Friday, November 22, 2024
Homeಜಿಲ್ಲಾ ಸುದ್ದಿಗಳು | District Newsಹೇಮಾವತಿ ಲಿಂಕ್‌ ಕೆನಾಲ್‌ ವಿರೋಧಿಸಿ ತುಮಕೂರು ಬಂದ್‌ ಯಶಸ್ವಿ

ಹೇಮಾವತಿ ಲಿಂಕ್‌ ಕೆನಾಲ್‌ ವಿರೋಧಿಸಿ ತುಮಕೂರು ಬಂದ್‌ ಯಶಸ್ವಿ

ತುಮಕೂರು, ಜೂ.25- ಜಿಲ್ಲೆಯ ಪಾಲಿನ ಹೇಮಾವತಿ ನೀರನ್ನು ಪ್ರತ್ಯೇಕ ಎಕ್‌್ಸಪ್ರೆಸ್‌‍ ಲಿಂಕ್‌ ಕೆನಾಲ್‌ ಮೂಲಕ ರಾಮನಗರ ಜಿಲ್ಲೆಗೆ ಕೊಂಡೊಯ್ಯುವ ಯೋಜನೆ ವಿರೋಧಿಸಿ ಇಂದು ಕರೆ ನೀಡಿದ್ದ ಜಿಲ್ಲಾ ಬಂದ್‌ ಬಹುತೇಕ ಯಶಸ್ವಿಯಾಗಿ ನಡೆಯಿತು.ವಿವಿಧ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳು, ಮಹಿಳಾ ಸಂಘಟನೆಗಳು ಹಾಗೂ ಬಿಜೆಪಿ-ಜೆಡಿಎಸ್‌‍ ಜಿಲ್ಲಾ ಘಟಕಗಳು ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದವು.

ಬಹುತೇಕ ಅಂಗಡಿಗಳನ್ನು ಬಂದ್‌ ಮಾಡಿ ವರ್ತಕರು ಸ್ವಯಂಪ್ರೇರಿತವಾಗಿ ಬೆಂಬಲ ಸೂಚಿಸಿದರು. ಅಗತ್ಯ ಸೇವೆಗಳು ಎಂದಿನಂತೆ ಇದ್ದವು. ಜನರ ಓಡಾಟ ಹಾಗೂ ವಾಹನಗಳ ಸಂಚಾರ ವಿರಳವಾಗಿತ್ತು.

ನಗರದ ಟೌನ್‌ಹಾಲ್‌ ವೃತ್ತದ ಬಳಿ ಹೋರಾಟ ಸಮಿತಿ ಸದಸ್ಯರು, ರೈತರು, ಸಂಘ ಸಂಸ್ಥೆಗಳು, ಕಾರ್ಯಕರ್ತರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಸಮಾವೇಶಗೊಂಡು ಖಾಲಿ ಕೊಡಗಳನ್ನು ಹಿಡಿದು ಮಾನವ ಸರಪಳಿ ನಿರ್ಮಿಸಿ, ಉರುಳುಸೇವೆ ಮಾಡಿ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಮುಖಂಡರು ಸಹ ಖಾಲಿ ಕೊಡಗಳನ್ನು ಪ್ರದರ್ಶಿಸಿ ರಕ್ತಕೊಟ್ಟೆವು, ಹೇಮಾವತಿ ಬಿಡೆವು ಎಂಬ ಘೋಷವಾಕ್ಯದೊಂದಿಗೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಬಾರದೆಂದು ಆಕ್ರೋಶ ಹೊರಹಾಕಿದವು.

ಈ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಜಿಲ್ಲೆಯಾದ್ಯಂತ ಶಾಂತಿಯುತ ಬಂದ್‌ಗೆ ಕರೆ ಕೊಟ್ಟಿದ್ದೆವು. ಅದರಂತೆ ಹೇಮಾವತಿ ನಾಲಾ ವಲಯದ ತಾಲ್ಲೂಕು ವಲಯದಲ್ಲಿ ಬಂದ್‌ ಯಶಸ್ವಿಯಾಗಿದೆ.ನಮ ನೀರು, ನಮ ಹಕ್ಕು ಘೋಷಣೆಯಡಿಯಲ್ಲಿ ಹೋರಾಟ ರೂಪಿಸಿದ್ದೇವೆ.

ಉಪಮುಖ್ಯಮಂತ್ರಿಗಳು ಮಾಗಡಿ ಹಾಗೂ ರಾಮನಗರಕ್ಕೆ ನೀರು ಕೊಡಲು ಪೈಪ್‌ಲೈನ್‌ ಪ್ರಾರಂಭ ಮಾಡಿದ್ದಾರೆ. ಇದರಿಂದ ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ, ಕೊರಟಗೆರೆ, ತುಮಕೂರು ಗ್ರಾಮಾಂತರ ಹಾಗೂ ನಗರಕ್ಕೆ ನೀರಿನ ಸಮಸ್ಯೆ ಉಂಟಾಗಲಿದೆ. ಕಾಮಗಾರಿ ನಿಲ್ಲಿಸುವವರೆಗೂ ನಮ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.

ಬಿ.ಎಚ್‌.ರಸ್ತೆ, ಎಂ.ಜಿ.ರಸ್ತೆ, ಹೊರಪೇಟೆ, ರಾಮಪ್ಪ ವೃತ್ತ, ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆ ಮೂಲಕ ಪ್ರತಿಭಟನಾ ರ್ಯಾಲಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಿದ ಪ್ರತಿಭಟನಾಕಾರರು ಡಿಸಿ ಮುಖಾಂತರ ರಾಜ್ಯಪಾಲರಿಗೆ ಯೋಜನೆಯನ್ನು ರದ್ದುಗೊಳಿಸುವಂತೆ ಮನವಿ ಸಲ್ಲಿಸಿದರು.

ಈ ಹೋರಾಟಕ್ಕೆ ಜಿಲ್ಲಾ ವರ್ತಕರು, ಹಮಾಲಿಗಳ ಸಂಘ, ರೈಸ್‌‍ಮಿಲ್‌ ಮಾಲೀಕರು, ಚಿತ್ರಮಂದಿರ ಮಾಲೀಕರು, ಖಾಸಗಿ ಬಸ್ಸು, ಟೆಂಪೊ ಮಾಲೀಕರು ಸೇರಿದಂತೆ ವಿವಿಧ ಸಂಘದವರು ಬೆಂಬಲ ಸೂಚಿಸಿದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ-ಕಾಲೇಜುಗಳಿಗೆ ಯಾವುದೇ ರಜೆ ನೀಡಿರಲಿಲ್ಲ. ಎಂದಿನಂತೆ ತರಗತಿಗಳು ನಡೆದವು. ನಗರದಲ್ಲಿ ಬಸ್ಸು, ಆಟೋಗಳ ಸಂಚಾರ ಮಾಮೂಲಿಯಾಗಿತ್ತು. ನಾಡು-ನುಡಿ-ಜಲದ ವಿಚಾರದಲ್ಲಿ ಆಟೋ ಚಾಲಕರು ಮುಂಚೂಣಿಯಲ್ಲಿದ್ದು, ಇಂದೂ ಕೂಡ ಹೇಮಾವತಿ ನೀರಿಗಾಗಿ ನಗರದ ಆಟೋ ಚಾಲಕರು ಧ್ವನಿಯೆತ್ತಿ ಬಂದ್‌ನಲ್ಲಿ ಭಾಗವಹಿಸಿದ್ದರು.

ಹೇಮಾವತಿ ನಾಲಾ ವಲಯದ ಗುಬ್ಬಿ, ಚಿಕ್ಕನಾಯಕನಹಳ್ಳಿ, ತುಮಕೂರು, ತುರುವೇಕೆರೆ, ಗ್ರಾಮಾಂತರ ಕ್ಷೇತ್ರಗಳಲ್ಲೂ ಸಹ ಪ್ರತಿಭಟನೆ ನಡೆಯಿತು.ತುರುವೇಕೆರೆಯಲ್ಲಿ ತಾಲೂಕು ರೈತ ಸಂಘ, ಹಸಿರು ಸೇನೆ ಮತ್ತು ಪ್ರಗತಿಪರ ಸಂಘಟನೆಗಳು ರೈತರೊಂದಿಗೆ ಬಂದ್‌ ನಡೆಸಿದವು. ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್‌ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತುಮಕೂರಿನಲ್ಲಿ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಸದಾಶಿವಯ್ಯ, ಮಹೇಶ್‌, ಪ್ರಭಾಕರ್‌, ಟೂಡಾ ಮಾಜಿ ಅಧ್ಯಕ್ಷ ಶ್ರೀಧರ್‌, ಕನ್ನಡ ಸೇನೆಯ ಧನಿಯಾಕುಮಾರ್‌, ಕರ್ನಾಟಕ ರಕ್ಷಣಾ ವೇದಿಕೆಯ ಅರುಣ್‌ಕುಮಾರ್‌, ರೈತ ಸಂಘದ ಮುಖಂಡರಾದ ಗೋವಿಂದರಾಜು, ಹೋಟೆಲ್‌ ಮಾಲೀಕರ ಸಂಘದ ಗುರುಬಳುಕರಾಯ್‌, ದಲಿತ ಸಂಘಟನೆಯ ನರಸಿಂಹಯ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಅಶೋಕ್‌ ಅವರು ಬಿಗಿ ಪೊಲೀಸ್‌‍ ಬಂದೋಬಸ್ತ್‌ ಕಲ್ಪಿಸಿದ್ದರು. ಬಂದ್‌ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದೆ ಬಹುತೇಕ ಶಾಂತಿಯುತವಾಗಿ ನಡೆಯಿತು.

RELATED ARTICLES

Latest News