ಬೆಂಗಳೂರು,ಅ.9– ರಾಜ್ಯ ಸರ್ಕಾರ ನಿಗಧಿತ ಸಮಯದೊಳಗೆ ತಮ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಇದೇ ತಿಂಗಳ 15ರಿಂದ ಐದು ದಿನಗಳ ಕಾಲ ರಾಜ್ಯಾದ್ಯಂತ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ.
ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದ್ದು, 2020 ಜನವರಿ 1ರಿಂದ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ ನಂತರದ 38 ತಿಂಗಳ ಬಾಕಿ ಹಣ ಪಾವತಿ, 38 ತಿಂಗಳ ಬಾಕಿ ಇರುವ ಸಂಬಳದ ಪಾವತಿ ಮತ್ತು ಶೇ.25ರಷ್ಟು ವೇತನ ಹೆಚ್ಚಳಕ್ಕಾಗಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಮಿತಿ ಹೇಳಿದೆ.
ಇದರಿಂದಾಗಿ ದೀಪಾವಳಿ ಸಂದರ್ಭದಲ್ಲಿ ತಮ ತಮ ಊರುಗಳಿಗೆ ಕುಟುಂಬ ಸಮೇತ ತೆರಳುವ ಪ್ರಯಾಣಿಕರು ಸರ್ಕಾರಿ ಬಸ್ ಗಳನ್ನು ಅವಲಂಬಿಸದೆ, ದುಪ್ಪಟ್ಟು ದರ ನೀಡಿ ಖಾಸಗಿ ಬಸ್ಗಳಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿದೆ. ಒಂದು ವೇಳೆ ಅಷ್ಟರೊಳಗೆ ಸರ್ಕಾರ ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿ ಸಂಧಾನ ಸಫಲವಾದರೆ ಸಮಸ್ಯೆ ಬಗೆಹರಿಯಲಿದೆ. ಇಲ್ಲದಿದ್ದರೆ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.
ಈ ಹಿಂದೆ ಕೆಎಸ್ಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ, ಎನ್ಡಿಬ್ಲ್ಯೂಕೆಆರ್ಟಿಸಿ ಸದಸ್ಯರನ್ನೊಳಗೊಂಡ ಜಂಟಿ ಕ್ರಿಯಾ ಸಮಿತಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು. ಆ ವೇಳೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಬೇಡಿಕೆ ಈಡೇರಿಸುವುದಾಗಿ ಆಶ್ವಾಸನೆ ನೀಡಿದ್ದರು. ಹೀಗೆ ಕೊಟ್ಟ ಭರವಸೆ ಹಲವಾರು ತಿಂಗಳು ಕಳೆದರೂ ಈಡೇರಿಲ್ಲ. ಹಾಗಾಗಿ ಮುಷ್ಕರ ಶತಸಿದ್ಧ. ಮುಷ್ಕರ ಮಾಡಿಸುವುದು ತಪ್ಪಿಸುವುದು ಸಿಎಂ ಕೈಯಲ್ಲಿದೆ ಎಂದು ನೌಕರರ ಸ್ಪಷ್ಟಪಡಿಸಿದ್ದಾರೆ.
ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆಯನ್ನು ಏಕಕಾಲದಲ್ಲಿ 4 ನಿಗಮಗಳಲ್ಲಿ ಜಾರಿಗೆ ತರಬೇಕು, ಸಂಸ್ಥೆಯಲ್ಲಿ ವಿದ್ಯುತ್ ಚಾಲಿತ ಬಸ್ಸುಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ಧತಿಯನ್ನು ಕೈಬಿಟ್ಟು, ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿ ನಿರ್ವಹಣೆ ಮಾಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ಚಾಲಕ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿ ನೇಮಕಾತಿ ಕೈಬಿಡಬೇಕು ಎಂಬುದು ಸಾರಿಗೆ ನೌಕರರ ಆಗ್ರಹವಾಗಿದೆ ಎಂದು ಕಾರ್ಮಿಕ ಮುಖಂಡ ಹೆಚ್.ವಿ.ಅನಂತ ಸುಬ್ಬರಾವ್ ಹೇಳಿದ್ದಾರೆ.
ಸದ್ಯ ನೌಕರರು ಪಡೆಯುತ್ತಿರುವ ವಿವಿಧ ಭತ್ಯೆಗಳನ್ನು ಐದು ಪಟ್ಟು ಹೆಚ್ಚಳ ಮಾಡುವುದು, ಎಲ್ಲಾ ನೌಕರರಿಗೂ ಪ್ರತೀ ತಿಂಗಳೂ ಹೊರ ರೋಗಿ ಚಿಕಿತ್ಸೆ ವೆಚ್ಚಕ್ಕಾಗಿ ಎರಡು ಸಾವಿರ ರೂಪಾಯಿ ಜೊತೆಗೆ ಉಚಿತ ಔಷಧಿ ನೀಡುವುದು, ಇಎಸ್ಐ ಮಾದರಿಯಲ್ಲಿ ನೌಕರರ ಮೂಲ ವೇತನದ ಶೇ.4.5 ಹಾಗೂ ನೌಕರರಿಂದ ಶೇ.0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡುವ ಯೋಜನೆ ರೂಪಿಸಬೇಕು. ನಿವೃತ್ತ ನೌಕರರು ಮತ್ತು ಅವರ ಪತಿ/ಪತ್ನಿ ಹಾಗೂ ಮಕ್ಕಳಿಗೂ ಆರೋಗ್ಯ ಯೋಜನೆ ನೀಡಬೇಕು ಎಂಬುದು ಸಾರಿಗೆ ನೌಕರರ ಬೇಡಿಕೆಯಾಗಿದೆ.