ಬೆಂಗಳೂರು : ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮುಷ್ಕರ ನಡೆಸಿದ್ದಕ್ಕೆ ಕೆಂಡಮಂಡಲವಾದ ಹೈಕೋರ್ಟ್ ನೌಕರರನ್ನು ಬಂಧಿಸುವ ಎಚ್ಚರಿಕೆ ಕೊಟ್ಟ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ.
ಒಂದು ವೇಳೆ ಮುಷ್ಕರ ಮುಂದುವರೆಸಿದರೆ, ಸಾರಿಗೆ ನೌಕರರ ವಿರುದ್ಧ ಅಗತ್ಯ ಸೇವಾ ನಿರ್ವಹಣ ಕಾಯ್ದೆ ( ಎಸ್ಮಾ) ಅಡಿ ಸರ್ಕಾರಕ್ಕೆ ಕ್ರಮ ಕೈಗೊಳ್ಳಬಹುದು ಎಂದು ಹೈಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬುಧವಾರದಿಂದ ಮುಷ್ಕರ ಕೈ ಹಿಂಪಡೆಯುವುದಾಗಿ ಸಾರಿಗೆ ಜಂಟಿ ಕ್ರಿಯಾ ಸಮಿತಿಯ ಪರವಾಗಿ ವಕೀಲರು ತಿಳಿಸಿದರು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರದಿಂದ ಪ್ರತಿಭಟನೆಗೆ ನಡೆಸುತ್ತಿದ್ದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮಂಗಳವಾರ ಮುಂದುವರೆದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ( ಪಿಐಎಲ್ ) ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು, ನ್ಯಾ.ಸಿ.ಎಂ.ಜೋಷಿ ನೇತೃತ್ವದ ಪೀಠ ನ್ಯಾಯಾಂಗ ನಿಂದನೆಯ ಎಚ್ಚರಿಕೆಯನ್ನೂ ನೀಡಿತು.
ಸರ್ಕಾರಿ ಪರ ವಕೀಲರಾಗಿ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.ಸಾರಿಗೆ ಇಲಾಖೆಯ ಅಧಿಕಾರಿಗಳು, ಸಂಘಟನೆಯೊಂದಿಗೆ ಸಭೆ ಮಾಡಲಾಗಿದೆ. ರಾತ್ರಿಯಷ್ಟೇ ನೋಟಿಸ್ ಸಿಕ್ಕಿದೆ. ರಾಜಿ ಸಂಧಾನಕ್ಕೆ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದರು.ಇದಕ್ಕೆ ಮಾತುಕತೆ ಏನಾಗಿದೆ? ಎಂದು ಹೈಕೋರ್ಟ್ ಪ್ರಶ್ನಿಸಿತು.
ಅದಕ್ಕೆ ಎಜಿ, ಈವೆರೆಗೆ ಸರ್ಕಾರ ನಡೆಸಿದ ಮಾತುಕತೆಗಳ ವಿವರ ನೀಡಿದರು. ಮುಂದುವರಿದು ಇಂಡಸ್ಟ್ರಿಯಲ್ ಡಿಸ್ಪ್ಯೂಟ್ ಕಾಯ್ದೆಯಂತೆ ಸಂಧಾನ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬಳಿಕ ಸಾರಿಗೆ ಸಂಘಟನೆಗಳ ಪರ ವಕೀಲರನ್ನ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಎಸ್ಮಾ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳನ್ನು ಬಂಧಿಸುವ ಆದೇಶ ನೀಡಬೇಕಾದಿತು ಎಂದು ಎಚ್ಚರಿಕೆ ನೀಡಿತು.ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಕೋರ್ಟ್ ಗೆ ಎಜಿ ಹೇಳಿದರು. ರಾಜಿ ಸಂಧಾನದ ಮಾತುಕತೆ ಏನಾಗಿದೆ ಎಂದು ಪೀಠ ಪ್ರಶ್ನೆ ಮಾಡಿದಾಗ ಇಲ್ಲಿಯವರೆಗೆ ನಡೆದ ಮಾತುಕತೆಗಳ ವಿವರ ನೀಡಿದರು.
ಸಮಸ್ಯೆ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಜನಸಾಮಾನ್ಯರನ್ನು ಒತ್ತೆಯಾಗಿರಿಸುವುದನ್ನು ಸಹಿಸುವುದಿಲ್ಲ. ಎಸ್ಮಾ ಜಾರಿಯಾದರೂ ಮುಷ್ಕರ ನಡೆಸುವುದು ಕಾನೂನುಬಾಹಿರ ಎಂದ ಪೀಠ, ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ ನೋಟಿಸ್ ನೀಡಿತು. ಹೈಕೋರ್ಟ್ ತರಾಟೆಗೆ ತಬ್ಬಿಬ್ಬಾದ ಜಂಟಿ ಕ್ರಿಯಾ ಸಮಿತಿ ಪರ ವಕೀಲರು ಮುಷ್ಕರ ನಡೆಸುವುದಿಲ್ಲ ಎಂದು ಪೀಠದ ಮುಂದೆ ಹೇಳಿದರು.
ಮುಷ್ಕರ ನಿಲ್ಲಿಸಿರುವ ಬಗ್ಗೆ ಬುಧವಾರ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಬೇಕು, ಎಸ್ಮಾ ಕಾಯ್ದೆ ಉಲ್ಲಂಘಿಸಿದರೆ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ಹೇಳಿದ ಹೈಕೋರ್ಟ್, ಮುಷ್ಕರ ನಡೆಸದಂತೆ ಸೋಮವಾರ ನೀಡಿದ್ದ ಮಧ್ಯಂತರ ಆದೇಶವನ್ನು ಎರಡು ದಿನ ವಿಸ್ತರಿಸಿದೆ. ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಲಾಗಿದೆ.
ಬೇಡಿಕೆಗೆ ಬಗ್ಗದ ಸರ್ಕಾರ
ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಇಂದಿನಿಂದ ಮುಷ್ಕರಕ್ಕೆ ಕರೆ ನೀಡಲಾಗಿತ್ತು. 1800 ಕೋಟಿ ಹಿಂಬಾಕಿ, ಕೋಟ್ಯಾಂತರ ರುಪಾಯಿ ಪಿಎಫ್ ಬಾಕಿ, ವೇತನ ಹೆಚ್ಚಳ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಆದರೆ ಹಿಂಬಾಕಿ ಕೊಡಲು ಸರ್ಕಾರ ಒಪ್ಪದಿದ್ದ ಕಾರಣ, ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದಿರಲಿಲ್ಲ. ಹೀಗಾಗಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಈ ಬೆನ್ನಲ್ಲೇ ನೌಕರರ ಮುಷ್ಕರವನ್ನು 1 ದಿನ ತಡೆ ಹಿಡಿಯುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಆದ್ರೆ ಕೋರ್ಟ್ ಆದೇಶ ಪ್ರತಿ ಕೈಸೇರಿಲ್ಲ ಅಂತ ಹೇಳಿ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಧುಮುಕಿತ್ತು.
ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿ: ಅನಂತ ಸುಬ್ಬರಾವ್
ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರವನ್ನು ಮುಂದೂಡಿದರು. ಸಾರಿಗೆ ಸಿಬ್ಬಂದಿ ಮುಷ್ಕರ ಮುಂದೂಡಿದ್ದೇವೆ. ಸಾರಿಗೆ ಸಿಬ್ಬಂದಿ ಎಲ್ಲರೂ ಈ ಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಿ ಎಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದರು.