ವಾಷಿಂಗ್ಟನ್,ಫೆ.19-ಅಮೆರಿಕದ ಟ್ರಂಪ್ ಆಡಳಿತವು ಅಮೆರಿಕಕ್ಕೆ ಏಕಾಂಗಿಯಾಗಿ ಪ್ರವೇಶಿಸುವ ಮಕ್ಕಳಿಗೆ ವಲಸೆ ನ್ಯಾಯಾಲಯದಲ್ಲಿ ತನ್ನ ಕಾನೂನು ಪ್ರಾತಿನಿಧ್ಯ ಬೆಂಬಲವನ್ನು
ಮಂಗಳವಾರ ಸ್ಥಗಿತಗೊಳಿಸಿದೆ.
ಇದರಿಂದ ವಕೀಲರನ್ನು ನೇಮಿಸಿಕೊಳ್ಳುವ ಸಾಮರ್ಥ್ಯವಿಲ್ಲದ, ಗಡೀಪಾರು ಕ್ರಮದ ವಿರುದ್ದ ಹೋರಾಡುತ್ತಿರುವವರಿಗೆ ಹಿನ್ನಡೆಯಾಗಿದೆ. ತನ್ನ ಫೆಡರಲ್ ಗುತ್ತಿಗೆಯಡಿ 26000 ವಲಸಿಗೆ ಮಕ್ಕಳಿಗೆ ಸೇವೆ ಒದಗಿಸುತ್ತಿರುವುದಾಗಿ ಅಕೇಸಿಯಾ ಸೆಂಟರ್ ಫಾರ್ ಜಸ್ಟೀಸ್ ಹೇಳಿದೆ.
ಈ ಕ್ರಮವನ್ನು ನಮ್ಮ ನಿಯಂತ್ರಣಕ್ಕೆ ಮೀರಿದ ಕಾರಣಗಳಿಂದಾಗಿ ಕೈಗೊಳ್ಳಬೇಕಾಗಿದೆ ಎಂದು ಒಳಾಡಳಿತ ಇಲಾಖೆಯು ತಿಳಿಸಿದೆ. ಮುಂದಿನ ಸೂಚನೆವರೆಗೆ ಈ ಆದೇಶವು ಜಾರಿಯಲ್ಲಿರುತ್ತದೆ ಎಂದು ಅದು ನುಡಿದಿದೆ.
ಪೋಷಕರಿಲ್ಲದ ವಲಸಿಗ ಮಕ್ಕಳ ಕಾನೂನು ವಿಚಾರಗಳ ಮೇಲುಸ್ತುವಾರಿ ಹೊಂದಿರುವ ಒಳಾಡಳಿತ ಇಲಾಖೆ ಮತ್ತು ಆರೋಗ್ಯ ಹಾಗೂ ಮಾನವ ಸೇವೆಗಳ ಇಲಾಖೆಯು ತತ್‌ಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.
18 ವರ್ಷಗಳೊಳಗಿನ ಮಕ್ಕಳನ್ನು ಪ್ರತಿನಿಧಿಸುವ ರಾಷ್ಟ್ರದಾದ್ಯಂತದ 85 ಸಂಘ ಸಂಸ್ಥೆಗಳ ಕಾರ್ಯಜಾಲದ ಮೂಲಕ ಕಾನೂನು ಪ್ರಕ್ರಿಯೆ ಮುನ್ನಡೆಸುವುದಾಗಿ ಆಕೇಸಿಯಾ ತಿಳಿಸಿದೆ.