ಬೆಂಗಳೂರು,ಅ.26- ನಾಲ್ಕು ಮಕ್ಕಳ ತಾಯಿ ಯನ್ನು ಕೊಲೆ ಮಾಡಿ ಶವವನ್ನು ಆಟೋದಲ್ಲಿಟ್ಟು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ತಿಲಕನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆ ಪ್ರಕರಣ ಸಂಬಂಧ ಪೇಂಟರ್ ಹಾಗೂ ಆಟೋ ಚಾಲಕನೊಬ್ಬನನ್ನು ಪೊಲೀಸರು ತೀವ್ರ ವಿಚಾರಣೆಗೊಳ ಪಡಿಸಿದ್ದಾರೆ.
ನಾಲ್ಕು ಮಕ್ಕಳ ತಾಯಿ ಸಲಾ(35) ಅವರು ಪತಿಯನ್ನು ತೊರೆದು ಇತ್ತೀಚೆಗೆ ರಾಗಿಗುಡ್ಡದ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಇವರಿಗೆ ಪೈಂಟರ್ ಸುಬ್ರಹಣಿ ಎಂಬಾತ ಪರಿಚಯವಾಗಿ ಸಲುಗೆಯಿಂದ ಇದ್ದರು. ಈ ನಡುವೆ ಮೊನ್ನೆ ರಾತ್ರಿ ಆರೋಪಿಗಳು ಮನೆಯಲ್ಲಿ ಸಲಾ ಅವರನ್ನು ಕೊಲೆ ಮಾಡಿ ಮನೆ ಸಮೀಪದ ರಸ್ತೆ ಬದಿಯಲ್ಲಿ ಸುಮಾರು ಎರಡು ವರ್ಷ ಗಳಿಂದ ನಿಲ್ಲಿಸಿದ್ದ ಆಟೋದಲ್ಲಿ ಶವವಿಟ್ಟು ಪರಾರಿಯಾಗಿದ್ದಾರೆ.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆ ರಸ್ತೆಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ನಡತೆ ವಿಚಾರದಲ್ಲಿ ಜಗಳವಾಗಿ ಈ ಕೊಲೆ ನಡೆದಿದೆ ಎಂದು ಶಂಕಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
