ಭದ್ರಾವತಿ, ಜೂ. 12- ಕಳೆದ ಬಾರಿ ಮಳೆಯಿಲ್ಲದೆ ತುಂಗಭದ್ರಾ ಅಚ್ಚುಕಟ್ಟಿನ ಜನ ಸಂಕಷ್ಟ ಅನುಭವಿಸಿದ್ದರು. ಆದರೆ ಈ ಬಾರಿ ನಿರಂತರ ಮಳೆ ಬೀಳುತ್ತಿರುವುದು ಜನರಲ್ಲಿ ಸಂತಸ ಮೂಡಿಸಿದೆ. ಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಮತ್ತೊಂದೆಡೆ ತುಂಗ ಜಲಾಶಯ ಬಹುತೇಕ ಭರ್ತಿಯಾಗಿದೆ.
ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟಿನ ಜನರಲ್ಲಿ ಈ ಬಾರಿ ಮಳೆ ಖುಷಿ ತರಿಸಿದೆ. ಕಳೆದ ಬಾರಿ ಕೃಷಿಗೆ, ಭತ್ತಕ್ಕೆ ನೀರಿಲ್ಲದೆ ಕಂಗೆಟ್ಟಿದ್ದ ರೈತರು ಈ ಬಾರಿ ಮಳೆಯಿಂದ ಸಂತಸಗೊಂಡಿದ್ದಾರೆ.
ಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ 2911 ಕ್ಯೂಸೆಕ್ಸ್ ಗೆ ಏರಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ಒಳಹರಿವಿನ ಪ್ರಮಾಣ 400 ರಿಂದ 500 ಕ್ಯೂಸೆಕ್ಸ್ ಮಾತ್ರ ಇತ್ತು. ಸೋಮವಾರ ಬೆಳಿಗ್ಗೆ 642 ಕ್ಯೂಸೆಕ್ಸ್ ಗೆ ಏರಿಕೆಯಾಗಿ ನಿನ್ನೆ ಬೆಳಿಗ್ಗೆ ಹೊತ್ತಿಗೆ 2911 ಕ್ಯೂಸೆಕ್‌್ಸಗೆ ತಲುಪಿತ್ತು.
ಮಳೆ ಮತ್ತಷ್ಟು ಹೆಚ್ಚಾದರೆ ಒಳಹರಿವು ಕೂಡ ಹೆಚ್ಚಾಗಲಿದೆ. ಜಲಾಶಯದ ನೀರಿನ ಸಂಗ್ರಹದ ಪ್ರಮಾಣವೂ ಕೂಡ ಹೆಚ್ಚಾಗಲಿದೆ.ಮಲೆನಾಡು ಭಾಗದ ಬಾಳೆಹೊನ್ನೂರು, ಕಳಸ, ಮೂಡಿಗೆರೆ ಭಾಗದಲ್ಲಿ ಮಳೆ ನಿರಂತರವಾಗಿ ಸುರಿದರೂ ಪ್ರತಿದಿನ 15 ರಿಂದ 20 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತದೆ.
186 ಅಡಿ ಗರಿಷ್ಠ ಮಟ್ಟದ ಈ ಜಲಾಶಯಕ್ಕೆ ಮಲೆನಾಡಿಗಿಂತ ಹೆಚ್ಚಾಗಿ ಬಯಲುಸೀಮೆಯ ಜೀವನಾಡಿಯಾಗಿದೆ. ಹಾಗಾಗಿ ಕೃಷಿ ಅಚ್ಚುಕಟ್ಟು ಪ್ರದೇಶವಿರುವ ದಾವಣಗೆರೆ ಭದ್ರಾ ಮೇಲ್ದಂಡೆ ಯೋಜನೆ ಅವಲಂಬಿಸಿರುವ ಚಿತ್ರದುರ್ಗ ಸೇರಿ ತುಂಗಭದ್ರಾ ಡ್ಯಾಂನಿಂದ ಉಪಯೋಗ ಪಡೆಯುವ ಎಲ್ಲಾ ಬಯಲುಸೀಮೆ ಜನರು ಜಲಾಶಯ ಭರ್ತಿಗಾಗಿ ಎದುರು ನೋಡುತ್ತಿದ್ದಾರೆ. ಕಳೆದ ಬಾರಿ ಸಂಕಷ್ಟ ಅನುಭವಿಸಿದ್ದ ಜನತೆಗೆ ಆರಂಭಿಕವಾಗಿ ಮಳೆ ಹೆಚ್ಚಾಗಿರುವುದು ಸಹಜವಾಗಿ ಖುಷಿ ತಂದಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ತುಂಗ ಜಲಾಶಯ ತುಂಬಲು ಕೇವಲ 1 ಅಡಿ ಮಾತ್ರ ಬಾಕಿ ಇದೆ.ಯಾವ ಕ್ಷಣದಲ್ಲಾದರೂ ನದಿಗೆ ನೀರು ಹರಿಸಿದರೆ ಜಿಲ್ಲೆಯ ನ್ಯಾಮತಿ, ಹೊನ್ನಾಳಿ, ಹರಿಹರ, ಹರಪನಹಳ್ಳಿ ತಾಲ್ಲೂಕುಗಳ ನದಿ ಭಾಗದ ಹಳ್ಳಿಗಳಿಗೆ ಜೀವಕಳೆ ಬರಲಿದೆ.
ಕಳೆದ ಬಾರಿ ಮಳೆಯಿಲ್ಲದೆ ಜಲಾಶಯ ಭರ್ತಿಯಾಗಿರಲಿಲ್ಲ. ಬೇಸಿಗೆ ಬೆಳೆಗಳಿಗೆ ನೀರಿರಲಿಲ್ಲ. ತೋಟಗಾರಿಕೆ ಬೆಳೆಗಳಿಗೆ ನೀರು ಸಿಗದೆ ರೈತರು ನೀರಿಗಾಗಿ ಪ್ರತಿಭಟನೆ ನಡೆಸಿದ್ದರು.