Thursday, August 7, 2025
Homeರಾಜ್ಯಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಮುಷ್ಕರದಲ್ಲಿ ಪಾಲ್ಗೊಂಡ ಸಾರಿಗೆ ನೌಕರರು..!

ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಮುಷ್ಕರದಲ್ಲಿ ಪಾಲ್ಗೊಂಡ ಸಾರಿಗೆ ನೌಕರರು..!

Transport employees join strike in fear of losing their jobs..

ಬೆಂಗಳೂರು,ಆ.5- ತತ್‌ ಕ್ಷಣವೇ ಅನ್ವಯವಾಗುವಂತೆ ನೌಕರರ ರಜೆ ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಒಂದು ವೇಳೆ ಯಾರಾದರೂ ಕರ್ತವ್ಯಕ್ಕೆ ಗೈರುಹಾಜರಾಗಿ ಮುಷ್ಕರದಲ್ಲಿ ಭಾಗಿಯಾಗಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮದ ಜೊತೆಗೆ ಆ ದಿನದ ವೇತನ (ಸಂಬಳ)ವನ್ನು ಕಡಿತ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ಕೊಡಲಾಗಿದೆ.

ಸಾರಿಗೆ ನೌಕರರಿಗೆ ಯಾವುದೇ ರಜೆ ಮಂಜೂರು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಮುಷ್ಕರದಲ್ಲಿ ಭಾಗಿಯಾಗಲು ಬಹುಮಂದಿಗೆ ಆತಂಕ ಶುರುವಾಗಿದೆ. 2021ರ ಪ್ರತಿಭಟನೆಯ ವೇಳೆ ಆದಂತಹ ಅನುಭವದ ಆತಂಕ ಎದುರಾಗಿದ್ದು, ಎಸಾ ಜಾರಿ, ಕೋರ್ಟ್‌ ಆದೇಶ ಮತ್ತು ಅಮಾನತಿನ ಆತಂಕ ಎದುರಾಗಿದೆ. ಮತ್ತೆ ಸಸ್ಪೆಂಡ್‌ ಮಾಡಿದರೆ ವರ್ಷಗಳ ಕಾಲ ಕೆಲಸ ಇರುವುದಿಲ್ಲ.ಹೀಗಾಗಿ ಮುಷ್ಕರದಲ್ಲಿ ಭಾಗಿಯಾಗಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಮತ್ತೊಂದು ಸಂಘಟನೆಯಿಂದ ಬೆಂಬಲವಿಲ್ಲ. ಇದರಿಂದ ನೌಕರರಲ್ಲೇ ಗೊಂದಲ ನಿರ್ಮಾಣ ಆಗುವ ಸಾಧ್ಯತೆ ಇದೆ.

ಕೆಲಸ ಕಳೆದುಕೊಳ್ಳುವ ಭೀತಿ
ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ದಿನಗಳ ಕಾಲ ಸಾರಿಗೆ ನೌಕರರಿಗೆ ಇದೀಗ ಅಮಾನತು ಇಲ್ಲವೇ ಕರ್ತವ್ಯದಿಂದಲೇ ವಜಾಗೊಳ್ಳುವ ಭೀತಿ ಎದುರಾಗಿದೆ. ಏಕೆಂದರೆ ಸಾರ್ವಜನಿಕರಿಗೆ ತೊಂದರೆ ಕೊಟ್ಟು ಕರ್ತವ್ಯಕ್ಕೆ ಗೈರು ಹಾಜರಾಗಿ ಪ್ರತಿಭಟನೆ ನಡೆಸುವಂತಿಲ್ಲ. ಹಾಗೊಂದು ವೇಳೆ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡರೆ, ಅಂತಹ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ನೌಕರರ ವಿರುದ್ದ ಅಗತ್ಯ ಸೇವಾ ನಿರ್ವಾಹಣೆ ಕಾಯ್ದೆ(ಎಸಾ)ಯಡಿ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ.

ಈ ಹಿಂದೆ ಇದೇ ರೀತಿ ವೈದ್ಯರು ರಾಜ್ಯದಾದ್ಯಂತ ಕರ್ತವ್ಯಕ್ಕೆ ಗೈರು ಹಾಜರಾಗಿ ಪ್ರತಿಭಟನೆ ನಡೆಸಲು ಮುಂದಾದಾಗ ಅವರ ವಿರುದ್ಧ ಎಸಾ ಕಾಯ್ದೆ ಅಸ್ತ್ರ ಬಳಸಲು ಸರ್ಕಾರ ಮುಂದಾಗಿತ್ತು. ಕೊನೆಗೆ ನ್ಯಾಯಾಲಯ ಮಧ್ಯ ಪ್ರವೇಶಿಸಿ ವೈದ್ಯರಿಗೆ ಛೀಮಾರಿ ಹಾಕಿದ್ದರಿಂದ ಪ್ರತಿಭನಟನೆಯಿಂದ ಹಿಂದೆ ಸರಿದಿದ್ದರು.

ಇದೀಗ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರಾಗಿರುವ ಕಾರಣ, ಅಮಾನತು ಅಥವಾ ವಜಾ ಭೀತಿ ಎದುರಿಸುತ್ತಿದ್ದಾರೆ. ಸರ್ಕಾರದ ಎಚ್ಚರಿಕೆಯ ನಡುವೆಯೂ ಸಾರಿಗೆ ನೌಕರರು ಮುಷ್ಕರ ಮಾಡುತ್ತಿದ್ದಾರೆ. 2021ರಲ್ಲಿ ಮುಷ್ಕರ ಮಾಡಿದಾಗ ಸಾವಿರಾರು ನೌಕರರನ್ನು ವಜಾ ಮಾಡಲಾಗಿತ್ತು. ಈ ಬಾರಿಯೂ ನೌಕರರ ಮೇಲೆ ಕೇಸ್‌‍ ಬೀಳುವ ಭೀತಿ ಇದೆ. ವೇತನ ಹಿಂಬಾಕಿ ಮತ್ತು ಪರಿಷ್ಕರಣೆ ಸಂಬಂಧ ನೌಕರರು ಮುಷ್ಕರ ಮಾಡುತ್ತಿದ್ದಾರೆ. ಮುಷ್ಕರ ಮಾಡದಂತೆ ಸರ್ಕಾರ ಆದೇಶ ನೀಡಿದೆ.

ಆದರೂ ನೌಕರರು ಅದನ್ನು ಮೀರಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಡಿಪೋಗಳಲ್ಲಿ ಬಸ್‌‍ ನಿಲ್ಲಿಸಿ ಕರ್ತವ್ಯಕ್ಕೆ ಗೈರಾಗಿರುವ ಸಾರಿಗೆ ನೌಕರರು ಬಿಎಂಟಿಸಿ, ಕೆಎಸ್‌‍ಆರ್‌ಟಿಸಿ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನೌಕರರಿಗೆ ಅಮಾನತುಗೊಳ್ಳುವ ಭೀತಿ ಎದುರಾಗಿದೆ. ನೌಕರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ನೌಕರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರದ ವಿರುದ್ಧ ಸೆಡ್ಡು ಹೊಡೆದ ನೌಕರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗುತ್ತಾ? ಎನ್ನುವ ಪ್ರಶ್ನೆ ಕಾಡಿದೆ.

RELATED ARTICLES

Latest News