ಬೆಂಗಳೂರು, ಆ.5- ಸಾರಿಗೆ ನಿಗಮಗಳ ಮುಷ್ಕರದ ಹಿನ್ನೆಲೆಯಲ್ಲಿ ಹಲವು ಸರ್ಕಾರಿ ನಿಲ್ದಾಣಗಳಿಗೆ ಖಾಸಗಿ ಬಸ್‌ಗಳು ಪ್ರವೇಶಿಸಿದ್ದು, ವಿಶೇಷವಾಗಿತ್ತು. ಪ್ರವಾಸೋಧ್ಯಮ ಹಾಗೂ ಖಾಸಗಿಯಾಗಿ ರಹದ್ದಾರಿ ಪಡೆದು ಸಂಚರಿಸುತ್ತಿದ್ದ ಬಸ್‌ಗಳನ್ನು ಇಂದು ಸಾರಿಗೆ ಇಲಾಖೆ ಅಧಿಕಾರಿಗಳೇ ನಿಗಮಗಳ ಬಸ್‌ನಿಲ್ದಾಣದ ಒಳಗೆ ಬರಲು ಆಹ್ವಾನಿಸಿದರು.
ಕಲಬುರಗಿ ಸೇರಿದಂತೆ ಹಲವು ಬಸ್‌ನಿಲ್ದಾಣಗಳಲ್ಲಿ ಖಾಸಗಿ ಬಸ್‌ಗಳ ದರ್ಬಾರು ಕಂಡು ಬಂದಿತು. ಖಾಸಗಿ ಬಸ್‌ಗಳು, ಮಹಿಳೆಯರು ಹಾಗೂ ಪುರುಷ ಪ್ರಯಾಣಿಕರಿಂದಲೂ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡಿದ್ದವು.
ಸರ್ಕಾರ ಹಾಗೂ ಜಿಲ್ಲಾಡಳಿತಗಳ ಎಚ್ಚರಿಕೆಯ ನಡುವೆಯೂ ಖಾಸಗಿ ಬಸ್‌ಗಳಲ್ಲಿ ನಾಲ್ಕೈದು ಪಟ್ಟು ಅಧಿಕ ಪ್ರಯಾಣ ದರ ವಸೂಲಿ ಮಾಡಲಾಗುತ್ತಿತ್ತು. ದೂರದೂರಿಗೆ 150 ರೂ. ಟಿಕೆಟ್ ದರ ಇರುವ ಜಾಗದಲ್ಲಿ 1000 ರೂ. ಕೇಳಲಾಗುತ್ತಿತ್ತು. ಅಷ್ಟು ಹಣ ಕೊಟ್ಟು ಬಸ್‌ನಲ್ಲಿ ಹೋಗುವ ಬದಲಾಗಿ ಕಾರಿನಲ್ಲೇ ಮನೆ ಬಾಗಿಲಿಗೆ ಹೋಗುತ್ತೇವೆ ಎಂದು ಕೆಲವು ಪ್ರಯಾಣಿಕರು ಬಸ್‌ನಿಂದ ಕೆಳಗೆ ಇಳಿದರು.
ಹೊರಗಡೆ ಆಟೋ ಮತ್ತು ಕ್ಯಾಬ್‌ಗಳ ಪ್ರಯಾಣ ದರ ಹೆಚ್ಚಿಸಿರುವುದರಿಂದ ಜನರು ಹಿಡೀ ಶಾಪ ಹಾಕುತ್ತಿದ್ದರು.ಬಸ್ ಮುಷ್ಕರದ ಬಗ್ಗೆ ಹಲವು ಗೊಂದಲಗಳಿದ್ದವು. ಸರ್ಕಾರ ಸಂಧಾನ ಸಭೆ ನಡೆಸುತ್ತಿತ್ತು. ಅದರ ಫಲಿತಾಂಶ ಜನ ಸಾಮಾನ್ಯರಿಗೆ ತಿಳಿಯಲು ವಿಳಂಭವಾಯಿತು.
ಇತ್ತ ಹೈಕೋರ್ಟ್ ಕೂಡ ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜನರಿಗೆ ಮುಷ್ಕರ ಇದೆಯೋ-ಇಲ್ಲವೋ ಎಂಬ ಗೊಂದಲಗಳಿದ್ದವು.
ಈ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಬಸ್‌ನಿಲ್ದಾಣಗಳಿಗೆ ಆಗಮಿಸಿದ್ದರು. ಅಲ್ಲಿ ಬಸ್‌ಗಳಿಲ್ಲ ಎಂದು ತಿಳಿದಾಗ ಮನಸ್ಸಿನಲ್ಲೇ ನಿಂದಿಸಿಕೊಳ್ಳುತ್ತಾ ಬಸ್ ನಿಲ್ದಾಣ ಹೊರಗೆ ಬಂದು ಆಟೋ, ಕ್ಯಾಬ್‌ಗಳಲ್ಲಿ ದುಪ್ಪಟ್ಟು ಹಣ ಕೊಟ್ಟು ಪ್ರಯಾಣಿಸಿದರು.