Saturday, January 4, 2025
Homeರಾಜ್ಯಇತ್ತೀಚೆಗೆ ನಿಧನರಾದ ಏಳು ಗಣ್ಯರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಕೆ

ಇತ್ತೀಚೆಗೆ ನಿಧನರಾದ ಏಳು ಗಣ್ಯರಿಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಕೆ

Tributes paid in the Legislative Assembly to seven personalities who passed away

ಬೆಳಗಾವಿ,ಡಿ.9- ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷರು ಹಾಗೂ ಸಚಿವರು ಆಗಿದ್ದ ಮನೋಹರ ಹನುಮಂತಪ್ಪ ತಹಸೀಲ್ದಾರ್‌ ಸೇರಿದಂತೆ ಇತ್ತೀಚೆಗೆ ಅಗಲಿದ ಏಳು ಮಂದಿ ಗಣ್ಯರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಸಂತಾಪ ಸೂಚನ ನಿರ್ಣಯವನ್ನು ಪ್ರಸ್ತಾಪಿಸಿ, ವಿಧಾನಸಭೆಯ ಮಾಜಿ ಉಪಾಧ್ಯಕ್ಷರಾಗಿದ್ದ ಮನೋಹರ ಹನುಮಂತಪ್ಪ ತಹಸೀಲ್ದಾರ್‌ , ಮಾಜಿ ಸಚಿವರಾಗಿದ್ದ ಕೆ.ಎಚ್‌.ಶ್ರೀನಿವಾಸ್‌‍, ಮಾಜಿ ಸದಸ್ಯರಾಗಿದ್ದ ಬಸವರಾಜು.ಎ.ಎಸ್‌‍, ಲಕ್ಷ್ಮಿನಾರಾಯಣ.ಕೆ, ವೆಂಕಟರೆಡ್ಡಿ ಮುದ್ನಾಳ್‌ ಹಾಗೂ ಖ್ಯಾತ ಕೈಗಾರಿಕೋದ್ಯಮಿಯಾಗಿದ್ದ ರತನ್‌ ಟಾಟಾ, ಸೂಫಿ ಸಂತರಾದ ಸಯ್ಯದ್‌ ಷಹಾ, ಕುಸ್ರೋ ಉಸೇನಿ ನಿಧನ ಹೊಂದಿರುವುದನ್ನು ನಿದನ ಹೊಂದಿರುವುದನ್ನು ಸದನಕ್ಕೆ ತಿಳಿಸಿದರು.

ಮನೋಹತ್‌ ತಹಸೀಲ್ದಾರ್‌ ಅವರು 1946, ಜುಲೈ 21ರಂದು ಹರಿಹರದಲ್ಲಿ ಜನಿಸಿದ್ದರು. 1978ರಲ್ಲಿ ಮೊದಲ ಬಾರಿಗೆ ಹಾನಗಲ್‌ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ನಂತರ 1989, 1999, 2013ರಲ್ಲಿ ವಿಧಾನಸಭೆಗೆ ಪುನರಾಯ್ಕೆಗೊಂಡಿದ್ದರು. 2013ರಲ್ಲಿ ವಿಧಾನಸಭಾ ಉಪಸಭಾಧ್ಯಕ್ಷರಾಗಿ, 2015ರಲ್ಲಿ ಅಬಕಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಇವರು ನ.21ರಂದು ನಿಧನ ಹೊಂದಿದ್ದಾರೆ ಎಂದು ತಿಳಿಸಿದರು.

ಮಾಜಿ ಸಚಿವರಾಗಿದ್ದ ಕೆ.ಎಚ್‌.ಶ್ರೀನಿವಾಸ್‌‍ ಅವರು 1938ರಲ್ಲಿ ಸಾಗರ ತಾಲ್ಲೂಕಿನ ಕಾಣಗೋಡು ಗ್ರಾಮದಲ್ಲಿ ಜನಿಸಿದ್ದರು. ಬಹುಮುಖ ಪ್ರತಿಭೆಯಾಗಿದ್ದ ಶ್ರೀನಿವಾಸ್‌‍ ಕೃಷಿಕರಾಗಿ, ವಕೀಲರಾಗಿ ಸೇವೆ ಸಲ್ಲಿಸಿದ್ದಲ್ಲದೆ, ಸಾಹಿತ್ಯ ರಚನೆ ಜೊತೆಗೆ ಸಿನಿಮಾದಲ್ಲೂ ಅಭಿನಯಿಸಿದ್ದರು.
ಮೊದಲ ಬಾರಿಗೆ ಚುನಾಯಿತರಾಗಿದ್ದ ಅವರು 6 ಹಾಗೂ 8ನೇ ವಿಧಾನಸಭೆಗೆ ಆಯ್ಕೆಗೊಂಡು ವಾರ್ತಾ ಪ್ರಸಾರ ಮತ್ತು ಯುವಜನ ಸೇವೆಗಳ ಮತ್ತು ಇಂಧನ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಜೊತೆಗೆ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದ ಅವರು ಅಪ್ರತಿಮ ಸಂಸದೀಯ ಪಟುವಾಗಿದ್ದರು. ಆಗಸ್ಟ್‌ 30ರಂದು ನಿಧನರಾಗಿದ್ದಾರೆ ಎಂದು ತಿಳಿಸಿದರು.

ವಿಧಾನಸಭೆಯ ಮಾಜಿ ಸದಸ್ಯ ಬಸವರಾಜು.ಎ.ಎಸ್‌‍ ಅವರು 1943ರಲ್ಲಿ ಅರಸೀಕೆರೆಯಲ್ಲಿ ಜನಿಸಿದ್ದರು. ವೃತ್ತಿಯಲ್ಲಿ ವ್ಯಾಪಾರಸ್ಥರಾಗಿದ್ದ 2004ರಲ್ಲಿ 12ನೇ ವಿಧಾನಸಭೆಗೆ ಅರಸೀಕೆರೆ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಇವರು ಆ.15ರಂದು ನಿಧನ ಹೊಂದಿದ್ದಾರೆ ಎಂದು ಸಭಾಧ್ಯಕ್ಷರು ಸದನದ ಗಮನಕ್ಕೆ ತಂದರು.

ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಲಕ್ಷ್ಮಿ ನಾರಾಯಣ.ಕೆ ಅವರು 1939ರಲ್ಲಿ ಕುಂದಾಪುರದಲ್ಲಿ ಜನಿಸಿದ್ದರು. 2008ರಲ್ಲಿ 13ನೇ ವಿಧಾನಸಭೆಗೆ ಬೈಂದೂರು ಕ್ಷೇತ್ರದಿಂದ ಚುನಾಯಿತರಾಗಿದ್ದ ಅವರು ಸೆ.7ರಂದು ನಿಧನರಾದರು ಎಂದು ತಿಳಿಸಿದರು.

ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ವೆಂಕಟರೆಡ್ಡಿ ಮುದ್ನಾಳ್‌ ಅವರು, 1954ರ ಯಾದಗಿರಿಯಲ್ಲಿ ಜನಿಸಿದ್ದರು. 2015ನೇ ವಿಧಾನಸಭೆಗೆ ಯಾದಗಿರಿ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಇವರು ಸೆ.17ರಂದು ನಿಧನರಾಗಿದ್ದಾರೆ ಎಂದರು.

ದೇಶದ ಖ್ಯಾತ ಕೈಗಾರಿಕೋದ್ಯಮಿ ರತನ್‌ ಟಾಟಾ ಅವರು 1937ರಲ್ಲಿ ಜನಿಸಿದ್ದರು. ಭಾರತೀಯ ಆರ್ಥಿಕತೆಯ ಉದಾರೀಕರಣದ ಸಮಯದಲ್ಲಿ ಟಾಟಾ ಸಮೂಹ ಕಂಪನಿಗಳನ್ನು ಜಾಗತೀಕರಣ ಮತ್ತು ಸ್ಪರ್ಧಾತಕ ಯುಗಕ್ಕೆ ಸರಿದೂಗುವಂತೆ ಪುನರಚನೆ ಮಾಡಿ 1991ರಿಂದ 2012ರವರೆಗೆ ಟಾಟಾ ಸಮೂಹದ ಅಧ್ಯಕ್ಷರಾಗಿದ್ದರು. ಜನೋಪಕಾರಿ ಕೆಲಸಗಳಿಗೆ ಸ್ಥಾಪನೆಯಾಗಿದ್ದ ಟಾಟಾ ಟ್ರಸ್ಟ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಅವರಿಗೆ ಭಾರತ ಸರ್ಕಾರವು ಪದಭೂಷಣ, ಪದವಿಭೂಷಣ ನೀಡಿ ಗೌರವಿಸಿತು. ದೇಶ ವಿದೇಶಗಳ ಹಲವಾರು ಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್‌ ಪದವಿಗಳಿಗೆ ಭಾಜನರಾಗಿದ್ದ ಅವರು ಮಹಾನ್‌ ಮಾನವತಾದಿಯಾಗಿದ್ದರು. ಇವರು ಅ.9ರಂದು ನಿಧನರಾಗಿದ್ದಾರೆ ಎಂದು ಸರಿಸಿದರು.

ಕಲಬುರಗಿಯ ಧಾರ್ಮಿಕ ಕೇಂದ್ರವಾದ ಖಾಜಾಬಂದ ನವಾಜ್‌ ದರ್ಗಾದ ಸೂಫಿ ಸಂತ ಸಯ್ಯದ್‌ ಷಹಾ ಕುಸ್ರೋ ಉಸೇನಿ ಅವರು ನ.6ರಂದು ನಿಧನ ಹೊಂದಿದ್ದಾರೆಂದು ತಿಳಿಸಿದರು.
ಬಳಿಕ ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚನ ನಿರ್ಣಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸಿ ಮಾತನಾಡಿ ಮೃತರ ಗುಣಗಾನ ಮಾಡಿದರು.

ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಸಚಿವರಾದ ಡಾ.ಜಿ.ಪರಮೇಶ್ವರ್‌, ಎಚ್‌.ಕೆ.ಪಾಟೀಲ್‌ ಮತ್ತಿತರರು ಅಗಲಿದ ಗಣ್ಯರ ನಿಧನಕ್ಕೆ ಸಂತಾಪ ಸೂಚಿಸಿದರು.
ಆನಂತರ ಮೃತರ ಗೌರವಾರ್ಥ ಸದನದಲ್ಲಿ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.

RELATED ARTICLES

Latest News