ಬೆಂಗಳೂರು,ಸೆ.9- ಮದ್ದೂರು ಪಟ್ಟಣದಲ್ಲಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಬಂದೋಬಸ್ತ್‌ಗಾಗಿ ಸ್ಥಳೀಯ ಪೊಲೀಸರ ಜೊತೆ ಎರಡು ಕಂಪನಿ ಆರ್‌ಎಎಫ್ ನಿಯೋಜನೆ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿಯವರು ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ನಿನ್ನೆ ಈ ಕಂಪನಿಗಳು ಮದ್ದೂರಿಗೆ ಆಗಮಿಸಿದ್ದು, ಪಥಸಂಚಲನ ನಡೆಸಲಾಗಿತ್ತು. ಇಂದು ಸಂಜೆ ಮತ್ತೆ ಪಥಸಂಚಲನ ಮಾಡಲಾಗುವುದು ಎಂದರು.
ಮದ್ದೂರು ಪಟ್ಟಣದಲ್ಲಿ ಇಂದು ಬಂದ್ ಬಹುತೇಕ ಶಾಂತಿಯುತವಾಗಿದೆ. ನಾವು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ. ಘಟನೆ ಸಂಬಂಧ ಈಗಾಗಲೇ ಎರಡು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ ಎಂದು ಹೇಳಿದರು.ಘಟನೆಯಲ್ಲಿ ಐದಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.