ಬೆಂಗಳೂರು,ಡಿ.18- ರಾಜ್ಯ ಸರ್ಕಾರ ತಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಡಿ.31 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹೊಸ ವರ್ಷದ ಮುನ್ನಾದಿನದಂದು ಲಕ್ಷಾಂತರ ಜನರಿಗೆ ತೊಂದರೆಯಾಗುವ ಸಾಧ್ಯತೆಯಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ನಡೆಸಲಿದ್ದಾರೆ.
36 ತಿಂಗಳಿಅದ ಬಾಕಿ ಉಳಿದಿರುವ 1,750 ಕೋಟಿ ರೂ.ಗಳ ಬಾಕಿ ಪಾವತಿ ಬಿಡುಗಡೆ ಮಾಡಬೇಕು. ಮೂಲವೇತನಕ್ಕೆ ಶೇಕಡ 25 ರಷ್ಟು ವೇತನ ಹೆಚ್ಚಿಸಿ, ಶೇಕಡ 31 ರಷ್ಟು ತುಟ್ಟಿ ಭತ್ಯೆ ವಿಲೀನಗೊಳಿಸಿ ವೇತನ ಶ್ರೇಣಿ ಸಿದ್ಧಪಡಿಸಬೇಕು. ನೌಕರರ ಭತ್ಯೆಗಳನ್ನು ಶೇ.5 ಪಟ್ಟು ಹೆಚ್ಚಳ ಮಾಡಬೇಕು. ಪ್ರತಿ ತಿಂಗಳು 2000 ರೂ. ವೈದ್ಯಕೀಯ ಚಿಕಿತ್ಸಾ ವೆಚ್ಚ ನೀಡಬೇಕು.
ಬಸ್ ನಿಲ್ದಾಣ ಮತ್ತು ಬಸ್ ಘಟಕಗಳಲ್ಲಿ ಸೂಕ್ತ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶಕ್ತಿ ಯೋಜನೆಯಿಂದ ಆಗುತ್ತಿರುವ ಶಿಕ್ಷೆ, ಕಿರುಕುಳ ಸಮಸ್ಯೆ ಪರಿಹರಿಸಬೇಕು. ನೌಕರರ ಮುಂಬಡ್ತಿಗೆ ಕ್ರಮ ಕೈಗೊಳ್ಳ ಬೇಕು. ಹೆಚ್ಚುವರಿ ಕೆಲಸದ ಅವಧಿಗೆ ಓಟಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ.
ಡಿ.14 ರಂದು ರಾಜ್ಯ ಸರ್ಕಾರದ ಪರವಾಗಿ ಸಚಿವ ದಿನೇಶ್ ಗುಂಡೂರಾವ್ ಅವರು ನಮ ಮನವಿ ಸ್ವೀಕರಿಸಿ ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ಚರ್ಚಿಸು ವುದಾಗಿ ಭರವಸೆ ನೀಡಿದ್ದಾರೆಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.