ಘಾಜಿಪುರ/ಲಖನೌ, ಡಿ.24- ಲಕ್ನೋದಲ್ಲಿರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಚಿನ್‌ಹಾಟ್ ಶಾಖೆಯಲ್ಲಿ ನಡೆದ ದರೋಡೆಯಲ್ಲಿ ಭಾಗಿಯಾಗಿದ್ದ ಇಬ್ಬರು ಕ್ರಿಮಿನಲ್‌ಗಳು ಲಕ್ನೋ ಮತ್ತು ಘಾಜಿಪುರ ಪೊಲೀಸರು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ.
ಕಿಸಾನ್ ಪಥ್ ಬಳಿ ಲಕ್ನೋ ಪೊಲೀಸರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ 26 ವರ್ಷದ ಸೋಬಿಂದ್ ಕುಮಾರ್ ಹತನಾಗಿದ್ದರೆ, 28 ವರ್ಷದ ಸನ್ನಿ ದಯಾಲ್ ಅವರನ್ನು ಗಾಜಿಪುರ ಪೊಲೀಸರು ಮತ್ತು ಕಣ್ಗಾವಲು ತಂಡವು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರ ಮೂಲದ ಸೋಬಿಂದ್ ಕುಮಾರ್ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ. ಪೊಲೀಸರಿಗೆ ಸಿಕ್ಕ ಸುಳಿವಿನ ಆಧಾರದ ಮೇಲೆ ಚಿನ್ಹಾಟ್ ಪ್ರದೇಶದ ಲೌಲೈ ಗ್ರಾಮದ ಬಳಿ ಸಂಶಯಾಸ್ಪದ ಎರಡು ವಾಹನಗಳನ್ನು ತಡೆದಾಗ,ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾರೆ.ಎಚ್ಚತ್ತ ಪಡೆ ಪ್ರತಿದಾಳಿ ನಡೆಸಿದಾಗ ಸೋಬಿಂದ್ ಕುಮಾರ್ ಗುಂಡೇಟಿನಿಂದ ಗಾಯಗೊಂಡು ನಂತರ ಸಾವನ್ನಪ್ಪಿದ್ದಾನೆ ಎಂದು ಸಹಾಯಕ ಪೊಲೀಸ್ ಕಮಿಷನರ್ ರಾಧಾ ರಮಣ್ ಸಿಂಗ್ ಅವರು ಹೇಳಿದರು.
ಮೃತ ಆರೋಪಿಯ ಸುಳಿವಿಗೆ 25,000 ರೂ.ಗಳ ಬಹುಮಾನವನ್ನು ಘೋಷಿಸಲಾಗಿತ್ತು ಗಾಜಿಪುರದ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಗಳ ತಂಡ ಮತ್ತು ಗಹ್ಮಾರ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆತ ಹತನಾಗಿದ್ದಾನೆ ಎಮದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ವಾಡಿಕೆಯ ತಪಾಸಣೆಯ ವೇಳೆ ಬಾರಾ ಪೊಲೀಸ್ ಔಟ್‌ಪೋಸ್ಟ್ ಬಳಿ ಮೋಟಾರ್‌ಸೈಕಲ್‌ನಲ್ಲಿ ಇಬ್ಬರು ವ್ಯಕ್ತಿಗಳನ್ನು ನಿಲ್ಲಿಸಲು ಪ್ರಯತ್ನಿಸಿದ ಆದರೆ, ಶಂಕಿತರು ಬಿಹಾರ ಗಡಿಯತ್ತ ಪರಾರಿಯಾಗಲು ಯತ್ನಿಸಿದ್ದಾರೆ. ಬೆನ್ನಟ್ಟಿದ ನಂತರ, ಶಂಕಿತರನ್ನು ಕುತುಬ್‌ಪುರ ಬಳಿ ತಡೆಹಿಡಿಯಲಾಯಿತು, ಅಲ್ಲಿ ಅವರು ತಮ ವಾಹನವನ್ನು ಬಿಟ್ಟು ಪೊಲೀಸರ ಮೇಲೆ ಗುಂಡು ಹಾರಿಸಿದರು.
ನಂತರ ಪೊಲೀಸರು ಆತರಕ್ಷಣೆಗೆ ಹಾರಿಸಿದ ಗುಂಡು ಸನ್ನಿ ದಯಾಲ್‌ಗೆ ತಾಗಿ ಗಾಯಗೊಂಡಿದ್ದ ಆತನ ಜೊತೆ ಇದ್ದ ಮತ್ತೊಬ್ಬ ಶಂಕಿತ ಪರಾರಿಯಾಗಿದ್ದಾನೆ. ಸನ್ನಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಮತ್ತು ನಂತರ ಗಾಜಿಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು, ಅಲ್ಲಿ ಅತ ಸತ್ತಿದ್ದಾನೆ ಎಂದು ಘೋಷಿಸಲಾಯಿತು ಎಂದು ಡಿಜಿಪಿ ಹೇಳಿದರು.
ಆತನ ಬಳಿಯಿದ್ದ 32 ಬೋರ್ ಪಿಸ್ತೂಲ್, 35,500 ರೂಪಾಯಿ ನಗದು ಮತ್ತು ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನ ಚಿನ್ಹಾಟ್ ಶಾಖೆಯಲ್ಲಿ ಭಾನುವಾರ ದರೋಡೆ ನಡೆದಿತ್ತು. ಪಕ್ಕದ ಖಾಲಿ ಜಾಗದಿಂದ ಗೋಡೆಯನ್ನುಕೊರೆದು ಬ್ಯಾಂಕ್ ಒಳಗೆ ನುಗ್ಗಿ ಸುಮಾರು 40 ಲಾಕರ್‌ಗಳನ್ನು ಒಡೆದು ಅದರಲ್ಲಿದ್ದ ಚಿನ್ನ-ಬೆಳ್ಳಿ ನಗದು ಹಣ ಹಾಗು ಬೆಲೆಬಾಳುವ ವಸ್ತುಗಳನ್ನು ದರೋಡೆಕೋರರು ದೋಚಿದ್ದರು.
ಕ್ಷಿಪ್ರ ಕಾರ್ಯಾಚರಣೆಯಲ್ಲಿ ನಿನ್ನೆ ಮುಂಜಾನೆ ಪೊಲೀಸರು ದರೋಡೆಯಲ್ಲಿ ಭಾಗಿಯಾಗಿದ್ದ ಬಿಹಾರ ಮೂಲದ ಅರವಿಂದ್ ಕುಮಾರ್ , ಬಲರಾಮ್ ಮತ್ತು ಕೈಲಾಶ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇತರೆ ಆರೋಪಿಗಳಾದ ಸೋಬಿಂದ್ ಕುಮಾರ್, ಸನ್ನಿ ದಯಾಳ್, ಮಿಥುನ್ ಕುಮಾರ್ ಮತ್ತು ವಿಪಿನ್ ಕುಮಾರ್ ವರ್ಮಾ ಸೇರಿದಂತೆ ನಾಲ್ವರು ಸಹಚರರು ಪರಾರಿಯಾಗಿದ್ದರು.