ಬೆಳಗಾವಿ,ಡಿ.17- ವೃಕ್ಷಮಾತೆ ಎಂದೇ ಜನಪ್ರಿಯರಾಗಿದ್ದ ತುಳಸೀ ಗೌಡ ಅವರ ನಿಧನಕ್ಕೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು, ವೃಕ್ಷ ಮಾತೇ ಎಂದೇ ಜನಪ್ರಿಯರಾಗಿದ್ದ ತುಳಿಸೀ ಗೌಡ ಅವರು ನಿಧನ ಹೊಂದಿರುವುದನ್ನು ವಿಷಾದದಿಂದ ಸದನಕ್ಕೆ ತಿಳಿಸಿದರು.
ಅಂಕೋಲ ತಾಲ್ಲೂಕು ಹೊನ್ನಹಳ್ಳಿಯ ತುಳಸೀ ಗೌಡ ಅವರು ಹಾಲಕ್ಕಿ ಬುಡಕಟ್ಟು ಸಮುದಾಯದ ಬಡ ಕುಟುಂಬದಲ್ಲಿ ಜನಿಸಿದ್ದು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಮರಗಳೊಂದಿಗೆ ಅನುಭವ ಹಾಗೂ ಅಪಾರ ಜ್ಞಾನ ಹೊಂದಿದ್ದ ಅವರು, ಅರಣ್ಯದ ಎನ್ಸೈಕ್ಲೋಪಿಡಿಯಾ, ವೃಕ್ಷ ಮಾತೆ ಎಂದೇ ಪ್ರಖ್ಯಾತರಾಗಿದ್ದರು. 300ಕ್ಕೂ ಹೆಚ್ಚು ಮರಗಳ ಪ್ರಭೇದಗಳನ್ನು ತಿಳಿದಿದ್ದ ಅವರು, ನಿಂತ ಜಾಗದಲ್ಲೇ ಅವುಗಳ ಬಗ್ಗೆ ವಿವರಿಸುವಷ್ಟು ಜ್ಞಾನ ಹೊಂದಿದ್ದರು. ಅರಣ್ಯ ಇಲಾಖೆ ಜೊತೆ ಕೈಜೋಡಿಸಿ 65 ವರ್ಷಗಳಿಂದ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದರು.
ಬಾಲ್ಯದಲ್ಲೇ ವಿಧವೆಯಾದ ತುಳಸಿಗೌಡ ಮರಗಳಲ್ಲೇ ಕುಟುಂಬ ಹಾಗೂ ಮಕ್ಕಳನ್ನು ಕಂಡವರು. ಒಂದು ಕಾಲದಲ್ಲಿ ಕಾಡಿನಿಂದ ಕಟ್ಟಿಗೆ ತರುತ್ತಿದ್ದ ಅವರು ಇಂದು ಕಾಡನ್ನೇ ನಿರ್ಮಿಸಿ ಮಾದರಿಯಾಗಿದ್ದಾರೆ. ಲಕ್ಷಾಂತರ ಮರಗಳನ್ನು ನೆಟ್ಟು ಪೋಷಿಸಿದ್ದ ಅವರ ಪರಿಸರ ಪ್ರೇಮಕ್ಕಾಗಿ 2021ರಲ್ಲಿ ಪದಶ್ರೀ ಪ್ರಶಸ್ತಿ ನೀಡಲಾಗಿತ್ತು.
ರಾಜ್ಯೋತ್ಸವ, ಪ್ರಿಯದರ್ಶಿನಿ, ವೃಕ್ಷ ಮಿತ್ರ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ವೃಕ್ಷಗಳ ಆರೈಕೆ ಮೂಲಕ ಪ್ರಸಿದ್ದಿ ಪಡೆದಿದ್ದ 81 ವರ್ಷದ ತುಳಸೀ ಗೌಡ ನಿನ್ನೆ ನಿಧನ ಹೊಂದಿದ್ದಾರೆ ಎಂದು ವಿಷಾದಿಸಿದರು.
ಈ ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ತುಳಸೀಗೌಡ ಅವರಿಗೆ ಅರಣ್ಯದ ಮೇಲೆ ಪ್ರೀತಿಯಿತ್ತು. 300ಕ್ಕೂ ಹೆಚ್ಚು ತಳಿಗಳ ಬಗ್ಗೆ ತಿಳುವಳಿಕೆ ಹೊಂದಿದ್ದರು. ವೃಕ್ಷ ಮಾತೆ ಎಂದು ಕರೆಯುವಷ್ಟರ ಮಟ್ಟಿಗೆ ಅವರು ತಮನ್ನು ಅರ್ಪಣೆ ಮಾಡಿಕೊಂಡಿದ್ದರು. ಅವರಿಗೆ ಶ್ರದ್ದಾಂಜಲಿ ಸಲ್ಲಿಸುವುದಾಗಿ ಹೇಳಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ತುಳಸೀ ಗೌಡ ಅವರು ಇಂದು ನಮ ಮುಂದೆ ಇಲ್ಲ. ಬಡ ಕುಟುಂಬದಲ್ಲಿ ಜನಿಸಿದ್ದರೂ ವೃಕ್ಷ ಬೆಳೆಸುವ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ. ಸತ್ತ ಮೇಲೂ ಕೆಲವರು ಬದುಕುತ್ತಾರೆ. ಅಂಥವರ ಸಾಲಿಗೆ ಇವರು ಸೇರುತ್ತಾರೆ. ಪ್ರಧಾನಿ ನರೇಂದ್ರಮೋದಿ ಅವರಿಗೂ ಇವರು ಆಶೀರ್ವಾದ ಮಾಡಿದ್ದರು. ತುಳಸಿಯನ್ನು ನಾವು ಪವಿತ್ರ ಭಾವನೆಯಿಂದ ಪೂಜೆ ಮಾಡುತ್ತೇವೆ. ಹೀಗಾಗಿ ತುಳಸೀಗೌಡ ಅವರಿಗೆ ಸಂತಾಪ ಸೂಚಿಸುವುದಾಗಿ ಹೇಳಿದರು.
ನಂತರ ಸದನದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಂತಾಪ ಸೂಚಕ ನಿರ್ಣಯವನ್ನು ಅವರ ಕುಟುಂಬ ವರ್ಗದವರಿಗೆ ಕಳುಹಿಸಿ ಕೊಡುವುದಾಗಿ ಸಭಾಧ್ಯಕ್ಷರು ಹೇಳಿದರು. ಆಗ ಬಿಜೆಪಿಯ ದಿನಕರ್ ಕೇಶವ ಶೆಟ್ಟಿ ಅವರು ಮಾತನಾಡಿ, ತುಳಸೀ ಗೌಡ ಅವರು ನಮ ಜಿಲ್ಲೆಯವರು. ಅವರ ಬಗ್ಗೆ ಸಂತಾಪ ಸೂಚಿಸಿ ಮಾತನಾಡಲು ಅವಕಾಶ ನೀಡಬೇಕಿತ್ತು ಎಂದರು.
ಇಂದು ಮತ್ತು ನಾಳೆ ಎರಡೇ ದಿನ ಅವಕಾಶ ಇರುವುದು ಶಾಸಕರು ಅರ್ಥ ಮಾಡಿಕೊಳ್ಳಬೇಕೆಂದು ಸಭಾಧ್ಯಕ್ಷರು ಹೇಳಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ, ಇಂತಹ ವಿಚಾರದಲ್ಲಿ ಆಯಾ ಕ್ಷೇತ್ರದ ಶಾಸಕರಿಗೆ ಅವಕಾಶ ಕೊಡುವುದು ಸೂಕ್ತ ಎಂದು ಸಲಹೆ ಮಾಡಿದರು. ಅದಕ್ಕೆ ಸಭಾಧ್ಯಕ್ಷರು ಸಮತಿಸಿದರು.