕರೆಯುತ್ತಿದ್ದರು. ಪ್ರಾರಂಭದಲ್ಲಿ ಈ ಪರೀಕ್ಷೆ ಲಂಡನ್‌ನಲ್ಲಿ ಮಾತ್ರ ನಡೆಯುತ್ತಿತ್ತು. ಭಾರತೀಯರನ್ನು ಈ ಪರೀಕ್ಷೆಗಳಿಂದ ನಿರ್ಬಂಧಿಸಲಾಗಿತ್ತು. ಹೀಗಾಗಿ ಆರಂಭದ ದಿನಗಳಲ್ಲಿ ಅದು ಸಂಪೂರ್ಣ ಬ್ರಿಟಿಷರ ಪಾರುಪತ್ಯವಾಗಿತ್ತು.

ಈ ಎಲ್ಲ ಕಾರಣಗಳಿಂದಾಗಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಬಲಾಢ್ಯ ವರ್ಗದ ಅಭ್ಯರ್ಥಿಗಳು ಮಾತ್ರ ಈ ಪರೀಕ್ಷೆ ಎದುರಿಸಬಹುದಾಗಿತ್ತು. ನೊಬೆಲ್‌ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್‌ ಅವರ ಅಣ್ಣ ಸತ್ಯೇಂದ್ರನಾಥ ಟ್ಯಾಗೋರ್‌ ಅವರು 1863 ರಲ್ಲಿ ಈ ಪರೀಕ್ಷೆ ಪಾಸಾದ ಮೊದಲ ಭಾರತೀಯರಾಗಿದ್ದರು.

ಅವರು ಮುಂದೆ ಕಾರವಾರ ( ಇಂದಿನ ಉತ್ತರಕನ್ನಡ ಜಿಲ್ಲೆ) ಜಿಲ್ಲೆಯ ಪ್ರಧಾನ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದಾರೆ (ಅಂದಿನ ದಿನಗಳಲ್ಲಿ ಐಸಿಎಸ್‌‍ ಆಧಿಕಾರಿಗಳು ನ್ಯಾಯಾಂಗದಲ್ಲೂ ಸೇವೆ ಸಲ್ಲಿಸುತ್ತಿದ್ದರು). 1920 ರಲ್ಲಿ ಸುಭಾಸ ಚಂದ್ರ ಬೋಸ್‌‍ ಅವರು ಐಸಿಎಸ್‌‍ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಕೂಡ ಮರುವರ್ಷವೇ ರಾಜೀನಾಮೆ ನೀಡಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದರು.

ಬಹುಶಃ ಕರ್ನಾಟಕದಿಂದ ( ಆಗ್ಗೆ ಕರ್ನಾಟಕ ಅಸ್ತಿತ್ವದಲ್ಲಿರಲಿಲ್ಲ. ಕನ್ನಡ ನಾಡು ಹರಿದು ಹಂಚಿ ಹೋಗಿತ್ತು. ಆದ್ದರಿಂದ ಇಂದಿನ ಕರ್ನಾಟಕದ ಒಂದು ಭಾಗವೆಂದು ತಿಳಿದುಕೊಳ್ಳಬೇಕು) ಮೊಟ್ಟ, ಮೊದಲು ಐಸಿಎಸ್‌‍ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಬೆನೆಗಲ್‌ ಸಹೋದರರು. ಇವರು ಇಂದಿನ ದಕ್ಷಿಣ ಕನ್ನಡ ಜಿಲ್ಲೆಯ ಬೆನೆಗಲ್‌ ಗ್ರಾಮದವರು. ನರಸಿಂಗರಾವ್‌ ಬೆನೆಗಲ್‌ 1908ರಲ್ಲಿ ಉತ್ತೀರ್ಣರಾಗಿದ್ದು, ಅವರು ಜಮು ಮತ್ತು ಕಾಶೀರದ ಪ್ರಧಾನಮಂತ್ರಿಗಳಾಗಿ ಮತ್ತು ಸಂವಿಧಾನ ರಚನಾ ಸಮಿತಿಯ ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅವರ ಸಹೋದರ ರಾಮರಾವ್‌ ಬೆನೆಗಲ್‌ ಅವರು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಆಗಿ ಸೇವೆ ಸಲ್ಲಿಸಿದ್ದರು. ಐಸಿಎಸ್‌‍ ಪಾಸಾದ ಇನ್ನೋರ್ವ ಗಮನಾರ್ಹ ಕನ್ನಡಿಗರೆಂದರೆ ಗುರುನಾಥ್‌ ವೆಂಕಟೇಶ ಬೇವೂರು ಆಗಿದ್ದರು. ಬಾಗಲಕೋಟ ಜಿಲ್ಲೆಯ ಬೇವೂರು ಗ್ರಾಮದವರಾದ ಇವರು ಅಂಚೆ ಮತ್ತು ತಂತಿ ಇಲಾಖೆಯ ಮಹಾ ನಿರ್ದೇಶಕರಾಗಿ ಹಾಗೂ ಎರಡನೇ ಮಹಾಯುದ್ಧದ ಸಮಯದಲ್ಲಿ ವಾಯಿಸರಾಯ ಕೌನ್ಸಿಲ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಭಾರತೀಯ ಸೇನೆಯ ಮಹಾದಂಡನಾಯಕರಾಗಿದ್ದ ಜನರಲ್‌ ಗೋಪಾಲ ಗುರುನಾಥ್‌ ಬೇವೂರು ಅವರು ಇವರ ಸುಪುತ್ರ ರಾಗಿದ್ದರು.ಬೆನೆಗಲ್‌ ಸಹೋದರರು ಮತ್ತು ಬೇವೂರು ಅವರು ಬ್ರಾಹಣ ಸಮುದಾಯಕ್ಕೆ ಸೇರಿದವರು ಎಂಬುದು ವಿಶೇಷ.

ಈ ಎಲ್ಲ ವಿವರಗಳನ್ನು ಪರಿಶೀಲಿಸಿದರೆ ಒಂದು ಕಾಲಕ್ಕೆ ಕೆಲವೇ ವರ್ಗಗಳಿಗೆ ಸೀಮಿತವಾಗಿದ್ದು ಕುಲೀನತೆಯ ವ್ಯಸನದಿಂದ ಬಳಲುತ್ತಿದ್ದ ಈ ಅಖಿಲ ಭಾರತೀಯ ಸೇವೆಗಳು (AII INDIA SERVICES) ಮತ್ತು ಕೇಂದ್ರ ಸೇವೆಗಳು (CENTRAL SERVICES) ಇಂದು ವಿಕೇಂದ್ರೀಕರಣ (DECENTRALI SATION) ಗೊಂಡು ಕುರುಬನ ಹಟ್ಟಿಗೂ, ಬಡವನ ಜೋಪಡಿಗೂ, ಮಾದರ ಕೇರಿಗೂ ತಲುಪಿರುವುದೇ ವಿಸಯ!
ಇದೆಲ್ಲ ಸಾಧ್ಯವಾಗಿದ್ದು ಮಂಡಲ ಮೀಸಲಾತಿಯ ಮಾಂತ್ರಿಕ ದಂಡದಿಂದಾಗಿ. ಮಂಡಲ ಮೀಸಲಾತಿ ಜಾರಿಗೆ ಬರುವ ಮುಂಚೆ ಜನಸಾಮಾನ್ಯರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರಲಿಲ್ಲವೆಂದಲ್ಲ.

1979 ರಲ್ಲಿ ಶಂಕರ ಬಿದರಿ ಐಪಿಎಸ್‌‍, 1980 ರಲ್ಲಿ ಶಿವಾನಂದ ಜಾಮದಾರ ಐಎಎಸ್‌‍ ಮತ್ತು 1984ರಲ್ಲಿ ಡಾ. ಅಶೋಕ ದಳವಾಯಿ ಐಎಎಸ್‌‍ ( 1981ರಲ್ಲಿ ಐಪಿಎಸ್‌‍ ಕೂಡ ಪಾಸಾಗಿದ್ದರು) ಪಾಸಾಗಿದ್ದರು. ಇವರು ಯಾವುದೇ ಮೀಸಲಾತಿಯ ಬಲವಿಲದೇ ಸಾಮಾನ್ಯ ವರ್ಗದಲ್ಲಿ ಉತ್ತೀರ್ಣರಾಗಿದ್ದರು. ಆದರೆ, ಇಂತಹ ಉದಾಹರಣೆಗಳು ವಿರಳಾತಿವಿರಳ.

ಆದರೆ, ಇಂದು ಸಾಮಾಜಿಕ ನ್ಯಾಯ ಜಾರಿಯಿಂದಾಗಿ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕುರುಬರು, ಗಾಣಿಗರು, ಮಾಳಿಗಳು, ಉಪ್ಪಾರರು, ಒಕ್ಕಲಿಗರು,ಮಡಿವಾಳರು, ಹಡಪದರು… ಮುಂತಾದ ಅತೀ ಹಿಂದುಳಿದ ಪಂಗಡಗಳ ಅಭ್ಯರ್ಥಿಗಳು ಈ ಪ್ರತಿಷ್ಠಿತ ಮತ್ತು ಮಹತ್ವದ ಸೇವೆಗಳಿಗೆ ಆಯ್ಕೆಯಾಗುತ್ತಿದ್ದು ಮುಂದೊಂದು ದಿನ ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ.

ಈ ಹುಡುಗ, ಹುಡುಗಿಯರೇ ರಾಷ್ಟ್ರೀಯ ಸಾಮಾಜಿಕ ಮತ್ತು ಆರ್ಥಿಕ ನೀತಿಗಳನ್ನು ನಿರೂಪಿಸಲಿದ್ದಾರೆ! ನಿಜಕ್ಕೂ ಇದು ಸುಂದರ ಮತ್ತು ಭವ್ಯ ದೃಶ್ಯ! 2024 ರ ಸಾಲಿಗೆ ಉತ್ತೀರ್ಣರಾದ ಈ ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು. ಅವರ ವ್ರತ್ತಿ ಜೀವನ ಉಜ್ವಲವಾಗಲಿ ಎಂದು ಹಾರೈಸುತ್ತೇನೆ.

ಅರವಿಂದ ಎಂ. ದಳವಾಯಿ
ಮಾಜಿ ಕೆಎಎಸ್‌‍ ಅಧಿಕಾರಿ

RELATED ARTICLES

Latest News