ಬೆಂಗಳೂರು, ಫೆ.25-ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಸ್ಥಗಿತಗೊಂಡಿದ್ದ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಸೇವೆ ಇಂದಿನಿಂದ ಪುನರಾರಂಭಗೊಂಡಿದೆ. ವಾಯವ್ಯ ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆಯ ನಂತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳ ಬಸ್ ಸೇವೆ ನಿಲ್ಲಿಸಲಾಗಿತ್ತು.
ಈಗ ಪರಿಸ್ಥಿತಿ ತಿಳಿಯಾಗಿದ್ದು, ಉಭಯ ರಾಜ್ಯಗಳ ನಡುವೆ ಬಸ್ ಸೇವೆ ಮರು ಆರಂಭಗೊಂಡಿದೆ ಎಂದು ಕೆಎಸ್‌ಆರ್ ಟಿಸಿ ಮೂಲಗಳು ತಿಳಿಸಿವೆ. ಸಾರಿಗೆ ಸಂಸ್ಥೆಗಳ ಬಸ್ ಸೇವೆ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ದುಬಾರಿ ಪ್ರಯಾಣದರವನ್ನು ಪಡೆಯುತ್ತಿದ್ದ ಆರೋಪ ಕೇಳಿ ಬಂದಿತ್ತು.
ಪ್ರಯಾಣಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿ ಜಿಲ್ಲಾಡಳಿತ ಜಿಲ್ಲೆಯ ವಿವಿಧ ಭಾಗಗಳಿಂದ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಸಾರಿಗೆ ಸಂಸ್ಥೆಗಳ ಬಸ್ ಸೇವೆ ಒದಗಿಸಿದೆ.