ಬೆಂಗಳೂರು, ಅ.13-ಡ್ರಾಪ್ ಕೊಡುವ ನೆಪದಲ್ಲಿ ಯುವತಿಯನ್ನು ಪುಸಲಾಯಿಸಿ ಬೈಕ್ನಲ್ಲಿ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ವೆಸಗಿ ಪರಾರಿಯಾಗಿದ್ದ ಇಬ್ಬರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದ ಮೆಕ್ಯಾನಿಕ್ ಸಿಕಂದರ್ಬಾಬಾ (30) ಮತ್ತು ಗುಜರಿ ವ್ಯಾಪಾರಿ ಜನಾರ್ಧನಾಚಾರಿ (31) ಬಂಧಿತ ಆರೋಪಿಗಳು.
ಸಂತ್ರಸ್ತ ಯುವತಿ ಕೆಲಸ ಹುಡುಕಿಕೊಂಡು ಮಂಜೇನಹಳ್ಳಿಯಿಂದ ಚಿಕ್ಕಬಳ್ಳಾಪುರ ನಗರಕ್ಕೆ ಬಂದಿದ್ದಳು. ಬಳಿಕ ವಾಪಸ್ ನಡೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಬೈಕ್ ಸವಾರ ಸಿಕಂದರ್ ಎದುರಾಗಿದ್ದಾನೆ.ಯುವತಿಯನ್ನು ಪುಸಲಾಯಿಸಿ ಡ್ರಾಪ್ಕೊಡುವುದಾಗಿ ಹೇಳಿ ಆಕೆಯನ್ನು ಬೈಕ್ನಲ್ಲಿ ಹತ್ತಿಸಿಕೊಂಡ ಆತ ಮಾರ್ಗಮಧ್ಯೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ವೆಸಗಿದ್ದಾನೆ.
ಬಳಿಕ ಆತ ಚಿಕ್ಕಬಳ್ಳಾಪುರಕ್ಕೆ ಹೋಗಿ ಸ್ನೇಹಿತ ಜನಾರ್ಧನ್ನನ್ನು ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ಬಂದು ಇಬ್ಬರು ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆೆ. ನಂತರ ಆಕೆಯ ಬಂಗಾರದ ಓಲೆ ಕಸಿದುಕೊಂಡು ನಿರ್ಜನ ಪ್ರದೇಶದಿಂದ ಆಕೆಯನ್ನು ಸಮೀಪದಲ್ಲಿದ್ದ ಪೆಟ್ರೋಲ್ ಬಂಕ್ ಬಳಿ ಬಿಟ್ಟು ಹೋಗಿದ್ದಾರೆ.
ಯುವತಿಗೆ ದಿಕ್ಕುತೋಚದಂತಾಗಿ ಯುವತಿ ಅಲ್ಲೇ ಕುಳಿತಿದ್ದಾಳೆ. ಯುವತಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿ ನಂತರ ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಮಹಿಳಾ ಠಾಣೆ ಪೊಲೀಸರು ಆಕೆಯನ್ನು ವಿಚಾರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಇಬ್ಬರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.