ಚೆನ್ನೈ, ಅ.9- ತಮಿಳುನಾಡಿನ ಖ್ಯಾತ ನಟ ಕಮ್ ರಾಜಕಾರಣಿ ದಳಪತಿ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಕರೂರು ಕಾಲ್ತುಳಿತ ಸಂಭವಿಸಿದ ಕೆಲ ದಿನಗಳ ಬಳಿಕ ನಟ-ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ಚೆನ್ನೈ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ.
ಕರೂರ್ ಜಿಲ್ಲೆಯಲ್ಲಿ ನಡೆದ ಟಿವಿಕೆ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ಹಲವರು ಗಾಯಗೊಂಡ ನಂತರ ವಿಜಯ್ ವಿರುದ್ಧ ಟೀಕೆಗಳು ಕೇಳಿಬರುತ್ತಿರುವ ನಡುವೆಯೇ ಈ ಕರೆ ಬಂದಿರುವುದು ವಿಶೇಷವಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ವಿಜಯ್ ಅವರ ನೀಲಂಕರೈ ನಿವಾಸದ ಸುತ್ತ ಭದ್ರತೆಯನ್ನು ಬಲಪಡಿಸಲಾಗಿದೆ. ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ, ಮತ್ತು ಅಧಿಕಾರಿಗಳು ಕರೆ ಸುಳ್ಳು ಎಂದು ದೃಢಪಡಿಸಿದ್ದಾರೆ.ಈ ಕರೆಯ ಮೂಲವನ್ನು ಪತ್ತೆಹಚ್ಚಲು ಮತ್ತು ವ್ಯಕ್ತಿ ಅಥವಾ ಗುಂಪನ್ನು ಗುರುತಿಸಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ವಿಜಯ್ ಅವರ ಮನೆಯನ್ನು ಗುರಿಯಾಗಿಸಿಕೊಂಡು ಬಂದಿರುವ ಬಾಂಬ್ ಬೆದರಿಕೆಗೂ ಮೊದಲು ಕಳೆದ ಎರಡು ವಾರಗಳಿಂದ ಪ್ರಮುಖ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ವ್ಯಾಪಕ ಬೆದರಿಕೆಗಳು ಬಂದಿವೆ. ಒಂದು ವಾರದ ಹಿಂದೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಬಾಂಬ್ ಬೆದರಿಕೆ ಬಂದಿರುವುದಾಗಿ ವರದಿಯಾಗಿತ್ತು.
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ, ಡಿಎಂಕೆ ಸಂಸದೆ ಕನಿಮೋಳಿ, ನಟಿ ತ್ರಿಶಾ, ಹಾಸ್ಯನಟ ಮತ್ತು ನಟ ಎಸ್.ವಿ. ಶೇಖರ್, ಹಿಂದೂ ಪತ್ರಿಕಾಲಯ ಹಾಗೆಯೇ ಕಮಲಾಲಯದಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಧಾನ ಕಚೇರಿಗಳಿಗೂ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು.