Friday, April 4, 2025
Homeರಾಜ್ಯತುಂಡಾದ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಕೊಂಡಿ, ಆತಂಕದಲ್ಲಿ ಜನ

ತುಂಡಾದ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಕೊಂಡಿ, ಆತಂಕದಲ್ಲಿ ಜನ

ಕೊಪ್ಪಳ,ಆ.11- ತಾಲ್ಲೂಕಿನ ಮುನಿರಾಬಾದ್‌ ಬಳಿಯಿರುವ ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್‌ಗೇಟ್‌ ಕೊಂಡಿ ತುಂಡಾಗಿ ಭಾರಿ ಪ್ರಮಾಣದ ನೀರು ನದಿಗೆ ಹರಿದುಹೋಗುತ್ತಿದ್ದು, ನದಿಪಾತ್ರದ ಜನರಲ್ಲಿ ಆತಂಕ ಹೆಚ್ಚಾಗಿದೆ.ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ನ ಚೈನ್‌ಲಿಂಕ್‌ ತುಂಡಾದ ಪರಿಣಾಮ ಸುಮಾರು 35 ಸಾವಿರ ಕ್ಯೂಸೆಕ್‌ ನೀರು ಹರಿದುಹೋಗುತ್ತಿದ್ದು, ನದಿಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ.


ರಾತ್ರೋರಾತ್ರಿ ಕ್ರಸ್ಟ್‌ಗೇಟ್‌ ತುಂಡಾಗಿ ಭಾರಿ ಪ್ರಮಾಣದ ನೀರು ನದಿಗೆ ಹರಿದುಬರುತ್ತಿರುವ ಪರಿಣಾಮ ಹಂಪೆಯ ಸಾರಕಗಳು ಜಲಾವೃತಗೊಂಡಿವೆ.ನದಿಪಾತ್ರದಲ್ಲಿರುವ ಹೊಲಗದ್ದೆಗಳು ಜಲಮಯವಾಗಿವೆ. ನಿನ್ನೆ ರಾತ್ರಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್‌ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ್‌ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, 19ನೇ ಗೇಟ್‌ನ ವಾಸ್ತವ ಪತ್ತೆ ಹಚ್ಚಲು ಮತ್ತು ದುರಸ್ಥಿ ಮಾಡಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ದುರಸ್ಥಿ ಮಾಡಬೇಕಾದರೆ ಜಲಾಶಯದ 65 ಟಿಎಂಸಿ ನೀರನ್ನು ಖಾಲಿ ಮಾಡಬೇಕಾಗುತ್ತದೆ. 120 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಅರ್ಧದಷ್ಟು ನೀರನ್ನು ಖಾಲಿ ಮಾಡಲೇಬೇಕಾದ ಅನಿವಾರ್ಯತೆ ಇದೆ. 1633 ಅಡಿ ನೀರಿನಲ್ಲಿ 20 ರಿಂದ 25 ಅಡಿಯಷ್ಟು ನೀರನ್ನು ಖಾಲಿ ಮಾಡಿ ಹೊರಗೆ ಬಿಡಬೇಕು. 19ನೇ ಗೇಟ್‌ನಲ್ಲಿ 35 ಕ್ಯೂಸೆಕ್‌ ನೀರು ಹೋಗುತ್ತಿದ್ದು, ಉಳಿದ 30 ಗೇಟ್‌ಗಳಿಂದ ಒಟ್ಟು ಒಂದು ಲಕ್ಷ ಕ್ಯೂಸೆಕ್‌ ನೀರು ಹೊರಗೆ ಹರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಘಟನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರಲಾಗಿದೆ. ಅವರೂ ಕೂಡ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ತಕ್ಷಣವೇ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಜಲಾಶಯದಿಂದ ಅಪಾರ ಪ್ರಮಾಣದ ನೀರು ಖಾಲಿ ಮಾಡುವುದರಿಂದ ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕೂಡ ಎದುರಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೊಡ್ಡ ಪ್ರಮಾಣದಲ್ಲಿ ನೀರು ಹೊರಹೋಗುತ್ತಿರುವುದರಿಂದ 20 ಅಡಿಯಷ್ಟು ನೀರು ಖಾಲಿಯಾದಾಗ ಮಾತ್ರ ಗೇಟ್‌ ಏನಾಗಿದೆ ಎಂದು ನೋಡಲು ಸಾಧ್ಯ. ಗೇಟ್‌ ಚೈನ್‌ ಲಿಂಕ್‌ ಪೂರ್ಣ ತುಂಡಾಗಿರುವುದರಿಂದ ಗೇಟ್‌ ಎಲ್ಲಿದೆ ಎಂಬುದು ಗೊತ್ತಾಗುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ಇಂಜಿನಿಯರ್‌ಗಳು ಜಲಾಶಯ ಕಟ್ಟುವಾಗ ಇದ್ದಂತಹ ವಿನ್ಯಾಸಗಾರರ ಹತ್ತಿರವೂ ಡ್ಯಾಂ ನೀಲನಕ್ಷೆ ತರಿಸುತ್ತಿದ್ದೇವೆ. ತಜ್ಞರು ಹಾಗೂ ಅಣೆಕಟ್ಟೆಯ ವಿನ್ಯಾಸದ ನೀಲನಕ್ಷೆ ಬಂದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.

ಒಂದೇ ಬಾರಿಗೆ ನೀರನ್ನು ಅಣೆಕಟ್ಟೆಯಿಂದ ಹೊರಬಿಟ್ಟರೆ ಅಕ್ಕಪಕ್ಕದ ಹಳ್ಳಿಗಳಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ ಎಂದರು.

ಸದ್ಯ ಇರುವ ಮಾಹಿತಿ ಇರುವ ಪ್ರಕಾರ, 2.35 ಲಕ್ಷ ಕ್ಯೂಸೆಕ್‌ವರೆಗೆ ನೀರು ಬಿಡಬಹುದು. ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಹಳ್ಳಿಗಳು ಮುಳುಗುವುದಿಲ್ಲ. ಸ್ವಲ್ಪ ಮಟ್ಟಿಗೆ ಬೆಳೆಹಾನಿ ಆಗಬಹುದು. ಅಧಿಕ ನೀರು ಬಿಡುಗಡೆಯಾದರೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಬರದಿಂದ ತತ್ತರಿಸುತ್ತಿರುವ ಜನಕ್ಕೆ ಮಳೆ ಬಂದು ಸಂತಸವಾಗಿತ್ತು. ಜಲಾಶಯ ತುಂಬಿದ್ದರಿಂದ ಈ ಭಾಗದ ಜನ ಸಹಜವಾಗಿಯೇ ಖುಷಿಯಾಗಿದ್ದರು. ಬೆಳೆಗಳಿಗೆ, ಜನ-ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂಬ ನಿರೀಕ್ಷೆಯಿತ್ತು.

ಆದರೆ ರಾತ್ರೋರಾತ್ರಿ ಕ್ರಸ್ಟ್‌ಗೇಟ್‌ನ ಚೈನ್‌ಲಿಂಕ್‌ ತುಂಡಾಗಿ ನೀರು ಹರಿದುಹೋಗುತ್ತಿರುವುದು ಮತ್ತು ಇದನ್ನು ದುರಸ್ಥಿ ಮಾಡಲು ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ನೀರನ್ನು ಅನಗತ್ಯವಾಗಿ ಹೊರಬಿಡಬೇಕಾದ ಸನ್ನಿವೇಶ ಸೃಷ್ಟಿಯಾಗುವುದರಿಂದ ಮುಂದೆ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

69 ವರ್ಷಗಳ ಹಿಂದೆ ನಿರ್ಮಿಸಲಾದ ಅಣೆಕಟ್ಟೆ ಚೈನ್‌ಲಿಂಕ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದಾಗಿ ತುಂಡಾಗಿದೆ. ಈ ಬಾರಿ ಉತ್ತಮ ಮಳೆಯಿಂದಾಗಿ ಜಲಾಶಯ ತುಂಬಿ ತುಳುಕುತ್ತಿದೆ. ಆದರೆ ಆ ನೀರನ್ನು ಹಿಡಿದಿಟ್ಟುಕೊಳ್ಳುವಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬ ಟೀಕೆಗಳು ಕೇಳಿಬಂದಿವೆ.

RELATED ARTICLES

Latest News