ಬೆಂಗಳೂರು,ಆ.18- ಇತ್ತೀಚೆಗೆ ಅಗಲಿದ ಜ್ಞಾನದಾಸೋಹಿ ಡಾ.ಶರಣಬಸವಪ್ಪ ಅಪ್ಪ ಹಾಗೂ ವಿಶ್ವಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ.ಖಾದರ್, ಈ ಇಬ್ಬರು ಮಹಾನ್ ಸಂತರ ಅಗಲಿಕೆಯನ್ನು ಸದನಕ್ಕೆ ವಿಷಾದದಿಂದ ತಿಳಿಸಿದರು. ಡಾ.ಶರಣಬಸವಪ್ಪ ಅಪ್ಪ ಅವರು 1935ರ ನವೆಂಬರ್ 14ರಂದು ಜನಿಸಿದ್ದು, ಧಾರವಾಡದ ಕರ್ನಾಟಕ ವಿವಿಯಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅದೇ ವಿವಿಯ ಸಿಂಡಿಕೇಟ್ ಸದಸ್ಯರಾಗಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಶರಣ ಬಸವೇಶ್ವರ ದೇವಸ್ಥಾನದ ದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿಯಾಗಿದ್ದ ಶ್ರೀಗಳು ಆಧ್ಯಾತ ಸೇರಿದಂತೆ ಹಲವು ವಿಷಯಗಳಲ್ಲಿ ಅಪಾರ ಜ್ಞಾನ ಹೊಂದಿದ್ದಾರೆ. ಧಾರ್ಮಿಕ ಕ್ಷೇತ್ರದ ಜೊತೆಗೆ ಶರಣ ಬಸವೇಶ್ವರ ವಿಶ್ವವಿದ್ಯಾಲಯ, ಶರಣ ಬಸವೇಶ್ವರ ರೆಸಿಡೆನ್ಷಿಯಲ್ ಪಬ್ಲಿಕ್ ಸ್ಕೂಲ್ ಸೇರಿದಂತೆ 60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಕಲಬುರಗಿಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದರು.
1963ರಲ್ಲಿ ಅಖಿಲ ಭಾರತ ಶಿವಾನುಭವ ಮಂಟಪ ಸ್ಥಾಪನೆ, ದಾಸೋಹ ಜ್ಞಾನ ರತ್ನ ಸಾಹಿತ್ಯಿಕ ಪಾಕ್ಷಿಕ ಪತ್ರಿಕೆ ಪ್ರಾರಂಭ, ಮಹಾದಾಸೋಹಿ ಶರಣಬಸವ ಅಂಕಿತದಲ್ಲಿ 21 ವಚನಗಳ ರಚನೆ, 26 ಎಕರೆ ಭೂ ಜಾಗದಲ್ಲಿ ಗೋಶಾಲೆ ನಿರ್ಮಾಣ ಹಾಗೂ ದೆಹಲಿಯ ಸಂಸತ್ ಭವನದ 9ನೇ ಗೇಟ್ ಬಳಿ ಬಸವಣ್ಣನವರ ಕಂಚಿನ ಪ್ರತಿಮೆ ಸ್ಥಾಪನೆ ಸೇರಿದಂತೆ ವಿವಿಧ ಸಾಧನೆಗಳನ್ನು ಮಾಡಿದ್ದರು.
ಅಖಿಲ ಭಾರತ ಅನುಭವ ಮಂಟಪಗಳ ಮಹಾಸಮೇಳನ ಹಾಗೂ ವೀರಶೈವ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಕಲಬುರಗಿ ವಿವಿಯಿಂದ ಗೌರವ ಡಾಕ್ಟರೇಟ್, ಲಲಿತ ಕಲಾ ಅಕಾಡೆಮಿಯಿಂದ ಕಲಾಪೋಷಕ ಪ್ರಶಸ್ತಿ, ಎಚ್.ಕೆ.ಇ. ಶಿಕ್ಷಣ ಸಂಸ್ಥೆಯ ವಿದ್ಯಾ ಭಂಡಾರಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಆ.14ರಂದು ಇಹಲೋಕ ತ್ಯಜಿಸಿದ್ದಾರೆ ಎಂದು ವಿವರಿಸಿದರು.
ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ 1945, ಫೆ.10ರಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಹಳ್ಳಿಯೊಂದರಲ್ಲಿ ಜನಿಸಿದರು. ಬಿಕಾಂ ಪದವೀಧರರಾಗಿದ್ದ ಶ್ರೀಗಳು ಬೆಂಗಳೂರಿನ ತಿರುಚಿ ಕೈಲಾಶ್ ಆಶ್ರಮದಲ್ಲಿ ಸಂಸ್ಕೃತ ವೇದ ಅಧ್ಯಯನ ಮಾಡಿದ್ದರು. 1968ರಲ್ಲಿ ಶ್ರೀ ಆದಿಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದರು. 1983ರಲ್ಲಿ ಕೆಂಗೇರಿ ಬಳಿಯ 10 ಎಕರೆ ಜಮೀನಿನಲ್ಲಿ ಶ್ರೀ ಗುರು ಜ್ಞಾನಕೇಂದ್ರ ಟ್ರಸ್ಟ್ ಹೆಸರಿನಲ್ಲಿ ಶಾಲೆ, ಕಾಲೇಜು ಆರಂಭಿಸಿದರು. ನಂತರ 2002ರಲ್ಲಿ ಅದು ವಿಶ್ವ ಒಕ್ಕಲಿಗರ ಸಂಸ್ಥಾನ ಮಠ ಎಂದು ನಾಮಕರಣಗೊಂಡಿತು ಎಂದು ಸಭಾಧ್ಯಕ್ಷರು ವಿವರಿಸಿದರು.
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆಧ್ಯಾತಿಕ ಕ್ಷೇತ್ರಕ್ಕೆ ತಮದೇ ಆದ ಅಪಾರ ಕೊಡುಗೆ ನೀಡಿದ್ದರು. ಜನಮಾನಸದಲ್ಲಿ ಭಕ್ತಿಯನ್ನು ನೆಲೆಯೂರಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು. ದುಃಖದುಮಾನಗಳಿಗೆ ಸ್ಪಂದಿಸುತ್ತಿದ್ದರು. ತಮ ಬೋಧನೆಗಳ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ಸನಾತನ ಸಂಸ್ಕೃತಿ ಹಾಗೂ ಪರಂಪರೆಗಳ ರಕ್ಷಕರಾಗಿದ್ದ ಶ್ರೀಗಳು ಹಲವು ಸಾಮಾಜಿಕ ಚಳುವಳಿಯ ನೇತೃತ್ವ ವಹಿಸಿದ್ದರು. ಆ.16ರಂದು ನಿಧನರಾಗಿದ್ದಾರೆ ಎಂದು ಸಭಾಧ್ಯಕ್ಷರು ಹೇಳಿದರು.
ಜವಳಿ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಡಾ.ಶರಣಬಸವಪ್ಪ ಅಪ್ಪ ಅವರು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ ನೀಡಿ, ಗೋಶಾಲೆ ಸ್ಥಾಪಿಸಿದ್ದಾರೆ. ವಿದ್ವಾಂಶರಾಗಿದ್ದ ಅವರು ಬಹುಮುಖ ವ್ಯಕ್ತಿತ್ವ ಉಳ್ಳವರು, ಅಪ್ಪ ಅವರು ಹಾಗೂ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪ್ಪ ಅವರು ವಿದ್ಯಾ ಕ್ರಾಂತಿ ಮಾಡಿದ್ದರು. ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಧರ್ಮದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿದ್ದರು. ಇಬ್ಬರು ಸಂತರು ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿದ್ದರು. ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ ಎಂದರು.
ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸವಪ್ಪ ಅಪ್ಪ ಅವರ ಹೆಸರನ್ನು ಇಡಬೇಕೆಂದು ಮನವಿ ಮಾಡಿದರು. ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಅಪ್ಪ ಅವರಿಗೆ ಕಾಯಕ ದಾಸೋಹ ರತ್ನ ಪ್ರಶಸ್ತಿ ನೀಡಬೇಕು ಎಂದರು.
ಬಿಜೆಪಿ ಶಾಸಕ ವಿಜಯೇಂದ್ರ ಮಾತನಾಡಿ, ಶರಣಬಸವಪ್ಪ ಅಪ್ಪ ಹಾಗೂ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳು ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಂತರಿಬ್ಬರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ಹೇಳಿದರು.
ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳು ಎಲ್ಲಾ ಜಾತಿ ಜನಾಂಗದ ಬಗ್ಗೆ ಒಟ್ಟಾಗಿ ನೋಡುವ ಗುಣ ಹೊಂದಿದ್ದರು. ಸಮಾಜದ ಕಟ್ಟಕಡೆಯ ಪ್ರಜೆಗೂ ಧರ್ಮ ಬೋಧನೆ ಮಾಡುತ್ತಿದ್ದರು ಎಂದರು.
ಕೃಷಿ ಸಚಿವ ಚಲುವರಾಯಸ್ವಾಮಿ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಶಾಸಕರಾದ ಬಸವರಾಜ ಮತ್ತಿಮೋಡ್, ಡಾ.ಅವಿನಾಶ್ ಜಾದವ್, ಜಿ.ಟಿ.ದೇವೇಗೌಡ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಂತರ ಗುಣಗಾನ ಮಾಡಿ ಸಂತಾಪ ಸೂಚಿಸಿದರು.
ನಂತರ ಸದನದಲ್ಲಿ ಸದಸ್ಯರೆಲ್ಲರೂ ಎದ್ದು ನಿಂತು ಅಗಲಿತ ಸಂತರಿಗೆ ಮೌನ ಆಚರಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದರು.