ಬೆಂಗಳೂರು,ಜು.15- ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಚಿತ್ರನಟ ದ್ವಾರಕೀಶ್, ಖ್ಯಾತ ನಿರೂಪಕಿ ಅಪರ್ಣಾ, ಸಾಹಿತಿ ಕಮಲ ಹಂಪನಾ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನಪರಿಷತ್‌ನಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ದಿನದ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ನಿರ್ಣಯವನ್ನು ಮಂಡಿಸಿದರು.
ಇತ್ತೀಚೆಗೆ ಅಗಲಿದ ವಿಧಾನಪರಿಷತ್ ಮಾಜಿ ಸದಸ್ಯೆ ಸುನಂದಾ ಪಾಟೀಲ್, ಟಿ.ಕೆ.ಚಿನ್ನಸ್ವಾಮಿ, ಇಕ್ಬಾಲ್ ಅಹಮದ್ ಸರಡಗಿ, ಎಂ.ಬಿ.ಭಾನು ಪ್ರಕಾಶ್, ಮಾಜಿ ಸಚಿವೆ ನಾಗಮ ಕೇಶವಮೂರ್ತಿ, ಕೇಂದ್ರದ ಮಾಜಿ ಸಚಿವ ಶ್ರೀನಿವಾಸಪ್ರಸಾದ್, ಎಂ.ಪಿ.ಕೇಶವಮೂರ್ತಿ, ಪಾಡ್ದನ ಕಲಾವಿದೆ ಗಿಡಿಗೆರೆ ರಾಮಕ್ಕ, ನಟ ದ್ವಾರಕೀಶ್, ಯಕ್ಷಗಾನ ಕಲಾವಿದ ಸುಬ್ರಹಣ್ಯ ಧಾರೇಶ್ವರ, ಪೇತ್ರಿ ಮಾಧವನಾಯಕ್ , ಸರೋದ್ ವಾದಕ ರಾಜೀವ್ ತಾರಾನಾಥ್, ಹಿರಿಯ ರಂಗಕರ್ಮಿ ಡಾ.ನಟೇಶ್ ರತ್ನ, ಕನ್ನಡ ವಿದುಷಿ ಕಮಲಾ ಹಂಪನಾ, ನಿರೂಪಕಿ ಅಪರ್ಣಾ ಅವರಿಗೆ ಸಂತಾಪ ಸೂಚಿಸಲಾಯಿತು.
ಸಂತಾಪ ನಿರ್ಣಯದ ಮೇಲೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ ಅಗಲಿದ ಗಣ್ಯರ ಸೇವೆಯನ್ನು ಸರಿಸಿದರು. ಕೇಂದ್ರ ಮಾಜಿ ಸಚಿವರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರು, ದಲಿತ ಸಮುದಾಯದ ಆಶಾಕಿರಣವಾಗಿದ್ದರು. ಯಾವುದೇ ಹುದ್ದೆಯನ್ನು ನೀಡಿದರೂ ಅದನ್ನು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ರಾಜ್ಯವು ಅವರನ್ನು ಕಳೆದುಕೊಂಡು ಬಡವಾಗಿದೆ ಎಂದು ವಿಷಾದಿಸಿದರು.
ಚಿತ್ರನಟ ದ್ವಾರಕೀಶ್, ನಿರೂಪಕಿ ಅಪರ್ಣ ಸೇರಿದಂತೆ ಅನೇಕರು ಕನ್ನಡ ಭಾಷಾ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರು. ಅವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ಹೇಳಿದರು.ಸಭಾ ನಾಯಕ ಎನ್.ಎಸ್.ಭೋಸರಾಜ್ ಮಾತನಾಡಿ, ಮಾಜಿ ಸಚಿವೆ ನಾಗಮ ಕೇಶವಮೂರ್ತಿಯವರು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂದು ಕನಸು ಕಂಡಿದ್ದರು. ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಹೋರಾಟಗಳನ್ನು ನಡೆಸಿದ್ದರು ಎಂದು ಸರಿಸಿದರು.
ಹಿಂದುಳಿದ ಕಲ್ಯಾಣ ಕರ್ನಾಟಕದ ಕಲಬುರಗಿಯಿಂದ ಸಂಸದರಾಗಿ ವಿಧಾನಪರಿಷತ್ ಸದಸ್ಯರಾಗಿದ್ದ ಇಕ್ಬಾಲ್ ಅಹಮದ್ ಸರಡಗಿ, ವಿ.ಶ್ರೀನಿವಾಸ್ ಪ್ರಸಾದ್, ದ್ವಾರಕೀಶ್ ಸೇರಿದಂತೆ ಅನೇಕರು ನಾಡಿಗೆ ತಮದೇ ಆದ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆ ಎಂದೆಂದಿಗೂ ಅಜರಾಮರವಾಗಿರತ್ತದೆ ಎಂದು ಬಣ್ಣಿಸಿದರು.
ಸಂತಾಪ ನಿರ್ಣಯದ ಮೇಲೆ ಬಿಜೆಪಿಯ ಶಶಿಲ್ ನಮೋಶಿ ಕೂಡ ಮಾತನಾಡಿ, ಅಗಲಿದ ಗಣ್ಯರ ಸೇವೆಯನ್ನು ಕೊಂಡಾಡಿದರು. ಮೃತರ ಗೌರವಾರ್ಥವಾಗಿ ಸದನದ ಎಲ್ಲ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿದರು. ಬಳಿಕ ಸಭಾಪತಿಯವರು ಜೆಡಿಎಸ್‌ನ ಎಸ್.ಎಲ್.ಭೋಜೇಗೌಡ ಅವರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಿಸಿದರು.