ನವದೆಹಲಿ,ಏ.29– ಜಮ್ಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಳಸಿದ್ದು,ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಯುದ್ದ ಸಂಭವಿಸಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸಲು ಟರ್ಕಿ ತಿರಸ್ಕರಿಸಿದೆ.
ಈ ಬೆಳವಣಿಗೆಯಿಂದಾಗಿ ಯುದ್ಧೋತ್ಸಾಹ ತೋರುತ್ತಿರುವ ಪಾಕಿಸ್ತಾನಕ್ಕೆ ಭಾರೀ ಹಿನ್ನಡೆಯುಂಟಾಗಿದೆ.ಭಾರತದೊಂದಿಗಿನ ಯುದ್ಧದ ಭೀತಿ ನಡುವೆಯೇ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವುದಿಲ್ಲ ಎಂದು ಟರ್ಕಿ ಹೇಳಿದೆ.
ಪಾಕಿಸ್ತಾನಕ್ಕೆ ಆರು ಶಸ್ತ್ರಾಸ್ತ್ರ ವಿಮಾನಗಳನ್ನು ಟರ್ಕಿ ಕಳುಹಿಸಿದೆ ಎಂಬ ಹೇಳಿಕೆಯನ್ನು ಪಾಕ್ ಅಧ್ಯಕ್ಷೀಯ ಸಂವಹನ ನಿರ್ದೇಶನಾಲಯ ನಿರಾಕರಿಸಿದೆ. ಟರ್ಕಿಯಿಂದ ಬಂದ ಸರಕು ವಿಮಾನವು ಇಂಧನ ತುಂಬಿಸಲು ಪಾಕಿಸ್ತಾನದಲ್ಲಿ ಇಳಿಯಿತು. ನಂತರ ಅದು ತನ್ನ ಮಾರ್ಗದಲ್ಲಿ ಮುಂದುವರಿಯಿತು.
ಅಧಿಕೃತ ಸಂಸ್ಥೆಗಳು ಬಿಟ್ಟು ಬೇರೆ ಯಾರಿಂದಲಾದರೂ ಊಹಾತ್ಮಕ ಹೇಳಿಕೆಗಳು, ಸುದ್ದಿಗಳು ಬಂದರೆ ಅವುಗಳನ್ನು ಪರಿಗಣಿಸಬಾರದು ಎಂದು ಟರ್ಕಿ ರಕ್ಷಣಾ ಸಚಿವಾಲಯ ತಿಳಿಸಿದೆ. ಟರ್ಕಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದೆ ಎಂದು ಹಲವಾರು ಸುದ್ದಿವಾಹಿನಿಗಳು ವರದಿ ಮಾಡಿದ್ದವು. ಬಳಿಕ ಟರ್ಕಿ ಸರಕು ವಿಮಾನದ ಚಿತ್ರವನ್ನು ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದೆ.
ಟರ್ಕಿಯಲ್ಲಿ ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಭಾರತವು ಸಾಕಷ್ಟು ಸಹಾಯ ಮಾಡಿತ್ತು ಆದರೆ, ಭಾರತದ ರಕ್ತ ಹರಿಸಲು ಟರ್ಕಿಯು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ ಎನ್ನವ ವಿಚಾರ ಎಲ್ಲೆಡೆ ಹರಿದಾಡಿತ್ತು.
ಶಸ್ತ್ರಾಸ್ತ್ರಗಳನ್ನು ಹೊತ್ತ ಟರ್ಕಿಶ್ ವಾಯುಪಡೆಯ ಸಿ -130 ಹಕ್ರ್ಯುಲಸ್ ಮಿಲಿಟರಿ ಸಾರಿಗೆ ವಿಮಾನ ಭಾನುವಾರ ಕರಾಚಿಗೆ ಬಂದಿಳಿದಿತ್ತು ಎನ್ನಲಾಗಿತ್ತು, ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಟರ್ಕಿ, ನಾವು ಯಾವುದೇ ಶಸ್ತ್ರಾಸ್ತ್ರಗಳನ್ನು ಕಳುಹಿಸಿಲ್ಲ.ಟರ್ಕಿಯಿಂದ ಹೊರಟ ಸರಕು ವಿಮಾನ ಇಂಧನ ತುಂಬಲು ಪಾಕಿಸ್ತಾನದಲ್ಲಿ ಇಳಿದಿತ್ತು, ಯಾವುದೇ ಊಹಾಪೋಹಗಳಿಗೂ ಕಿವಿಗೊಡಬೇಡಿ ಎಂದು ಹೇಳಿದೆ.
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಅಂಕಾರಾ ಖಂಡಿಸಿತ್ತು. ಈ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದರು, ಅನೇಕರು ಗಾಯಗೊಂಡಿದ್ದರು. ಜಮು ಮತ್ತು ಕಾಶ್ಮೀರದ ಮುಸ್ಲಿಂ ಬಹುಸಂಖ್ಯಾತ ಪ್ರದೇಶವು ಬಹಳ ಹಿಂದಿನಿಂದಲೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಕಹಿ ಪ್ರಾದೇಶಿಕ ವಿವಾದದ ಕೇಂದ್ರಬಿಂದುವಾಗಿದೆ. ಪರಮಾಣು ಶಸ್ತ್ರಸಜ್ಜಿತ ಪ್ರತಿಸ್ಪರ್ಧಿಗಳ ನಡುವಿನ ಸಂಬಂಧಗಳು ಹದಗೆಟ್ಟಿದೆ. ಸಂಭಾವ್ಯ ಮಿಲಿಟರಿ ಕ್ರಮದ ಬಗ್ಗೆ ಕಳವಳ ಹುಟ್ಟುಹಾಕಿದೆ.